ಜಿಲ್ಲೆ

ಬಸವಜಯಂತಿ ವೇಳೆಗೆ ಶುಭ ಸುದ್ದಿ ನಿರೀಕ್ಷೆ

ಬಾಗಲಕೋಟೆ: ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ಸಮಾಜದ ಬಾಂಧವರು ಹಮ್ಮಿಕೊಂಡಿದ್ದ ಪಾದಯಾತ್ರೆ, ಬೃಹತ್ ಸಮಾವೇಶ ಯಶಸ್ವಿಯಾಗಿದೆ. ಮುಂಬರುವ ಬಸವ ಜಯಂತಿ ವೇಳೆಗೆ ಮೀಸಲಾತಿ ಬಗ್ಗೆ ಶುಭ ಸುದ್ದಿ ಬರುವ ನಿರೀಕ್ಷೆ ಇದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ನಗರದ ಖಾಸಗಿ ಹೊಟೇಲ್‌ನಲ್ಲಿ ಗುರುವಾರ ಸಂಜೆ ಹಮ್ಮಿಕೊಂಡಿದ್ದ ಶರಣು ಶರಣಾರ್ಥಿ ಜಾಥಾ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಈಗಾಗಲೇ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದೇವೆ. ಸದನದಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಆರು ತಿಂಗಳಿನಲ್ಲಿ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದಾರೆ. ಹೋರಾಟದಿಂದ ಸಮಾಜ ಜಾಗೃತವಾಗಿದೆ. ಮಕ್ಕಳ ಭವಿಷ್ಯಕ್ಕಾಗಿ ಸಮಾಜದ ಬಾಂಧವರು ನಿರಂತರವಾಗಿ ಮೀಸಲಾತಿ ಚಳುವಳಿ ನಡೆಸಲು ಸಜ್ಜಾಗಿದ್ದಾರೆ ಎಂದರು.

ರಾಜಕೀಯ ಪಕ್ಷ, ನಾನಾ ಭಿನ್ನಾಭಿಪ್ರಾಯವಿದ್ದರು ಸಹ ಪಂಚಮಸಾಲಿ ಸಮಾಜದ ಬಾಂಧವರು ಎಲ್ಲವನ್ನು ಬದಿಗೊತ್ತಿ ಮಕ್ಕಳ ಭವಿಷ್ಯಕ್ಕಾಗಿ ಒಂದಾಗಿದ್ದಾರೆ. ಮೊಟ್ಟ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನ ನಡೆಸಿದ ಏಕೈಕ ಲಿಂಗಾಯತ ಸಮಾಜ ಪಂಚಮಸಾಲಿ. ಲಿಂಗಾಯತ ಸಮಾಜದ ಯಾವುದೇ ಉಪ ಪಂಗಡಗಳು ಇಷ್ಟು ದೊಡ್ಡ ಪ್ರಮಾಣದಲ್ಲಿ ಸಮಾವೇಶ, ಹೋರಾಟ ಕೈಗೊಂಡಿರಲಿಲ್ಲ. ಪಂಚಮಸಾಲಿ ಸಮಾಜದವರು ಸ್ವಯಂ ಪ್ರರೇಣೆಯಿಂದ ಚಳುವಳಿಯಲ್ಲಿ ಭಾಗವಹಿಸಿದ್ದು ಐತಿಹಾಸಿಕ ದಾಖಲೆ. ಏ.18 ಕ್ಕೆ ಯಾತ್ರೆ ಕೂಡಲಸಂಗಮ ತಲುಪಿ ಮುಕ್ತಾಯಗೊಳ್ಳಲಿದೆ ಎಂದು ಹೇಳಿದರು.

ಪಂಚಮಸಾಲಿ ಸಮಾಜದ ಮಹಿಳಾ ಘಟಕದ ಅಧ್ಯಕ್ಷೆ ವೀಣಾ ಕಾಶಪ್ಪನವರ ಮಾತನಾಡಿ, 2 ಎ ಮೀಸಲಾತಿ ನೀಡುವಂತೆ ಸರ್ಕಾರಕ್ಕೆ ಆರು ತಿಂಗಳ ಗಡುವು ನೀಡಲಾಗಿದೆ. ಈಗಾಗಲೇ ಬೃಹತ್ ಪ್ರಮಾಣ ಹೋರಾಟ, ಸಮಾವೇಶ ಸರ್ಕಾರಕ್ಕೆ ಸಮಾಜದ ಕಳಕಳಿ ತಿಳಿಸಲಾಗಿದೆ. ಸರ್ಕಾರದ ಭರವಸೆ ಬಳಿಕ ಹೋರಾಟಕ್ಕೆ ಮಧ್ಯಂತರ ವಿರಾಮ ನೀಡಲಾಗಿದೆ. ಕ್ಲೈಮ್ಯಾಕ್ಸ್ ಬಾಕಿ ಇದೆ ಎಂದ ಅವರು ಬೇಡಿಕೆ ಈಡೇರದಿದ್ದರೇ ಉಗ್ರ ಹೋರಾಟ ನಿಶ್ಚಿತ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಸಮಾಜದ ಮುಖಂಡರಾದ ವಿರುಪಾಕ್ಷಪ್ಪ ಬೆಟಗೇರಿ, ಅಮರೇಶ ನಾಗೂರ, ನಿಂಗಪ್ಪ ಕೋಟಿ, ಡಾ.ಬಿ.ಎಸ್.ಪಾಟೀಲ ಇದ್ದರು.

ಸಾರಿಗೆ ನೌಕರರ ಹೋರಾಟ ನ್ಯಾಯ ಸಮ್ಮತವಾಗಿದೆ. ಹೋರಾಟ ತೀವ್ರಗೊಂಡರು ಸರ್ಕಾರ ಸಮಸ್ಯೆ ಪರಿಹರಿಸಲು ಗಮನ ಹರಿಸಿಲ್ಲ. ಈ ರೀತಿ ನಡೆ ಸಹಿಸಲು ಸಾಧ್ಯವಿಲ್ಲ. ಸಾರಿಗೆ ನೌಕರರ ಮುಷ್ಕರಕ್ಕೆ ಸಮಾಜದಿಂದ ಬೆಂಬಲ ನೀಡಲಾಗಿದೆ.
- ವೀಣಾ ಕಾಶಪ್ಪನವರ ಪಂಚಮಸಾಲಿ ಸಮಾಜದ ಮಹಿಳಾ ಘಟಕದ ಅಧ್ಯಕ್ಷೆ