ಜಿಲ್ಲೆ

ಬಾಗಲಕೋಟೆ: ಎಸಿಬಿ ದಾಳಿಯಿಂದ ಕಳಚಿಬಿತ್ತು ಎಫ್​ಡಿಎ ಸಿಬ್ಬಂದಿ, ಅಧಿಕಾರಿಗಳ ಮುಖವಾಡ!

ರಮೇಶ್​ ಕುಮಾರ್​​ ಬಿ ಎಡಮೋಳೆ

ಬಾಗಲಕೋಟೆ: ಎಸಿಬಿ ದಾಳಿಯಿಂದ ಬಾಗಲಕೋಟೆ ಕೃಷ್ಣಾ ಮೇಲ್ದಂಡೆ ಯೋಜನೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಮುಖವಾಡ ಕಳಚಿಬಿದ್ದಿದೆ. ಪ್ರಕರಣವೊಂದರ ಮೇಲೆ ನಡೆದ ಎಸಿಬಿ ದಾಳಿ ವೇಳೆ 4 ಕೋಟಿ 61 ಲಕ್ಷ ಮೌಲ್ಯ ಪರಿಹಾರದ 50 ಚೆಕ್ ಪತ್ತೆಯಾಗಿವೆ.

70 ಜನ ಕೃಷ್ಣಾ ಮೇಲ್ದಂಡೆ ಯೋಜನೆ ಫಲಾನುಭವಿಗಳಿಗೆ ಆರ್​ಟಿಜಿಎಸ್ ಮಾಡಬೇಕಿದ್ದ ಪರಿಹಾರ ಚೆಕ್​ಗಳೆಂದು ತಿಳಿದುಬಂದಿದೆ. ಜನವರಿ 25ರಂದು ಎಸಿಬಿಯಿಂದ ಯುಕೆಪಿ (ಕೃಷ್ಣಾ ಮೇಲ್ದಂಡೆ ಯೋಜನೆ)ಕಚೇರಿ ಮೇಲೆ ನಡೆದಿತ್ತು. ಭೂಪರಿಹಾರ ಹಣ ಜಮಾ ಮಾಡಲು ಯುಕೆಪಿಯ ಪುನರ್ವಸತಿ ಪುನರ್​ರ್ನಿರ್ಮಾಣ ಇಲಾಖೆ ಕಚೇರಿಯ ಎಫ್​ಡಿಎ ಸುನಂದಾ ತೆಗ್ಗಿ, ಕಮತಗಿ ಪಟ್ಟಣದ ಸಂಗಪ್ಪ ಹಿರಾಳ ಎಂಬುವರಿಂದ 3 ಲಕ್ಷ 43 ಸಾವಿರ ಭೂಪರಿಹಾರ ಹಣ ಜಮಾ ಮಾಡಲು 4 ಸಾವಿರ ಲಂಚ ಕೇಳಿದ್ದರು.

ಯುಕೆಪಿ ಕೆನಾಲ್ ನಿರ್ಮಾಣಕ್ಕಾಗಿ ಸಂಗಪ್ಪನಿಗೆ ಭೂಪರಿಹಾರ ಜಮಾ ಮಾಡಲು ಲಂಚ ಕೇಳಿದ್ದರು. ಲಂಚ ಪಡೆಯುವ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಸಂಶಯ ಬಂದ ಹಿನ್ನೆಲೆಯಲ್ಲಿ ಭೂಪರಿಹಾರಕ್ಕೆ ಸಂಬಂಧಿಸಿದಂತೆ ಎಸಿಬಿ ತಂಡ ತನಿಖೆಯನ್ನು ಮುಂದುವರೆಸಿತ್ತು. ತನಿಖೆ ವೇಳೆ 70 ಜನ ರೈತರಿಗೆ ಕೊಡಬೇಕಿದ್ದ 4 ಕೋಟಿ 61 ಲಕ್ಷ, 46 ಸಾವಿರದ 310 ರೂಪಾಯಿ ಮೌಲ್ಯದ 50ಕ್ಕೂ ಅಧಿಕ ಚೆಕ್​ಗಳು ಪತ್ತೆಯಾಗಿವೆ. ಇವೆಲ್ಲವೂ ಸಹ ಬಾಕಿ ಇರುವ ಚೆಕ್​ಗಳಾಗಿವೆ.

ಎಲ್ಲರಿಂದಲೂ ಲಂಚ ಪಡೆದು ವಿತರಿಸುವ ಉದ್ದೇಶದಿಂದ ಚೆಕ್​ಗಳನ್ನು ತಡೆಯಿಡಿಲಾಗಿದೆ ಎಂಬ ಸಂಶಯ ಬಂದಿದೆ. ಇದೀಗ ಎಸಿಬಿ ಅಧಿಕಾರಿಗಳು, ಯುಕೆಪಿ ಲೆಕ್ಕಾಧಿಕಾರಿಗಳಿಗೆ ಭೂಪರಿಹಾರ ಜಮಾ ಮಾಡಲು ಸೂಚನೆ ನೀಡಿದ್ದು, ಆ ಬಳಿಕ ರೈತರ ಖಾತೆಗೆ ಪರಿಹಾರದ ಹಣ ಜಮಾ ಆಗಿದೆ.

ಎಸಿಬಿ ಉತ್ತರ ವಲಯ ಎಸ್ಪಿ ಬಿ.ಎಸ್​. ನೇಮಗೌಡ ಮಾರ್ಗದರ್ಶನದಲ್ಲಿ ಬಾಗಲಕೋಟೆ ಎಸಿಬಿ ಡಿವೈಎಸ್ ಎಂ.ಕೆ.ಗಂಗಲ್ ನೇತೃತ್ವದಲ್ಲಿ ದಾಳಿ ನಡೆದಿತ್ತು. ಕೇವಲ ದಾಳಿ ನಡೆಸದೇ ಎಸಿಬಿ ತಂಡ ಪರಿಹಾರವನ್ನೂ ಕೊಡಿಸಿದೆ. ಮತ್ತೆ ಲಂಚಕ್ಕೆ ಬೇಡಿಕೆ ಇಟ್ಟರೆ ಎಸಿಬಿ ಕಚೇರಿಗೆ ತಿಳಿಸುವಂತೆ ಸಂತ್ರಸ್ತರಿಗೆ ಧೈರ್ಯ ತುಂಬಿದ್ದಾರೆ. (ದಿಗ್ವಿಜಯ ನ್ಯೂಸ್​)