ಜಮಖಂಡಿ ತಾಲೂಕಿನ ಸಿದ್ದಾಪುರ ಬಳಿ ಪ್ರಭುಲಿಂಗೇಶ್ವರ ಕಾರ್ಖಾನೆ ಬಳಿ ಸೋಮವಾರ ನಡೆದ ಪ್ರತಿಭಟನೆ ತೀವ್ರಗೊಂಡು, ಯಾರೋ ಕಲ್ಲು ತೂರಿದ್ದರಿಂದ ಕಾರ್ಖಾನೆ ಕಚೇರಿ ಗಾಜುಗಳು ಪುಡಿಪುಡಿಯಾಗಿ ಎಸೆದ ಕಲ್ಲು ಕಚೇರಿ ಒಳಗಿನ ಟೇಬಲ್ ಮೇಲೆ ಬಿದ್ದಿರುವುದು. 
ಬಾಗಲಕೋಟೆ

ಪ್ರಭುಲಿಂಗೇಶ್ವರ ಕಾರ್ಖಾನೆ ಕಚೇರಿ, ವಾಹನಗಳ ಮೇಲೆ ಕಲ್ಲು ತೂರಾಟ

ಪ್ರಮುಖ ಮುಖ್ಯಾಂಶಗಳು

  • ಜಿಲ್ಲೆಯ ವಿವಿಧೆಡೆ ರಸ್ತೆ, ಹೆದ್ದಾರಿ ತಡೆದು ಪ್ರತಿಭಟನೆ
  • ವಿಕೋಪಕ್ಕೆ ತಿರುಗಿದ ಕಬ್ಬು ಬೆಳೆಗಾರರ ಹೋರಾಟ
  • ಹಿಂದಿನ ಬಾಕಿ ಹಾಗೂ ಪ್ರಸಕ್ತ ವರ್ಷ ಬೆಲೆ ನಿರ್ಧಾರಕ್ಕೆ ಆಗ್ರಹ
ಬಾಗಲಕೋಟೆ: ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ಜಿಲ್ಲೆಯಲ್ಲಿ ಸಕ್ಕರೆ ಕಾರ್ಖಾನೆಗಳು ಕಬ್ಬು ಕ್ರಷಿಂಗ್ ಆರಂಭ ಮಾಡಬೇಕಿತ್ತು. ಆದರೆ, ಕಾರ್ಖಾನೆ ಹಾಗೂ ಕಬ್ಬು ಬೆಳೆಗಾರರ ಮುಖಂಡರ ನಡುವೆ ಇನ್ನೂ ಒಮ್ಮತ ಮೂಡದ ಹಿನ್ನೆಲೆಯಲ್ಲಿ ದಿನೇ ದಿನೇ ರೈತರ ಪ್ರತಿಭಟನೆ ಕಾವು ತೀವ್ರವಾಗುವ ಸಾಧ್ಯತೆ ಕಂಡು ಬರುತ್ತಿದೆ.
ಜಿಲ್ಲೆಯ ವಿವಿಧೆಡೆ ಸೋಮವಾರ ಕಬ್ಬು ಬೆಳೆಗಾರರು ರಸ್ತೆ, ರಾಜ್ಯ ಹೆದ್ದಾರಿ ತಡೆ ನಡೆಸಿ, ಪ್ರತಿಭಟನೆ ನಡೆಸಿದ್ದರು. ಸಂಜೆ ವೇಳೆ ಜಮಖಂಡಿ ತಾಲೂಕಿನ ಸಿದ್ದಾಪುರ ಬಳಿ ಇರುವ ಪ್ರಭುಲಿಂಗೇಶ್ವರ ಸಕ್ಕರೆ ಕಾರ್ಖಾನೆ ಬಳಿ ರೈತರ ಹೋರಾಟ ವಿಕೋಪಕ್ಕೆ ತಿರುಗಿದ ಪರಿಣಾಮ ಕಾರ್ಖಾನೆ ಕಚೇರಿ ಹಾಗೂ ಆವರಣದಲ್ಲಿ ನಿಂತಿದ್ದ ವಾಹನಗಳಿಗೆ ಯಾರೋ ಕಲ್ಲು ತೂರಿದ್ದು, ಎರಡು ವಾಹನಗಳು ಹಾಗೂ ಕಚೇರಿಯ ಗಾಜುಗಳು ಪುಡಿಪುಡಿಯಾಗಿವೆ. ದೊಡ್ಡ ದೊಡ್ಡ ಕಲ್ಲುಗಳನ್ನು ಎಸೆದಿದ್ದರಿಂದ ಕಚೇರಿ ಸುತ್ತಲಿನ ಗಾಜು ಒಡೆದು ಕಲ್ಲುಗಳು ಒಳಗೆ ಬಿದ್ದಿರುವ ದೃಶ್ಯ ಕಂಡುಬಂದಿತು.
ಸಕ್ಕರೆ ಕಾರ್ಖಾನೆ ಬಳಿ ಗಲಾಟೆ ವಿಚಾರ ತಿಳಿದು ಸ್ಥಳಕ್ಕೆ ಜಮಖಂಡಿ ಪೊಲೀಸರು ದೌಡಾಯಿಸಿದ್ದು, ಪರಿಶೀಲಿಸಿದರು. ಕಾರ್ಖಾನೆ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.
ಬೆಳಗ್ಗೆ ಜಿಲ್ಲೆಯ ಜಮಖಂಡಿ ತಾಲೂಕಿನ ಚಿಕ್ಕಲಕಿ ಕ್ರಾಸ್ ರೈತರು ರಸ್ತೆ ತಡೆ ನಡೆಸಿ, ಪ್ರತಿಭಟನೆ ನಡೆಸಿದರು. ಜಮಖಂಡಿ ಹಾಗೂ ಮುಧೋಳ ಭಾಗದ ಕಬ್ಬು ಬೆಳೆಗಾರರು ಸೇರಿಕೊಂಡು ಹೋರಾಟ ನಡೆಸಿ, ತಮ್ಮ ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಎಚ್ಚರಿಸಿದರು.
ಮುಧೋಳ ತಾಲೂಕಿನ ಶಿರೋಳ ಬಳಿ ರೈತರು ರಾಜ್ಯ ಹೆದ್ದಾರಿ ತಡೆ ನಡೆಸುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಧಾರವಾಡ- ವಿಜಯಪುರ ರಾಜ್ಯ ಹೆದ್ದಾರಿ ತಡೆ ನಡೆಸಿದ್ದರಿಂದ ವಾಹನ ಸಂಚಾರಕ್ಕೆ ಅಡಚಣೆಯಾಗಿ ಪ್ರಯಾಣಿಕರು ಪರದಾಡುವಂತಾಯಿತು.
ಜಮಖಂಡಿ ತಾಲೂಕಿನ ಚಿಕ್ಕಲಕಿ ಕ್ರಾಸ್‌ನಲ್ಲಿ ಕಬ್ಬು ಬೆಳೆಗಾರರು ರಸ್ತೆ ತಡೆ ಪ್ರತಿಭಟನೆ ನಡೆಸಿದರು.
ಬೀಳಗಿ ಕ್ರಾಸ್‌ನಲ್ಲೂ ಸಹ ಹೆದ್ದಾರಿ ತಡೆ ನಡೆಸುವ ಮೂಲಕ ಕಬ್ಬು ಬೆಳೆಗಾರರು ಪ್ರತಿಭಟನೆ ನಡೆಸಿದರು. ಹುಬ್ಬಳ್ಳಿ- ವಿಜಯಪುರ ಹೆದ್ದಾರಿ ತಡೆ ನಡೆಸಿದ್ದರಿಂದ ಅಲ್ಲೂ ಸಹ ವಾಹನ ಸಂಚಾರಕ್ಕೆ ತೊಂದರೆಯಾಗಿ ಪ್ರಯಾಣಿಕರು ಪರವಾಡಿದರು. ಬಳಿಕ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಬೀಳಗಿ ತಹಸೀಲ್ದಾರ ವಿನೋದ ಹತ್ತಳ್ಳಿ ಅವರಿಗೆ ಮನವಿ ಸಲ್ಲಿಸಿದರು.
ಸರ್ಕಾರದ ಸೂಚನೆಯಂತೆ ಅಕ್ಟೋಬರ್ 20ರಿಂದಲೇ ಕಾರ್ಖಾನೆಗಳು ಕಬ್ಬು ನುರಿಸಲು ಆರಂಭಿಸಬೇಕಿತ್ತು. ಆದರೆ, ಜಿಲ್ಲೆಯಲ್ಲಿ ರೈತರು ಎಫ್‌ಆರ್‌ಪಿ ಬೆಲೆಯ ಮೇಲೆ ಕಾರ್ಖಾನೆಗಳು ಎಷ್ಟು ಹೆಚ್ಚಿನ ಬೆಲೆ ಘೋಷಣೆ ಮಾಡುವಂತೆ ಒತ್ತಾಯ ಮಾಡುತ್ತಲೇ ಇದ್ದಾರೆ. ಜೊತೆಗೆ ಹಿಂದಿನ ವರ್ಷಗಳ ಬಾಕಿ ಹಣವನ್ನು ಪಾವತಿಸಬೇಕು ಎನ್ನುವ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಜಿಲ್ಲಾಧಿಕಾರಿಗಳು ಎರಡ್ಮೂರು ಸಭೆ ನಡೆಸಿದರೂ ಯಾವುದೂ ಒಮ್ಮತಕ್ಕೆ ಬಂದಿಲ್ಲ. ಉಸ್ತುವಾರಿ ಸಚಿವರು ಸಹ ಸಭೆ ನಡೆಸಿದ್ದು, ಅಲ್ಲೂ ಸಹ ಸಭೆ ಯಶಸ್ವಿಯಾಗಿಲ್ಲ. ಸರ್ಕಾರ ಎಫ್‌ಆರ್‌ಪಿ ಬೆಲೆ ಕೊಡುವಂತೆ ಸ್ಪಷ್ಟವಾಗಿ ಹೇಳುತ್ತದೆ. ಹೆಚ್ಚಿನ ಬೆಲೆ ವಿಚಾರವಾಗಿ ರೈತರು ಹಾಗೂ ಕಾರ್ಖಾನೆ ಮಾಲೀಕರು ಪರಸ್ಪರ ಹೊಂದಾಣಿಕೆ ಮಾಡಿಕೊಳ್ಳಬೇಕು ಎನ್ನುವುದು ಸಚಿವರು, ಅಧಿಕಾರಿಗಳ ಇಂಗಿತ. ಪ್ರತಿ ವರ್ಷ ಹಂಗಾಮು ಆರಂಭಕ್ಕೆ ಬೆಲೆ ನಿಗದಿ ವಿಚಾರವಾಗಿ ಪ್ರತಿಭಟನೆಗಳು ನಡೆದ ಬಳಿಕವಷ್ಟೆ ಕಬ್ಬು ಕ್ರಷಿಂಗ್ ಶುರುವಾಗುತ್ತಾ ಬರುತ್ತಿದೆ. ಈ ವರ್ಷವೂ ಮತ್ತದೇ ಹಗ್ಗ ಜಗ್ಗಾಟ ಮುಂದುವರಿದಿದೆ.