ಜಿಲ್ಲೆ

ಪ್ರಣಬ್ ಮುಖರ್ಜಿ ಶ್ರೇಷ್ಠ ಆರ್ಥಿಕ ತಜ್ಞ

ಬಾಗಲಕೋಟೆ: ಪ್ರಣಬ್ ಮುಖರ್ಜಿ ದೇಶ ಕಂಡ ಮಹಾನ್ ನಾಯಕ. ರಾಷ್ಟ್ರಪತಿಯಾಗಿ, ಕೇಂದ್ರ ಸರ್ಕಾರದಲ್ಲಿ ವಿವಿಧ ಸಚಿವರಾಗಿ, ಶ್ರೇಷ್ಠ ಆರ್ಥಿಕ ತಜ್ಞರಾಗಿ ದೇಶಕ್ಕೆ ಅವರು ಅಪಾರ ಕೊಡುಗೆ ನೀಡಿದ್ದಾರೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ ಹೇಳಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾಜಿ ರಾಷ್ಟ್ರಪತಿ ದಿ.ಪ್ರಣಬ್ ಮುಖರ್ಜಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಪ್ರಣಬ್ ಮುಖರ್ಜಿ ನಿಧನದಿಂದ ದೇಶಕ್ಕೆ, ಕಾಂಗ್ರೆಸ್ ಪಕ್ಷದಕ್ಕೆ ತುಂಬ ಲಾರದ ನಷ್ಟವಾಗಿದೆ ಎಂದರು.

ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ಮಾತನಾಡಿ, ಮಾಜಿ ಪ್ರಧಾನ ಮಂತ್ರಿ ದಿ.ಇಂದಿರಾಗಾಂಧಿ ಅವರ ಒಡನಾಡಿಯಾಗಿ ಪಕ್ಷವನ್ನು ಕಟ್ಟಿ ಬೆಳೆಸಿದ ಧೀಮಂತ ನಾಯಕ ಪ್ರಣಬ್ ಮುಖರ್ಜಿ. ಅತ್ಯಂತ ಕಠಿಣ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದ ಸಮಯದಲ್ಲಿ ಆರ್ಥಿಕ ಸಚಿವರಾಗಿ ಆರ್ಥಿಕ ವ್ಯವವಸ್ಥೆಯನ್ನು ಸುಧಾರಣೆ ಮಾಡಿದ ಕೀರ್ತಿ ದಿ.ಪ್ರಣಬ್ ಮುಖರ್ಜಿ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.

ಮಾಜಿ ಸಚಿವ ಎಚ್.ವೈ. ಮೇಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹಾಜಿಸಾಬ ದಂಡಿನ, ಎಸ್.ಎನ್.ರಾಂಪುರ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಕ್ಷಿತಾ ಭರತಕುಮಾರ ಈಟಿ, ತಾಲೂಕು ಅಧ್ಯಕ್ಷೆ ರೇಣುಕಾ ನ್ಯಾಮಗೌಡರ, ಮುಖಂಡರಾದ ಮಂಜುನಾಥ ವಾಸನದ, ಮಂಜುನಾಥ ಬೀರಣ್ಣವರ, ವಿಜುಗೌಡ ಪಾಟೀಲ, ಆನಂದ ಶಿಲ್ಪಿ, ಭರತಕುಮಾರ ಈಟಿ, ರಾಜು ಜವಳಿ ಸೇರಿ ಇತರರು ಇದ್ದರು.

ರಾಜಕೀಯದಲ್ಲಿ ಅಜಾತಶತ್ರು: ಮಾಜಿ ರಾಷ್ಟ್ರಪತಿ, ಭಾರತ ರತ್ನ ಪ್ರಣಬ್ ಮುಖರ್ಜಿ ನಿಧನಕ್ಕೆ ಭೋವಿ ಗುರುಪೀಠದ ಇಮ್ಮಡಿ ಸಿದ್ದಾರೇಮಶ್ವರ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ. ಸ್ಥಿತಪ್ರಜ್ಞಾ ಮನಸ್ಥಿತಿ ರಾಜಕೀಯ ರಾಜಋಷಿಯಾಗಿದ್ದರು. ರಾಜಕೀಯದಲ್ಲಿ ಅಜಾತಶತ್ರುಗಳಾಗಿ ಬೆಳೆದ ರೀತಿ ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿದೆ. ಸಾಹಿತಿ, ಪತ್ರಕರ್ತರಾಗಿ ಸೇವೆ ಸಲ್ಲಿಸಿದ್ದಾರೆ. ಸರ್ವ ವರ್ಗದವರು ಇಷ್ಟ ಪಡುವ ವ್ಯಕ್ತಿತ್ವ ಅವರದ್ದು. ಇಂದು ನಮ್ಮನ್ನು ಬಿಟ್ಟು ಅಗಲಿರುವುದು ದೇಶಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ತಿಳಿಸಿದ್ದಾರೆ.