ಬಾಗಲಕೋಟೆ: ಘನ ತ್ಯಾಜ್ಯ ವಿಲೇವಾರಿ, ನಿರ್ವಹಣೆ ಬಗ್ಗೆ ಮಹಿಳೆಯರು ತಿಳಿದುಕೊಂಡು ಕಾರ್ಯರೂಪಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ಜಿಪಂ ಯೋಜನಾ ನಿರ್ದೇಶಕ ಎಂ.ವಿ.ಚಳಗೇರಿ ಹೇಳಿದರು.
ನವನಗರದ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ, ಗ್ರಾಮೀಣ ಪರಿಸರ ಸಮುದಾಯ ಜಾಗೃತಿ ಸಂಸ್ಥೆ (ರೀಚ್) ಹಾಗೂ ಜಿಲ್ಲಾ ಪಂಚಾಯಿತಿ ಆಶ್ರಯದಲ್ಲಿ ಗ್ರಾಮ ಪಂಚಾಯಿತಿ ಸಂಜೀವಿನಿ ಒಕ್ಕೂಟದ ಮಹಿಳೆಯರಿಗಾಗಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಘನ ತ್ಯಾಜ್ಯ ನಿರ್ವಹಣೆ ಕುರಿತು 5 ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ತ್ಯಾಜ್ಯ ವಿಲೇವಾರಿ ಬಗ್ಗೆ ಜಾಗೃತಿ ಮೂಡಿಸಬೇಕು. ತ್ಯಾಜ್ಯವನ್ನು ವೈಜ್ಞಾನಿಕವಾಗಿ ನಿರ್ವಹಣೆ ಮಾಡಬೇಕು ಎಂದರು.
ಸಹಾಯಕ ತರಬೇತಿದಾರ ವಿಕ್ರಮ ಕುಲಕರ್ಣಿ ಮಾತನಾಡಿ, ಘನ ತ್ಯಾಜ್ಯ ವಿಲೇವಾರಿಯಿಂದ ಆದಾಯ ಪಡೆಯಬಹುದು ಮತ್ತು ಇದರಿಂದ ನಮ್ಮ ಪರಿಸರದಲ್ಲಿ ಮಹತ್ತರ ಬದಲಾವಣೆಯಾಗಲಿದೆ ಎಂದು ಹೇಳಿದರು.
ರೀಚ್ ಸಂಸ್ಥೆ ನಿರ್ದೇಶಕ ಜಿ.ಎನ್.ಸಿಂಹ ಮಾತನಾಡಿ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು, ಅದು ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದೆ. ಇಂದು ಮಾನವ ಎಲ್ಲ ರಂಗದಲ್ಲಿ ಪರಿಸರವನ್ನು ಮಲಿನ ಮಾಡುತ್ತ ಬಂದಿದ್ದು, ಪರಿಸರದ ಮೇಲೆ ನಿರಂತರವಾಗಿ ದಬ್ಬಾಳಿಕೆ ಮಾಡುತ್ತಿದ್ದಾನೆ. ಅದನ್ನು ತಡೆಗಟ್ಟುವುದು ಎಲ್ಲರ ಕರ್ತವ್ಯವಾಗಿದೆ ಎಂದರು.
ಸಂಪನ್ಮೂಲ ವ್ಯಕ್ತಿಗಳು ಉಪನ್ಯಾಸ ನೀಡಿದರು. ಶಿಬಿರಾರ್ಥಿಗಳಿಗೆ ಮುರನಾಳ ಗ್ರಾಮದಲ್ಲಿ ಸ್ಥಾಪಿತವಾದ ಘನ ತ್ಯಾಜ್ಯ ನಿರ್ವಹಣಾ ಘಟಕದ ನಿರ್ವಹಣೆ ಬಗ್ಗೆ ಪ್ರಾಯೋಗಿಕ ತರಬೇತಿ ನೀಡಲಾಯಿತು. ತೋವಿವಿ ವಿಸ್ತರಣಾ ಅಧಿಕಾರಿ ಡಾ.ಶಶಿಕುಮಾರ ಎಸ್. 6 ತಿಂಗಳಲ್ಲಿ ಕೊಳೆಯುವ ಘನ ತ್ಯಾಜ್ಯವನ್ನು ವಿಶ್ವ ವಿದ್ಯಾಲಯದಲ್ಲಿ ಸಿಗುವ ದ್ರಾವಣ ಸಿಂಪಡಣೆ ಮೂಲಕ ಕೇವಲ ಒಂದೇ ತಿಂಗಳಲ್ಲಿ ಗೊಬ್ಬರ ತಯಾರಿಸುವುದು ಹೇಗೆ ಎಂದು ತಿಳಿಸಿದರು. ಅಲ್ಲದೆ, ಎರೆಹುಳು ಗೊಬ್ಬರ ಹೇಗೆ ತಯಾರಿಸುವುದು? ಅದರಿಂದ ಹೇಗೆ ಲಾಭ ಪಡೆದುಕೊಳ್ಳಬಹುದು? ಎಂದು ಮಾಹಿತಿ ನೀಡಿದರು.
ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ 30 ಮಹಿಳೆಯರಿಗೆ ಪ್ರಮಾಣ ಪತ್ರ ನೀಡಲಾಯಿತು. ಲೋಕೋಪಯೋಗಿ ಇಲಾಖೆ ತಾಂತ್ರಿಕ ಸಹಾಯಕ ನಾರಾಯಣ ಕುಲಕರ್ಣಿ, ಜಿಲ್ಲಾ ತರಬೇತಿ ಸಂಸ್ಥೆ ಉಪ ಪ್ರಾಚಾರ್ಯ ಮಲ್ಲಿಕಾರ್ಜುನ ಗುಡೂರ, ಜಿಪಂ ಸಹಾಯಕ ಯೋಜನಾಧಿಕಾರಿ ಭೀಮಪ್ಪ ತಳವಾರ, ಎನ್‌ಆರ್‌ಎಲ್‌ಎಂ ಜಿಲ್ಲಾ ಸಂಯೋಜಕ ಗೋಪಾಲ ಬಿ., ತರಬೇತಿದಾರ ಬಸವರಾಜ ಚಳಗೇರಿ, ರೇಖಾ ಬಡಿಗೇರ ಇತರರಿದ್ದರು.