ಬಾಗಲಕೋಟೆ: ಉತ್ತರ ಕರ್ನಾಟಕ ವಿಶ್ವ ಕರ್ಮ ಯುವ ಬರಹಗಾರ ಹಾಗೂ ಸಂಶೋಧಕರ ವೇದಿಕೆ, ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಸಹಯೋಗದಲ್ಲಿ ಫೆ. 1ರಂದು ಸಾಹಿತಿ ದಿ. ಜೀವಣ್ಣ ಮಸಳಿ ಅವರ ಬದುಕು -ಬರಹ ಕುರಿತು ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದು ಉಪನ್ಯಾಸಕ ಚಂದ್ರಶೇಖರ ಕಾಳನ್ನವರ ಹೇಳಿದರು.
ಅಂದು ಬೆಳಗ್ಗೆ 10 ಗಂಟೆಗೆ ಬಿವಿವಿ ಸಂಘದ ಮಿನಿಸಭಾಭವನದಲ್ಲಿ ಜರುಗುವ ವಿಚಾರ ಸಂಕಿರಣವನ್ನು ಧಾರವಾಡದ ಹಿರಿಯ ಸಾಹಿತಿ ಡಾ. ಎಸ್.ಆರ್. ಗುಂಜಾಳ ಉದ್ಘಾಟಿಸಲಿದ್ದಾರೆ. ಶಾಸಕ ವೀರಣ್ಣ ಚರಂತಿಮಠ ಅಧ್ಯಕ್ಷತೆ ವಹಿಸಲಿದ್ದಾರೆ. ಚಿಕ್ಕಾಬಳ್ಳಾಪುರ ಜ್ಞಾನಾನಂದ ಆಶ್ರಮದ ಶಿವಾತ್ಮಾನಂದ ಸರಸ್ವತಿ ಸಾನ್ನಿಧ್ಯ ವಹಿಸಲಿದ್ದಾರೆ. ಹಂಪಿ ಕನ್ನಡ ವಿವಿ ಪ್ರಾಧ್ಯಾಪಕ ಡಾ. ವೀರೇಶ ಬಡಿಗೇರ ಆಶಯ ನುಡಿ ಹೇಳಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೌನೇಶ್ವರ ವಚನ ವಿಚಾರ, ನಮ್ಮೂರಿನ ಪಂಚಾಳರು, ಬಾಜಿಕಾಯಕದ ಬಸವಯ್ಯ ಜೀವನ ಚರಿತ್ರೆ, ಪಾಂಚಾಳರ ಸಂಸ್ಕೃತಿ, ಪಿಸುಮಾತು, ಸಂತನೊಬ್ಬನ ಹೆಜ್ಜೆಗಳ ಕೃತಿಗಳನ್ನು ಬಿವಿವಿ ಸಂಘದ ಆಡಳಿತಾಧಿಕಾರಿ ಎನ್.ಜಿ. ಕರೂರ ಬಿಡುಗಡೆಗೊಳಿಸಲಿದ್ದಾರೆ. ಡಾ.ಜಿ.ಜಿ. ಕನಕೇಶಮೂರ್ತಿ ಪುಸ್ತಕ ಪರಿಚಯ ಮಾಡಲಿದ್ದಾರೆ. ರಾಜ್ಯ ಸರ್ಕಾರದ ನಿವೃತ್ತ ಕಾರ್ಯದರ್ಶಿ ಕೆ.ಎಸ್. ಪ್ರಭಾಕರ, ಪತ್ರಕರ್ತ ರಾಮ ಮನಗೂಳಿ, ವಿಶ್ವ ಕರ್ಮ ನೌಕರರ ಸಂಘದ ಬಾಗಲಕೋಟೆ ತಾಲೂಕು ಅಧ್ಯಕ್ಷ ದೇವೇಂದ್ರ ಅಗಳತಕಟ್ಟಿ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದರು.
ಮಧ್ಯಾಹ್ನ 12 ಗಂಟೆಗೆ ಜೀವಣ್ಣ ಮಸಳಿ ಅವರ ಬದುಕಿನ ಸಂಪಾದನೆಗಳು, ವಿವಿಧ ವಿನ್ಯಾಸಗಳು, ಪತ್ರಿಕಾ ಸಾಹಿತ್ಯ, ವ್ಯಕ್ತಿ ಚಿತ್ರಗಳು ಕುರಿತು ಪ್ರಥಮ ಗೋಷ್ಠಿ ನಡೆಯಲಿದೆ. ನಂತರ 2 ಗಂಟೆಗೆ ಜೀವಣ್ಣ ಮಸಳಿ ಅವರ ಕಾವ್ಯ, ಕಾದಂಬರಿಗಳು, ಸಂಶೋಧನೆಗಳ ಕುರಿತು ಎರಡನೇ ಗೋಷ್ಠಿ ನಡೆಯಲಿದೆ. ಪ್ರೊ. ರಾಜಕುಮಾರ ಬಡಿಗೇರ, ಪ್ರೊ. ಗುರನಾಥ ಬಡಿಗೇರ, ಡಾ. ಪಿ.ಕೆ. ರಾಠೋಡ, ಮನು ಪತ್ತಾರ, ವಿಶ್ವನಾಥ ಪತ್ತಾರ ಸೇರಿದಂತೆ ಇತರರು ವಿಷಯ ಮಂಡಿಸಲಿದ್ದಾರೆ. ಮುಖಂಡರಾದ ಮೌನೇಶ ಪತ್ತಾರ, ಈರಣ್ಣ ಪತ್ತಾರ, ಸಂಗಮೇಶ ಬಡಿಗೇರ, ನಾಗರಾಜ ಕಮ್ಮಾರ ಸುದ್ದಿಗೋಷ್ಠಿಯಲ್ಲಿ ಇದ್ದರು.
ಸಮಾರೋಪ
ಮಧ್ಯಾಹ್ನ 3.30 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಹಿರಿಯ ವಿದ್ವಾಂಸ ಡಾ. ಶಿಲಾಕಾಂತ ಪತ್ತಾರ, ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ ಭಾಗವಹಿಸಲಿದ್ದಾರೆ. ಪ್ರೊ. ಪಿ.ಬಿ. ಬಡಿಗೇರ ಅಧ್ಯಕ್ಷತೆ ವಹಿಸಲಿದ್ದಾರೆ. ನಂತರ ಮೌನೇಶ್ವರರ ವಚನ ಗಾಯನ ಕಾರ್ಯಕ್ರಮ ಜರುಗಲಿದೆ ಎಂದರು.