ಬಾಗಲಕೋಟೆ: ನಿರಂತರವಾಗಿ 24 ಗಂಟೆಗಳ ಕಾಲ ಧಾರಕಾರ ಮಳೆ ಸುರಿದ ಪರಿಣಾಮ ಕೋಟೆನಾಡು ತತ್ತರಿಸಿ ಹೋಗಿದ್ದು, ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ವರುಣನ ಆರ್ಭಟಕ್ಕೆ ನೂರಾರು ಮನೆಗಳಿಗೆ ಹಾನಿಯಾಗಿದೆ.
ಜಿಲ್ಲೆಯಲ್ಲಿ ಮಳೆಯ ರುದ್ರ ನರ್ತನಕ್ಕೆ ಹಳ್ಳಕೊಳ್ಳಗಳು ಭರ್ತಿಯಾಗಿದ್ದು, ಮೈತುಂಬಿ ಹರಿಯುತ್ತಿವೆ. ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಜನ ಮನೆಯಿಂದ ಹೊರ ಬರಲು ಸಾಧ್ಯವಾಗುತ್ತಿಲ್ಲ. ರಸ್ತೆ,ಜಮೀನುಗಳಿಗೆ ನೀರು ನುಗ್ಗುತ್ತಿದೆ. ಮುಧೋಳ ತಾಲೂಕಿನಲ್ಲಿ 341, ಬಾದಾಮಿ 15, ಹುನಗುಂದ 30, ಬಾಗಲಕೋಟೆ ತಾಲೂಕಿನ 20 ಸೇರಿದಂತೆ ಜಿಲ್ಲೆಯಲ್ಲಿ ಅಂದಾಜು 900 ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ ಎಂದು ಪ್ರಾಥಮಿಕ ಮಾಹಿತಿ ದೊರೆತಿದೆ. ವ್ಯಾಪಾಕ ಪ್ರಮಾಣದಲ್ಲಿ ಮಳೆಯಿಂದಾಗಿ ಗುಡಿಸಲು, ಮಣ್ಣಿನ ಮನೆಗಳು ಕುಸಿದು ಬೀಳುತ್ತಿವೆ. ಅಲ್ಲದೆ ಈರುಳ್ಳಿ, ಮೆಣಸಿನಕಾಯಿ ಸೇರಿದಂತೆ ವಿವಿಧ ತೋಟಗಾರಿಕೆ ಬೆಳೆಗಳು ಹಾನಿಯಾಗಿದ್ದು, ಕಳೆದ ಒಂದು ವಾರದಲ್ಲಿ ಸುರಿದ ಮಳೆಯಿಂದಾಗಿ ಅಂದಾಜು 12488 ಹೆಕ್ಟೇರ್ ಪ್ರದೇಶದ ತೋಟಗಾರಿಕೆ ಬೆಳೆಗಳು ಹಾನಿಯಾಗಿವೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಹುನಗುಂದ ತಾಲೂಕಿನ ಕರಡಿ ಮಾರ್ಗದ ಬೇಕಮಲದಿನ್ನಿ ಗ್ರಾಮದ ಬಳಿ ರಸ್ತೆ ಜಲಾವೃತವಾಗಿದೆ. ಹುನಗುಂದ ಕರಡಿ ಮಾರ್ಗದ ಹತ್ತು ಹಳ್ಳಿಗಳ ಸಂಪರ್ಕ ಕಡಿತಗೊಂಡಿವೆ. ಇದೇ ರೀತಿ ಅನೇಕ ಭಾಗದಲ್ಲಿ ರಸ್ತೆ ಜಲಾವೃತವಾಗಿವೆ. ಇನ್ನು ಮಳೆಯಿಂದಾಗಿ ಬಾದಾಮಿ ಪಟ್ಟಣದ ಐತಿಹಾಸಿಕ ಕಾಲದ ಅಗಸ್ತಯ ಹೊಂಡ ತುಂಬಿ ಹರಿಯುತ್ತಿವೆ. ಹುಲಿಗೆಮ್ಮನಕೊಳ್ಳ, ಸಿದ್ದನಕೊಳ್ಳ ಜಲಪಾತ ಸೃಷ್ಟಿಯಾಗಿದ್ದು, ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ.