ಜಮಖಂಡಿ ನಗರದ ದೇಸಾಯಿ ವೃತ್ತದಲ್ಲಿ ರೈತ ಸಂಘ, ಎಬಿವಿಪಿ, ಕರವೇ ಸಂಘಟನೆಗಳ ಪದಾಧಿಕಾರಿಗಳು ಮುಖಂಡರು ಕಬ್ಬಿಗೆ ಬೆಲೆ ನೀಡುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಿದರು. 
ಬಾಗಲಕೋಟೆ

ಮಾನವ ಸರಪಳಿ, ರಸ್ತೆ ತಡೆದು ರೈತರ ಆಕ್ರೋಶ

ಪ್ರಮುಖ ಮುಖ್ಯಾಂಶಗಳು

  • ಜಮಖಂಡಿಯಲ್ಲಿ ಬೃಹತ್ ಪ್ರತಿಭಟನೆ
  • ಟನ್ ಕಬ್ಬಿಗೆ 3,500 ರೂ. ಬೆಂಬಲ ಬೆಲೆ ನೀಡಲು ಆಗ್ರಹ
  • ದೇಸಾಯಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ಕೆಲಕಾಲ ರಸ್ತೆ ಸಂಚಾರ ತಡೆ
ಜಮಖಂಡಿ: ಪ್ರಸಕ್ತ ಸಾಲಿನಲ್ಲಿ ಟನ್ ಕಬ್ಬಿಗೆ 3,500 ರೂ. ಬೆಲೆ ಘೋಷಣೆ ಮಾಡಿಸಬೇಕು ಎಂದು ಆಗ್ರಹಿಸಿ ರೈತ ಸಂಘ, ಎಬಿವಿಪಿ, ಕರವೇ ಪದಾಧಿಕಾರಿಗಳು ಕಾರ್ಯಕರ್ತರು ನಗರದಲ್ಲಿ ಗುರುವಾರ ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ದೇಸಾಯಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ಕೆಲಕಾಲ ರಸ್ತೆ ಸಂಚಾರ ತಡೆದು, ತಹಸೀಲ್ದಾರ ಅನಿಲ ಬಡಿಗೇರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ರೈತ ಮುಖಂಡ ಸುರೇಶ ಹಂಚನಾಳ ಮಾತನಾಡಿ, ನಮ್ಮ ಜೊತೆ ಇದ್ದು, ರಸ್ತೆಯಲ್ಲಿ ಹೋರಾಟ ಮಾಡಿದವರು ಇಂದು ರಾಜಕಾರಣಿಗಳಾಗಿ ದೊಡ್ದ ಸಕ್ಕರೆ ಕಾರ್ಖಾನೆಯ ಮಾಲೀಕರಾಗಿದ್ದಾರೆ. ಇಂತಹ ಶ್ರೀಮಂತ ದುಷ್ಟರಿಗೆ ಮತ ಹಾಕುವಾಗ ಸರಿಯಾಗಿ ಯೋಚನೆ ಮಾಡಿ ಮತ ನೀಡಬೇಕು. ಅವರು ಈ ದೇಶದ ಬೆನ್ನೆಲುಬಾದ ರೈತನನ್ನು ತುಳಿಯುವ ಕೆಲಸ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು ತಮ್ಮ ಊರುಗಳಲ್ಲಿ ರಸ್ತೆಗಳನ್ನು ಬಂದ್‌ಮಾಡಿ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಕರೆ ನೀಡಿದರು.
ರೈತ ಮುಖಂಡ ರಾಜು ನದ್ಾ ಮಾತನಾಡಿ, ಒಂದು ಟನ್ ಕಬ್ಬಿಗೆ 3,500 ರೂ. ಗಳ ಬೆಲೆ ನೀಡಬೇಕೆಂದು ರಾಜ್ಯಾದ್ಯಂತ ಹೋರಾಟ ನಡೆಯುತ್ತಿದೆ. ಕಾರ್ಖಾನೆ ಮಾಲೀಕರು ಬೆಂಬಲ ಬೆಲೆ ನೀಡಲು ನಿರಾಕರಿಸುತ್ತಿದ್ದಾರೆ. ರಾಜ್ಯ ಸರ್ಕಾರ ಮಧ್ಯಸ್ಥಿಕೆ ವಹಿಸಬೇಕು. ಸಿಎಂ ಸಿದ್ದರಾಮಯ್ಯ ಅವರು ರಾಜ್ಯದ ಜನತೆಗೆ ಅನ್ನರಾಮಯ್ಯ ಆಗಿದ್ದಿರಿ. ಈಗ ರೈತ ರಾಮಯ್ಯ ಎಂದು ಹೆಸರು ತೆಗೆದುಕೊಳ್ಳಬೇಕು. ಅದೇ ರೀತಿ ಕಬ್ಬು ಬೆಳೆಗಾರರಿಗೆ ಬೆಂಬಲ ಬೆಲೆ ನೀಡಬೇಕು ಎಂದು ಒತ್ತಾಯಿಸಿದರು.
ವಿದ್ಯಾರ್ಥಿನಿ ಪ್ರಿಯಾಂಕ ಮಾತನಾಡಿ, ರಾಜ್ಯದಲ್ಲಿ ರೈತರಿಗೆ ದ್ರೋಹವಾಗುತ್ತಿದೆ. ಬೆಳೆದ ಬೆಳೆಗೆ ಪರಿಹಾರ ಸಿಗದೆ. ಬೆಂಬಲ ಬೆಲೆ ನೀಡದ ಕಾರಣ ಮದುವೆ, ಉಪನಯನಕ್ಕೂ ರೈತರ ಮಕ್ಕಳಿಗೆ ಹಣದ ತೊಂದರೆಯಾಗುತ್ತಿದೆ ಎಂದರು.
ಪರಶುರಾಮ ಈಟಿ, ಪ್ರದೀಪ ಮೆಟ್ಟಗುಡ್ಡ, ಅಜಯ ಕುಲಕರ್ಣಿ ಮಾತನಾಡಿದರು. ಕಲ್ಲಪ್ಪ ಬಿರಾದಾರ, ಶ್ರೀಶೈಲ ಭೂಮಾರ, ಸುರೇಶ ಪಾಟೀಲ, ಸದಾಶಿವ ಕವಟಗಿ, ಬಸವರಾಜ ನ್ಯಾಮಗೌಡ, ಸುನೀಲ ಅಡಾಳಟ್ಟಿ, ಮರೆಪ್ಪ ಕಂಕನವಾಡಿ, ಸಿದ್ದಪ್ಪ ಬನಜನವರ, ಕರೆಪ್ಪ ಜಿರಗಾಳ ಇತರರಿದ್ದರು.