ಬಾಗಲಕೋಟೆ: ಪೆಟ್ರೋಲ್, ಡೀಸೆಲ್ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಮಹಿಳಾ ಘಟಕದಿಂದ ನವನಗರದ ಎಲ್‌ಐಸಿ ವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು.
ಕಾಂಗ್ರೆಸ್ ಕಚೇರಿಯಿಂದ ಪ್ರತಿಭಟನಾ ಮೆರವಣಿಗೆ ಮೂಲಕ ಎಲ್‌ಐಸಿ ವೃತ್ತಕ್ಕೆ ಆಗಮಿಸಿದ ಕಾರ್ಯಕರ್ತರು, ಮುಖಂಡರು ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರ ವಿರುದ್ಧ ಘೋಷಣೆ ಕೂಗಿದರು. ಸೌಟು, ಲಟ್ಟಣಿಗೆ ಹಿಡಿದು ವಿಭಿನ್ನವಾಗಿ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಘಟಕ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಮಾತನಾಡಿ, ಆಡಳಿತರೂಢ ಬಿಜೆಪಿ ಸರ್ಕಾರ ಬೆಲೆ ಏರಿಕೆ ನಿಯಂತ್ರಿಸುವಲ್ಲಿ, ಕೋವಿಡ್ ನಿರ್ವಹಣೆಯಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಬಡವರ ಮೇಲೆ ಗದಾಪ್ರಹಾರ ನಡೆಸುತ್ತಿದೆ. ಅಧಿಕವಾಗಿ ತೆರಿಗೆ ವಿಧಿಸಿ ಲೂಟಿ ಮಾಡುತ್ತಿದೆ ಎಂದು ಕಿಡಿಕಾರಿದರು.
ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರಕ್ಷಿತಾ ಭರತಕುಮಾರ ಈಟಿ ಮಾತನಾಡಿ, ಬಿಜೆಪಿ ಸರ್ಕಾರದ ದುರಾಡಳಿತಕ್ಕೆ ಜನ ರೋಸಿ ಹೋಗಿದ್ದಾರೆ. ಜನ ಸಾಮಾನ್ಯರ ಕಷ್ಟ, ಸಮಸ್ಯೆ ಅರ್ಥ ಮಾಡಿಕೊಂಡು ಆಡಳಿತ ನಡೆಸುತ್ತಿಲ್ಲ. ಬಂಡವಾಳ ಶಾಹಿಗಳ ಪರವಾಗಿ ಕೆಲಸ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಬಿಜೆಪಿ ತಪ್ಪು ನಿರ್ಧಾರ, ಬೆಲೆ ಏರಿಕೆ ಬಗ್ಗೆ ಪ್ರತಿ ಮನೆಗೆ ತೆರಳಿ ಮಹಿಳೆಯರು, ಯುವಕರಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ತಿಳಿಸಿದರು.
ಜಿಪಂ ಮಾಜಿ ಅಧ್ಯಕ್ಷೆ ಬಾಯಕ್ಕ ಮೇಟಿ, ಮುಖಂಡರಾದ ಎ.ಎ.ದಂಡಿಯಾ, ಪದ್ಮಾವತಿ ಒಡ್ಡಿನ, ಲಕ್ಷ್ಮಿ ಚವ್ಹಾಣ್, ರೇಣುಕಾ ನ್ಯಾಮಗೌಡರ, ಮಂಜುಳಾ ಭೂಸಾರೆ, ಗಂಗಾ ರಾಠೋಡ, ಜಯ ಗುಳಬಾಳ, ರೇಣುಕಾ ಸೂಳಿಕೇರಿ, ರಾಜು ಮನ್ನಿಕೇರಿ, ಮುದುಕಪ್ಪ ಶಾಂತಗೇರಿ, ರಾಜಕುಮಾರ ಬಾದವಾಡಗಿ, ನಾಗರಾಜ ಹದ್ಲಿ, ಹಾಜಿಸಾಬ ದಂಡಿನ, ಉಮೇಶ ಮೇಟಿ, ಆನಂದ ಶಿಲ್ಪಿ, ಗಿರೀಶ ಹೆಬ್ಬಾರ ಇತರರು ಇದ್ದರು.
ದರ ನಿಯಂತ್ರಣ ಮಾಡುವಲ್ಲಿ ವಿಫಲ
ಇದಕ್ಕೂ ಮುನ್ನ ನವನಗರದ ನೂತನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಮಹಿಳಾ ಘಟಕದ ಹೊರ ತಂದಿರುವ ಭಿತ್ತಿ ಪತ್ರಗಳನ್ನು ಬಿಡುಗಡೆಗೊಳಿಸಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ ಮಾತನಾಡಿ, ಬಿಜೆಪಿ ಪಕ್ಷದ ನಾಯಕರು 2014 ಕ್ಕಿಂತ ಮೊದಲು 1, 2 ರೂ. ಬೆಲೆ ಏರಿಕೆಯಾದರು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಬೀದಿಗೆ ಇಳಿದು ಹೋರಾಟ ಮಾಡುತ್ತಿದ್ದರು. ಇಂದು ತಮ್ಮದೆ ಸರ್ಕಾರ ಬೆಲೆ ನಿಯಂತ್ರಣ ಮಾಡುವಲ್ಲಿ ವಿಫಲವಾಗಿದೆ. ಜನರ ಜೀವನ ಬೀದಿಗೆ ಬೀಳುವಂತೆ ಮಾಡಿದ್ದಾರೆ. ಯಾರೊಬ್ಬರೂ ತುಟಿಕ್, ಪಿಟಿಕ್ ಎನ್ನುತ್ತಿಲ್ಲ. ಅಡುಗೆ ಅನಿಲ ಬೆಲೆ 850 ರೂ.ವರೆಗೆ ತಲುಪಿದೆ. ಬಡವರು, ಕಾರ್ಮಿಕರು ಗ್ಯಾಸ್ ಸಿಲಿಂಡರ್ ಬಳಕೆ ಮಾಡಲು ನೂರೆಂಟು ಸಾರಿ ವಿಚಾರ ಮಾಡುವಂತಾಗಿದೆ ಎಂದು ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಮಾಜಿ ಸಚಿವ ಎಚ್.ವೈ.ಮೇಟಿ, ರಕ್ಷಿತಾ ಭರತಕುಮಾರ ಈಟಿ, ಬಾಯಕ್ಕ ಮೇಟಿ ಇತರರು ಇದ್ದರು.
ಕಾಂಗ್ರೆಸ್ ಪಕ್ಷ ತನ್ನ ಅಧಿಕಾರ ಅವಧಿಯಲ್ಲಿ ಬಡವರ ಏಳಿಗೆಗಾಗಿ ಶ್ರಮಿಸಿದೆ. ಬಿಜೆಪಿ ಕೆಲವೇ ಶ್ರೀಮಂತರನ್ನು ಮತ್ತಷ್ಟು ಶ್ರೀಮಂತರನ್ನಾಗಿ ಮಾಡಲು ಹೊರಟಿದೆ. ಅಡುಗೆ ಬೆಲೆ ಏರಿಕೆ ಎಲ್ಲರ ಬದುಕು ತಲ್ಲಣಗೊಳಿಸಿದೆ. ಕಾಂಗ್ರೆಸ್ ಪಕ್ಷ ಮಹಿಳಾ ಕಾರ್ಯಕರ್ತರು ಬಿಜೆಪಿ ಸರ್ಕಾರ ವಿರುದ್ಧ ಹೋರಾಟ ತೀವ್ರಗೊಳಿಸಬೇಕು.
- ಎಚ್.ವೈ. ಮೇಟಿ ಮಾಜಿ ಸಚಿವ