ಬಾಗಲಕೋಟೆ: ಸರ್ಕಾರದ ಅನುದಾನದ ಜತೆ ಸ್ಥಳೀಯ ಸಂಪನ್ಮೂಲಗಳನ್ನು ಸಹ ಕ್ರೋಡೀಕರಿಸಿ ಗ್ರಾಮಗಳನ್ನು ಅಭಿವೃದ್ಧಿ ಪಡಿಸಿಕೊಳ್ಳುವಂತೆ ಜಿಲ್ಲಾ ಪಂಚಾಯಿತಿ ಸಿಇಒ ಗಂಗೂಬಾಯಿ ಮಾನಕರ ಸಲಹೆ ನೀಡಿದರು.
ಜಿಲ್ಲಾಡಳಿತದ ಸಭಾ ಭವನದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಅನುಷ್ಠಾನ ಕುರಿತು ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಶುಕ್ರವಾರ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಗಾರದಲ್ಲಿ ಮಾತನಾಡಿದ ಅವರು, ಗ್ರಾಮಗಳ ಅಭಿವೃದ್ಧಿಗಾಗಿ ನರೇಗಾ ಯೋಜನೆಯಡಿ 178 ಕೋಟಿ ರೂ. ಕಾಮಗಾರಿ ಕೈಗೊಳ್ಳಲಾಗುತ್ತಿದ್ದು, ರಾಜ್ಯದಲ್ಲಿ ನಮ್ಮ ಜಿಲ್ಲೆ 7ನೇ ಸ್ಥಾನದಲ್ಲಿದೆ ಎಂದರು.
ಈ ಯೋಜನೆಯಲ್ಲಿ 5044 ಕುರಿದೊಡ್ಡಿ ಹಾಗೂ ದನದೊಡ್ಡಿಗಳಿಗೆ ಅನುಮೋದನೆ ದೊರೆತಿದ್ದು, 2000 ದನದ ದೊಡ್ಡಿಗಳನ್ನು ನಿರ್ಮಾಣ ಮಾಡಲಾಗಿದೆ. 162 ಕೆರೆ ಅಭಿವೃದ್ಧಿ ಕಾಮಗಾರಿ, ಶಾಲಾ ಶೌಚಗೃಹ, ಕಾಂಪೌಂಡ್, ನೆರೆ ಹಾವಳಿಯ ಪ್ರದೇಶದಲ್ಲಿ ಸಿಸಿ ರಸ್ತೆ ನಿರ್ಮಾಣ, ಸ್ಮಶಾನ ಜಾಗಗಳ ಅಭಿವೃದ್ಧಿ, ಕೃಷಿ ಹೊಂಡಗಳ ನಿರ್ಮಾಣ, ಘನ ತ್ಯಾಜ್ಯ ವಸ್ತುಗಳ ವಿಲೇವಾರಿ ಘಟಕಗಳ ಸ್ಥಾಪನೆ ಮಾಡುವ ಮೂಲಕ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದರು.
ತೋಟಗಾರಿಕೆ ಇಲಾಖೆ ವತಿಯಿಂದ ನರೇಗಾ ಯೋಜನೆಯಡಿ ತೋಟಗಾರಿಕೆ ಬೆಳೆಗಳ ಪ್ರದೇಶ ವಿಸ್ತರಣೆ ಕಾರ್ಯಕ್ರಮಕ್ಕೆ ಇಲ್ಲಿಯ ವರೆಗೆ 270 ಲಕ್ಷ ರೂ. ಅನುದಾನ ಬಳಕೆಯಾಗಿದೆ. ಐಇಸಿ ಅಡಿ ಜಲಾಮೃತ, ಸ್ವಚ್ಛ ಮೇವ ಜಯತೆ ಕಾರ್ಯಕ್ರಮದಡಿ ಬಯಲು ಬಹಿರ್ದೆಸೆ ಮುಕ್ತ ಗ್ರಾಮಗಳಲ್ಲಿ 65,000 ಸಸಿಗಳನ್ನು ನೆಡಲಾಗಿದೆ ಎಂದು ತಿಳಿಸಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಸರ್ಕಾರದ ಉದ್ಯೋಗ ಖಾತ್ರಿ ಯೋಜನೆಯ ಸದುಪಯೋಗಗಳ ಕುರಿತು ವಿವಿಧ ಕಲಾ ತಂಡದವರಿಂದ ಜಾನಪದ ಸಂಗೀತ ಹಾಗೂ ಬೀದಿ ನಾಟಕ ಪ್ರದರ್ಶನ ಮಾಡಲಾಯಿತು.
ಜಿಪಂ ಉಪಕಾರ್ಯದರ್ಶಿ ಎ.ಜಿ. ತೋಟದ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಪ್ರಭುರಾಜ ಹಿರೇಮಠ, ಸಹಾಯಕ ಕಾರ್ಯದರ್ಶಿ ಜೆ.ಎಸ್. ಪಟ್ಟಣದ ಉಪಸ್ಥಿತರಿದ್ದರು.