ಬಾಗಲಕೋಟೆ: ಸಮಸ್ಯೆಗಳ ತಾಣವಾಗಿರುವ ನಗರದ ರೈಲು ನಿಲ್ದಾಣಕ್ಕೆ ಶಾಸಕ ವೀರಣ್ಣ ಚರಂತಿಮಠ ಭಾನುವಾರ ದಿಢೀರ್ ಭೇಟಿ ನೀಡಿದರು. ನಿಲ್ದಾಣ ಪ್ರತಿಯೊಂದು ಪ್ರದೇಶ ಸುತ್ತಾಡಿ ಸ್ವಚ್ಛತೆಗೆ ಆದ್ಯತೆ ನೀಡಬೇಕು ಹಾಗೂ ಗೂಡ್ಸ್ ಶೆಡ್ ನವನಗರ ನಿಲ್ದಾಣಕ್ಕೆ ಸ್ಥಳಾಂತರ ಮಾಡಬೇಕು ಎಂದು ರೈಲ್ವೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ರೈಲ್ವೆ ಹಿರಿಯ ಅಧಿಕಾರಿಗಳನ್ನು ನಿಲ್ದಾಣಕ್ಕೆ ಕರೆಯಿಸಿಕೊಂಡ ಶಾಸಕ ವೀರಣ್ಣ ಚರಂತಿಮಠ, ನಿಲ್ದಾಣದ ಸಮಸ್ಯೆಗಳನ್ನು ಅವರ ಗಮನಕ್ಕೆ ತರುವ ಮೂಲಕ ಕೈಗೊಳ್ಳಬೇಕಾದ ಕೆಲಸ, ಕಾರ್ಯಗಳ ಬಗ್ಗೆ ಸೂಚನೆ ನೀಡಿ ಶೀಘ್ರದಲ್ಲಿ ಸ್ಪಂದಿಸಬೇಕು ಎಂದರು.
ಈಚೆಗೆ ಕೇಂದ್ರ ಸರ್ಕಾರ ರೈಲ್ವೆ ರಾಜ್ಯ ಖಾತೆ ಸಚಿವ ಸುರೇಶ ಅಂಗಡಿ ನಗರಕ್ಕೆ ಭೇಟಿ ನೀಡಿದಾಗ ಗೂಡ್ಸ್ ಶೆಡ್ ಸ್ಥಳಾಂತರಕ್ಕೆ ನಿರ್ದೇಶನ ನೀಡಿದ್ದರು. ಇದುವರೆಗೆ ಸ್ಥಳಾಂತರ ಮಾಡಿಲ್ಲ. ಗೂಡ್ಸ್ ಶೆಡ್‌ನಲ್ಲಿ ಪ್ರತಿದಿನ ವಿವಿಧ ವಸ್ತುಗಳನ್ನು ತೆಗೆದುಕೊಳ್ಳಲು ಬರುವ ಲಾರಿಗಳಿಂದ ಸುತ್ತಮುತ್ತಲಿನ ನಿವಾಸಿಗಳಿಗೆ ಧೂಳಿನಿಂದ ಆರೋಗ್ಯಕ್ಕೆ ದುಷ್ಟರಿಣಾಮ ಬೀರುತ್ತಿದೆ. ಹೀಗಾಗಿ ಇದನ್ನು ನವನಗರಕ್ಕೆ ಸ್ಥಳಾಂತರಿಸಲು ಮುತವರ್ಜಿ ವಹಿಸಬೇಕು ಎಂದು ಅಧಿಕಾರಿಗಳಿಗೆ ಹೇಳಿದರು.
ಬಾಗಲಕೋಟೆಯಿಂದ ಬಾದಾಮಿ ಕಡೆ ಹೋಗುವ ರೈಲ್ವೆ ಸೇತುವೆ ಕೆಳಗಡೆ ಇರುವ ಮಾರ್ಗ ಖುಲ್ಲಾ ಆಗಿದ್ದು ಇಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದೆ. ಇದರಿಂದ ಪ್ರಯಾಣಿಕರಿಗೆ ತುಂಬಾ ತೊಂದರೆಯಾಗುತ್ತಿದೆ. ಸೇತುವೆ ಕೆಳಗಡೆ ಇರುವ ಜಾಗವನ್ನು ಸ್ವಚ್ಛಗೊಳಿಸಿ ಇಲ್ಲಿ ಒಂದು ಕಬ್ಬಿಣ ಗೇಟ್ ಅಳವಡಿಸದಲ್ಲಿ ಯಾವುದೇ ಬಿಡಾಡಿ ದನಗಳ ಒಳಹೋಗಲು ಅವಕಾಶ ಆಗುವುದಿಲ್ಲ. ಇದನ್ನು ತಕ್ಷಣ ಮಾಡಿಸಿ ಎಂದು ಸೂಚನೆ ನೀಡಿದರು.
ರೈಲ್ವೆ ನಿಲ್ದಾಣದ ಸುತ್ತಮುತ್ತ ಮುಳ್ಳಿನ ಕಂಟಿಗಳು ಬೆಳೆದಿದ್ದು ಇವುಗಳನ್ನು ನಗರಸಭೆ ವತಿಯಿಂದ ಸ್ವಚ್ಛ ಮಾಡಿಸಿಕೊಳ್ಳಬೇಕು.ನಿಲ್ದಾಣದ ಸುತ್ತಮುತ್ತ ಯಾವುದೇ ಗಲೀಜು ಆಗದಂತೆ ನೋಡಿಕೊಳ್ಳಬೇಕು. ಅಧಿಕಾರಿಗಳು, ಸಿಬ್ಬಂದಿ ಸ್ವಚ್ಛತೆಗೆ ಗಮನ ಹರಿಸಬೇಕು ಎಂದರು.
ರೈಲ್ವೆ ಇಲಾಖೆ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ನಿರ್ಮಾಣ ಮಾಡುವ ನಿವಾಸಗಳು ಗುಣಮಟ್ಟದಿಂದ ಕಟ್ಟಬೇಕು. ಸ್ವಲ್ಪ ವರ್ಷ ಕಳೆದ ನಂತರ ಮನೆಗಳು ಸೋರುವಂತಾಗಬಾರದು. ಗುಣಮಟ್ಟದ ಸಾಮಾಗ್ರಿಗಳನ್ನು ಗುತ್ತಿಗೆದಾರರು ಬಳಸಬೇಕು. ಈ ಬಗ್ಗೆಯೂ ಆಗಾಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಬೇಕು ಎಂದು ತಿಳಿಸಿದರು.
ರೈಲ್ವೆ ಇಲಾಖೆ ಹಿರಿಯ ಅಧಿಕಾರಿಗಳಾದ ವಿನಾಯಕ ಪಾಟೀಲ, ಲಕ್ಷ್ಮಣ ಸಿಂಗ್, ರಾಮಕೃಷ್ಣ ಪಿ. ಇತರರು ಇದ್ದರು.
ರೈಲ್ವೆ ನಿಲ್ದಾಣದಲ್ಲಿರುವ ಪೊಲೀಸ್ ಕೊಠಡಿಗೆ ಮೂಲ ಸೌಲಭ್ಯ ಕಲ್ಪಿಸಬೇಕು. ರಾತ್ರಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ ಅನುಕೂಲವಾಗುವ ರೀತಿ ಕೊಠಡಿಯೊಳಗೆ ಇಲಾಖೆಯಿಂದ ಸೌಲಭ್ಯ ಕಲ್ಪಿಸಬೇಕು.
- ವೀರಣ್ಣ ಚರಂತಿಮಠ ಶಾಸಕ ಬಾಗಲಕೋಟೆ
EndFragment