ಬಾಗಲಕೋಟೆ: ಪ್ರಧಾನಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ ಅವರು ಪ್ರಜಾಪ್ರಭುತ್ವ, ಜಾತ್ಯತೀತ ತತ್ವಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಧರ್ಮ ಆಧಾರಿತ ಕಾನೂನು ರೂಪಿಸಿ ಜಾರಿಗೊಳಿಸುತ್ತಿದ್ದು, ಇದಕ್ಕೆ ನಮ್ಮ ವಿರೋಧವಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಪಿ. ನಾಡಗೌಡ ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ‘ನಾವು ಭಾರತೀಯರು’ ಸಂಘಟನೆ ನೇತೃತ್ವದಲ್ಲಿ ನಗರದ ಜಿಲ್ಲಾಡಳಿತ ಭವನ ಎದುರು ಸೋಮವಾರ ಆರಂಭವಾದ ಅನಿರ್ದಿಷ್ಟಾವಧಿ ಧರಣಿಯಲ್ಲಿ ಅವರು ಮಾತನಾಡಿ, ಮಾತೆತ್ತಿದರೆ ಪಾಕಿಸ್ತಾನವನ್ನು ಜಪಿಸುವ ಮೋದಿಯವರು ದೇಶದ ಜನರ ದಿಕ್ಕು ತಪ್ಪಿಸುತ್ತಿದ್ದು, ಸರ್ಕಾರದ ವಿರುದ್ಧ ಧ್ವನಿ ಎತ್ತಿ ಹೋರಾಟ ಮಾಡಿದರೆ ದೇಶ ವಿರೋಧಿ ಪಟ್ಟ ಕಟ್ಟಲಾಗುತ್ತಿದೆ. ಇದು ಅತ್ಯಂತ ಅಪಾಯಕಾರಿ ಧೋರಣೆ. ನಾವು ಇಲ್ಲೇ ಹುಟ್ಟಿ ಇಲ್ಲೇ ಬದುಕುತ್ತಿದ್ದೇವೆ. ನೀವು ಬೇಕಿದ್ದರೆ ಪಾಕಿಸ್ತಾನಕ್ಕೆ ಹೋಗಿ ಎಂದು ಪ್ರಧಾನಿ ನರೇಂದ್ರ ಮೋದಿಗೆ ಸವಾಲು ಹಾಕಿದರು.
ಸರ್ವಾಧಿಕಾರಿ ಧೋರಣೆ ವಿರುದ್ಧ ನಾವೆಲ್ಲ ಒಗ್ಗಟ್ಟಾಗಿ ಹೋರಾಟ ನಡೆಸಬೇಕಿದೆ ಎಂದ ಅವರು ತಮ್ಮ ಭಾಷಣದ ಉದ್ದಕ್ಕೂ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಧರಣಿಗೆ ಚಾಲನೆ ನೀಡಲಾಯಿತು. ಪ್ರಧಾನಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ ವಿರುದ್ಧ ಹೋರಾಟಗಾರರು ಘೋಷಣೆ ಕೂಗಿದರು. ಹೋರಾಟಕ್ಕೆ ಕಾಂಗ್ರೆಸ್ ಮುಖಂಡರು ಸಾಥ್ ನೀಡಿದರು.
ಜಿ.ಪಂ. ಅಧ್ಯಕ್ಷೆ ಬಾಯಕ್ಕ ಮೇಟಿ, ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಎಂ.ಬಿ. ಸೌದಾಗರ, ಮುಖಂಡರಾದ ಎ.ಡಿ. ಮೊಕಾಶಿ, ಮೈನುದ್ದಿನ್ ನಬಿವಾಲೆ, ಅಯ್ಯುಬ್ ಪುಣೇಕರ, ನೂರಅಹ್ಮದ್ ಪಟ್ಟೆವಾಲೆ, ರಮೇಶ ಬದ್ನೂರ, ಎ.ಎ. ದಂಡಿಯಾ ಧರಣಿಯಲ್ಲಿ ಭಾಗವಹಿಸಿದ್ದಾರೆ.
ದೇಶದಲ್ಲಿ ವ್ಯವಸ್ಥಿತವಾಗಿ ಸಂವಿಧಾನವನ್ನು ಬದಲಿಸಲಾಗುತ್ತಿದೆ. ಪೌರತ್ವ ಕಾಯ್ದೆ ಮುಸ್ಲಿಂ ಜನಾಂಗಕ್ಕೆ ಮಾತ್ರವಲ್ಲ, ದಲಿತ, ಹಿಂದುಳಿದ ಜನರಿಗೆ ಸಮಸ್ಯೆ ಉಂಟು ಮಾಡಲಿದೆ. ಅಭಿವೃದ್ಧಿ ಹೆಸರಿನಲ್ಲಿ ಆಡಳಿತಕ್ಕೆ ಬಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರ ಯಾವುದೇ ಜನಪರ ಯೋಜನೆ ಜಾರಿ ಮಾಡದೆ ದೇಶದ ಜನರಲ್ಲಿ ಕೋಮು ಪ್ರಚೋದನೆ ನೀಡುತ್ತಿದೆ.
- ಸಿಕಂದರ್ ಅಥಣಿ ಸಂಘಟನೆ ಮುಖಂಡ
EndFragment