ಬಾಗಲಕೋಟೆ: ಪೊಗರು ಚಿತ್ರದಲ್ಲಿ ಬ್ರಾಹ್ಮಣ ಸಮಾಜ ಅವಹೇಳನ ಮಾಡಿರುವುದನ್ನು ಖಂಡಿಸಿ ಬಾಗಲಕೋಟೆ ಬ್ರಾಹ್ಮಣ ಸಮಾಜ ವತಿಯಿಂದ ನಗರದ ಜಿಲ್ಲಾಡಳಿತ ಭವನ ಎದುರು ಗುರುವಾರ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ ಬ್ರಾಹ್ಮಣ ಸಮಾಜದ ಮುಖಂಡರು ಪೊಗರು ಚಿತ್ರ ತಂಡ, ಸೆನ್ಸಾರ್ ಮಂಡಳಿ ವಿರುದ್ಧ ಘೋಷಣೆ ಕೂಗಿದರು. ಬಳಿಕ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು.
ಈಚೆಗೆ ಬಿಡುಗಡೆಯಾದ ಪೊಗರು ಚಿತ್ರದಲ್ಲಿ 16 ದೃಶ್ಯಗಳಲ್ಲಿ ಬ್ರಾಹ್ಮಣ ಸಮಾಜಕ್ಕೆ ಅವಮಾನ ಮಾಡಲಾಗಿದೆ. ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದ್ದರಿಂದ ಚಿತ್ರದ ನಿರ್ದೇಶಕ ನಂದಕಿಶೋರ ಬೇಷರತ್ತ ಕ್ಷಮೆಯಾಚಿಸಿದ್ದಾರೆ. ದೃಶ್ಯಗಳಿಗಳಿಗೆ ಕತ್ತರಿ ಹಾಕಿದ್ದಾರೆ. ಆದರೆ, ಇಂತಹ ಚಿತ್ರಗಳು ಬಿಡುಗಡೆ ಮಾಡುವ ಮುನ್ನ ಸೆನ್ಸಾರ್ ಮಂಡಳಿಯವರು ಎಚ್ಚರ ವಹಿಸಬೇಕಿತ್ತು ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಮುಂದಿನ ದಿನಗಳಲ್ಲಿ ಯಾವುದೇ ಚಿತ್ರ ತಂಡವಾಗಲಿ, ರಾಜಕೀಯ ವ್ಯಕ್ತಿಗಳಾಗಲಿ ಹಿಂದು ಸಮಾಜ, ಬ್ರಾಹ್ಮಣ ಸಮುದಾಯಕ್ಕೆ ನೋವು ಉಂಟು ಮಾಡುವ ಸನ್ನಿವೇಶ, ಹೇಳಿಕೆಗಳ ಮೇಲೆ ಸರ್ಕಾರ ನಿರ್ಬಂಧ ವಿಧಿಸಬೇಕು. ಸರ್ಕಾರ ಸೂಕ್ತವಾದ ಕಾನೂನು ರಚಿಸಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು. ಸೆನ್ಸಾರ್ ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರ ವಿಕ್ಷಿಪ್ತ ಮನೋಭಾವನೆ, ಬೇಜವಾಬ್ದಾರಿಗೆ ಸರ್ಕಾರ ತಾಕೀತು ಮಾಡಬೇಕು ಎಂದು ಆಗ್ರಹಿಸಿದರು.
ಸಮಾಜದ ಮುಖಂಡರಾದ ಡಾ.ಗಿರೇಶ ಮಾಸೂಕರ, ಭೀಮಸೇನಾಚಾರ್ಯ ಪಾಂಡುರಂಗಿ, ನರಸಿಂಹ ಆಚಾರ್ಯ ಆಲೂರ, ರಾಜಾಚಾರ್ಯ ತಾಳಿಕೋಟಿ, ವಿನಾಯಕ ತಾಳಿಕೋಟಿ, ಶ್ರೀಹರಿ ಪಾಟೀಲ, ಮೋಹನ ದೇಶಪಾಂಡೆ, ಸಂತೋಷ ಗದ್ದನಕೇರಿ, ಗುರುರಾಜ ಕಾವೇರಿ, ಶಶಿಕಾಂತ ದೇಶಪಾಂಡೆ ರಾಘವೇಂದ್ರ ಕುಲಕರ್ಣಿ ಪ್ರತಿಭಟನೆಯಲ್ಲಿ ಇದ್ದರು.
ನೋವುಂಟು ಮಾಡುವ ದೃಶ್ಯ ಸೃಷ್ಟಿ ಸರಿಯಲ್ಲ
ಪೊಗರು ಚಿತ್ರದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಅವಹೇಳನಕಾರಿ ಮಾಡುವಂತಹ ದೃಶ್ಯಗಳನ್ನು ಚಿತ್ರಿಕರಿಸಿದ್ದು ಖಂಡನೀಯ. ಧಾರವಾಹಿ, ಚಲನಚಿತ್ರ ಯಾವುದೇ ಇರಲಿ ಒಂದು ಸಮಾಜಕ್ಕೆ ನೋವು ಉಂಟು ಮಾಡುವ ಸನ್ನಿವೇಶ ಸೃಷ್ಟಿ ಮಾಡುವುದು ಸರಿಯಲ್ಲ. ಇಂತಹ ತಪ್ಪು ಮರುಕಳಿಸದಂತೆ ಎಚ್ಚರ ವಹಿಸಬೇಕು. ಸೆನ್ಸಾರ್, ವಾಣಿಜ್ಯ ಮಂಡಳಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ವಿಶ್ವ ಮಧ್ವಮತ ವೆಲ್‌ಫೇರ್ ಸಂಘಟನೆ ಜಿಲ್ಲಾಧ್ಯಕ್ಷ ವಿನಾಯಕ ದೇಸಾಯಿ ಪ್ರಕಟಣೆ ಮೂಲಕ ಆಗ್ರಹಿಸಿದ್ದಾರೆ.
EndFragment