ಜಿಲ್ಲೆ

ಇಬ್ಬರು ಮಹಿಳೆಯರು ಬಲಿ..!

ಬಾಗಲಕೋಟೆ: ಅನುಮಾನ ಮತ್ತು ಅಪಮಾನಕ್ಕೆ ಸಿಕ್ಕು ಜಿಲ್ಲೆಯಲ್ಲಿ ಗುರುವಾರ ರಾತ್ರಿ ಎರಡು ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಮಹಿಳೆಯರು ಬಲಿಯಾಗಿದ್ದಾರೆ.

ಬಾಗಲಕೋಟೆ ತಾಲೂಕಿನ ಗದ್ದನಕೇರಿ ಗ್ರಾಮದಲ್ಲಿ ಅವಮಾನಕ್ಕೆ ಒಳಗಾಗಿ ಮಹಿಳೆ ಒಬ್ಬರು ನೇಣಿಗೆ ಶರಣಾಗಿದ್ದಾರೆ. ಮತ್ತೊಂದೆಡೆ ಅನುಮಾನದ ಪಿಶಾಚಿಗೆ ಬಾದಾಮಿ ತಾಲೂಕಿನ ನರೇನೂರು ಗ್ರಾಮದ ಇನ್ನೊಬ್ಬ ಮಹಿಳೆ ಕೊಲೆಯಾಗಿದ್ದಾಳೆ. ಈ ಎರಡು ಘಟನೆಗಳಲ್ಲಿ ಒಟ್ಟು ಐವರು ಬಂಧಿತರಾಗಿದ್ದಾರೆ.

ಮಾಲೀಕನ ಮನೆಯಲ್ಲಿ ನೇಣು
ಗದ್ದನಕೇರಿ ಗ್ರಾಮದಲ್ಲಿ ತಾನು ಕೆಲಸ ಮಾಡುತ್ತಿದ್ದ ಟೇಲರ್‌ನ ಮನೆಯಲ್ಲಿ ಸಂಗೀತಾ ಬಡಿಗೇರ (23) ಎನ್ನುವ ಮಹಿಳೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಈರಣ್ಣ ಅಂಗಡಿ ಎನ್ನುವ ಟೇಲರ್ ಬಳಿ ಸಂಗೀತಾ ಕೆಲಸಕ್ಕೆ ಬರುತ್ತಿದ್ದಳು. ಈರಣ್ಣನ ಪತ್ನಿ ಲತಾಗೆ ಸಂಗೀತಾ ತನ್ನ ಪತಿ ಜತೆಗೆ ಅನೈತಿಕ ಸಂಬಂಧ ಹೊಂದಿದ್ದಾಳೆ ಎನ್ನುವ ಸಂಶಯ ಹೊಂದಿದ್ದಳು.

ಗುರುವಾರ ರಾತ್ರಿ ಮೂತ್ರ ವಿಸರ್ಜನೆಗೆಂದು ಸಂಗೀತಾ ಅವರು ಈರಣ್ಣನ ಮನೆಗೆ ಹೋಗಿದ್ದರು. ಈ ವೇಳೆ ತನ್ನ ಗಂಡನೂ ಮನೆಯಲ್ಲೆ ಇದ್ದಾನೆ. ಇವರಿಬ್ಬರನ್ನು ಹಿಡಿದುಕೊಡಬೇಕು ಎಂದು ಲತಾ ಮನೆ ಬಾಗಿಲು ಹಾಕಿ ರಂಪಾಟ ಮಾಡಿದ್ದರು. ಆದರೆ, ಮನೆಯಲ್ಲಿ ಈರಣ್ಣ ಇರಲಿಲ್ಲ. ಸಂಗೀತಾ ಒಬ್ಬರೇ ಇದ್ದರು. ರಂಪಾಟದಿಂದ ಅಪಮಾನ ತಾಳದೆ ಮನೆಯಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಸಂಗೀತಾ ಸಹ ಇತ್ತೀಚೆಗೆ ತನ್ನ ಪತಿ ಜತೆ ಜಗಳವಾಡಿ ಬೀಳಗಿ ತಾಲೂಕಿನ ಕೋವಳ್ಳಿ ಗ್ರಾಮದ ತನ್ನ ತವರಿಗೆ ಬಂದಿದ್ದಳು. ಬಳಿಕ ಗದ್ದನಕೇರಿ ಗ್ರಾಮದಲ್ಲಿ ಈರಣ್ಣನ ಅಂಗಡಿಯಲ್ಲಿ ಬಟ್ಟೆ ಹೊಲೆಯುವ ಕೆಲಸಕ್ಕೆ ಸೇರಿದ್ದಳು. ಇದರಿಂದ ಈರಣ್ಣನ ಪತ್ನಿಯಲ್ಲಿ ಸಂಶಯ ಕಾಡಲಾರಂಭಿಸಿ ಈ ದುರ್ಘಟನೆ ನಡೆದಿದೆ.

ಬಾಗಲಕೋಟೆ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ಬಾಗಿಲು ಹಾಕಿದ್ದ ಆರೋಪಿ ಲತಾ ಅಂಗಡಿ, ಅವರೊಂದಿಗೆೆ ಬಂದಿದ್ದ ವಿಜಯಪುರದ ಸುಧಾಕರ ಭಜಂತ್ರಿ, ಅಪ್ಪಣ್ಣ ಪೂಜಾರಿ ಅವರನ್ನು ಬಂಧಿಸಿದ್ದು, ಇನ್ನೊಬ್ಬ ಅಪ್ರಾಪ್ತ ಇದ್ದಾನೆ. ಪ್ರಕರಣವನ್ನು ಎಲ್ಲ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್ ತಿಳಿಸಿದ್ದಾರೆ.

ಕೊಡಲಿಯಿಂದ ಕೊಚ್ಚಿ ಪತ್ನಿ ಕೊಲೆ
ಬಾದಾಮಿ ತಾಲೂಕಿನ ನರೇನೂರ ಗ್ರಾಮದಲ್ಲಿ ಕುಡಿದು ಬಂದು ನಿತ್ಯ ಜಗಳವಾಡುತ್ತಿದ್ದ ಪತಿ ರಮೇಶ ಪೂಜಾರ ಗುರುವಾರ ರಾತ್ರಿ ಕೊಡಲಿಯಿಂದ ಹೊಡೆದು ಪತ್ನಿ ಯಲ್ಲವ್ವ (24) ಳನ್ನು ಕೊಲೆ ಮಾಡಿದ್ದಾನೆ.

ಯಲ್ಲವ್ವ ಯಾವಾಗಲೂ ಮೊಬೈಲ್ನಲ್ಲಿ ಬಿಜಿ ಇರುತ್ತಿದ್ದು, ಜೆಸಿಬಿ ಚಾಲಕ ಆಗಿದ್ದ ಗಂಡ ರಮೇಶ ಮನೆಗೆ ಬರುತ್ತಿದ್ದಂತೆ ಫೋನ್ ಬಂದ್ ಮಾಡುತ್ತಿದ್ದಳಂತೆ. ಇದರಿಂದ ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾಳೆ ಎನ್ನುವ ಅನುಮಾನದ ಹುತ್ತ ಬೆಳೆಸಿಕೊಂಡಿದ್ದ.

ಈ ವಿಚಾರವಾಗಿ ನಿತ್ಯ ಪತಿ- ಪತ್ನಿ ನಡುವೆ ಜಗಳ ನಡೆಯುತ್ತಿತ್ತು. ಈ ನಡುವೆ ಹಿರಿಯರು ಪಂಚಾಯಿತಿ ನಡೆಸಿ ರಾಜಿ ಮಾಡಿಸುತ್ತಿದ್ದರು. ಆದರೆ, ಇಬ್ಬರಲ್ಲೂ ಪರಿಸ್ಥಿತಿ ಸುಧಾರಿಸಿರಲಿಲ್ಲ. ಗುರುವಾರ ರಾತ್ರಿಯೂ ಅದು ಮುಂದುವರಿದಿದ್ದು, ಪತಿ ಮನೆಗೆ ಬರುತ್ತಿದ್ದಂತೆ ಕೊಡಲಿ ತೆಗೆದುಕೊಂಡು ಪತ್ನಿಯನ್ನು ಕೊಚ್ಚಿ ಹಾಕಿದ್ದಾನೆ. ಗಂಭೀರ ಗಾಯಗೊಂಡಿದ್ದ ಯಲ್ಲವ್ವಳನ್ನು ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದರು. ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾಳೆ. ಮದುವೆಯಾಗಿ ಒಂಬತ್ತು ವರ್ಷವಾಗಿದ್ದು, 3 ವರ್ಷದ ಮಗಳು ಹಾಗೂ ಎಂಟು ತಿಂಗಳು ಮಗ ಇದ್ದು, ಇದೀಗ ತಾಯಿ ಕೊಲೆಯಾಗಿದ್ದರೆ, ತಂದೆ ಜೈಲು ಪಾಲಾಗಿದ್ದು, ಆ ಎರಡು ಮಕ್ಕಳು ಅನಾಥವಾಗಿವೆ.

ಕೊಲೆ ನಡೆದ ಬಗ್ಗೆ ಕೆರೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ರಮೇಶನನ್ನು ಬಂಧಿಸಿ, ತನಿಖೆ ಮುಂದುವರಿಸಲಾಗಿದೆ ಎಂದು ಎಸ್ಪಿ ಲೋಕೇಶ ಜಗಲಾಸರ್ ತಿಳಿಸಿದ್ದಾರೆ.

EndFragment