ಬಾಗಲಕೋಟೆ: ಪುಣ್ಯಕ್ಷೇತ್ರ ಸಿದ್ದನಕೊಳ್ಳದ ಸಿದ್ದೇಶ್ವರ ಮಠದಿಂದ ೨೦೨೩ನೇ ಸಾಲಿನ ಶ್ರೀಸಿದ್ಧಶ್ರೀ ರಾಷ್ಟ್ರೀಯ ಪ್ರಶಸ್ತಿಯನ್ನು ವಿಆರ್ ಎಲ್ ಸಮೂಹ ಸಂಸ್ಥೆ ಚೇರ್ಮನ ಡಾ.ವಿಜಯ ಸಂಕೇಶ್ವರ ಅವರಿಗೆ ಪ್ರದಾನ ಮಾಡಲಾಯಿತು.
ಮೂರು ದಿನಗಳ ಸಿದ್ಧಶ್ರೀ ಉತ್ಸವದಲ್ಲಿ ಎರಡನೇ ದಿನವಾದ ಭಾನುವಾರ ರಾತ್ರಿ ನಡೆದ ಉತ್ಸವ ಹಾಗೂ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಡಾ.ಸಂಕೇಶ್ವರ ಅವರಿಗೆ ಪ್ರಶಸ್ತಿ ವಿತರಿಸಲಾಯಿತು. ಹಾಗೆಯೇ ವಿಜಯಾನಂದ ಚಿತ್ರಕ್ಕೆ ಅತ್ಯುತ್ತಮ ಬಯೋಪಿಕ್ ಪ್ರಶಸ್ತಿಯನ್ನು ಸಹ ಇದೇ ಸಂದರ್ಭದಲ್ಲಿ ಪ್ರದಾನ ಮಾಡಲಾಯಿತು.
ಸಿದ್ದನಕೊಳ್ಳದ ಧರ್ಮಾಧಿಕಾರಿ ಡಾ.ಶಿವಕುಮಾರ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಸಮಾರಂಭದಲ್ಲಿ ಡಾ. ವಿಜಯ ಸಂಕೇಶ್ವರ ಅವರಿಗೆ ಮೈಸೂರ ಪೇಟ, ಶಾಲು, ಹಾರ ಹಾಕಿ, ಪಾರಿತೋಷಕ ಹಾಗೂ ನಗದು ಹಣದೊಂದಿಗೆ ಶ್ರೀಸಿದ್ಧಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಲೆ, ಕಲಾವಿದರ ಪ್ರೋತ್ಸಾಹಿಸುವ ಮಠ ಎಂದು ಖ್ಯಾತಿ ಪಡೆದಿರುವ ಸಿದ್ದನಕೊಳ್ಳದ ಮಠದಿಂದ ಉತ್ಸವ ವೇಳೆ ಚಲನಚಿತ್ರೋತ್ಸವ ನಡೆಯುತ್ತ ಬಂದಿದ್ದು, ಈ ವರ್ಷದ ಅತ್ಯುತ್ತಮ ಬಯೋಫಿಕ್ ಚಿತ್ರ ಎಂದು ವಿಜಯಾನಂದ ಚಿತ್ರಕ್ಕೆ ಶ್ರೀಮಠದಿಂದಿಂದ ಪ್ರಶಸ್ತಿ ಚಿತ್ರತಂಡದ ಪರವಾಗಿ ಡಾ.ವಿಜಯ ಸಂಕೇಶ್ವರ ಅವರಿಗೆ ಪ್ರದಾನ ಮಾಡಲಾಯಿತು.
ಕಾಯಕದಲ್ಲಿ ದೇವರನ್ನು ಕಾಣುವ ಡಾ.ಸಂಕೇಶ್ವರ ಅವರಿಗೆ ಈ ಪ್ರಶಸ್ತಿ ನೀಡಿದ್ದು ಶ್ರೀಮಠ ಹಾಗೂ ಮಠದ ಭಕ್ತರಿಗೆ ಅಪಾರ ಸಂತೋಷ ತಂದಿದೆ. ಬಿಡುವಿಲ್ಲದ ಕರ್ತವ್ಯದ ಮಧ್ಯಯೂ ಸಿದ್ದನಕೊಳ್ಳಕ್ಕೆ ಆಗಮಿಸಿ ನಮ್ಮ ಗೌರವ ಸ್ವೀಕರಿಸಿದ ಬಗ್ಗೆ ಮಠದ ಧರ್ಮಾಧಿಕಾರಿ ಡಾ.ಶಿವಕುಮಾರ ಸ್ವಾಮೀಜಿ ಸಂತೋಷ ವ್ಯಕ್ತಪಡಿಸಿದರು.
ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ ಮಠದ ಭಕ್ತರನ್ನು ಉದ್ದೇಶಿಸಿ ಮಾತನಾಡಿದರು. ಮಠ, ಮಂದಿರ, ಪೂಜ್ಯರ ದರ್ಶನ, ಆಶೀರ್ವಾದ ಪಡೆಯುವುದನ್ನು ಅನೇಕ ವರ್ಷಗಳಿಂದಲೂ ನಡೆದಿದ್ದು, ಇದು ನನ್ನ ಹಿಂದಿನ ಜನ್ಮದ ಪುಣ್ಯ ಎಂದರು.
ಬ್ಯಾಂಕ್ ಅಕೌಂಟ್ ಇಲ್ಲ, ಟ್ರಸ್ಟ್ ಇಲ್ಲ. ಬಂದ ಕಾಣಿಕೆಯನ್ನು ಭಕ್ತರಿಗೆ ಕೊಡುತ್ತಿರುವ ಈ ಮಠದ ಕಾರ್ಯ ಅಚ್ಚರಿ ಹಾಗೂ ಆಶ್ಚರ್ಯ ತಂದಿದೆ. ಈ ಕ್ಷೇತ್ರದ ಮಹಿಮೆ ಅಪಾರವಾಗಿದ್ದು, ಇಲ್ಲಿಗೆ ನಾನು ಪ್ರಥಮ ಸಲ ಬಂದಿದ್ದೇನೆ. ಈ ಸ್ಥಳಕ್ಕೆ ಅನೇಕ ಸಾಧಕರು ಬಂದು ಹೋಗಿದ್ದು, ಇಲ್ಲಿಯ ಮಹಿಮೆ ಅಪಾರ ಎನ್ನುವುದು ಮನವರಿಕೆ ಆಗಿದೆ ಎಂದರು.
ನನಗೆ ಯಾವುದೇ ಪ್ರಶಸ್ತಿ ಬಂದಾಗಲೂ ಹಣವನ್ನು ನಾನು ಪಡೆಯಲ್ಲ. ಬರೀ ಪ್ರಶಸ್ತಿ ಮಾತ್ರ ಪಡೆಯುತ್ತೇನೆ. ಎಂಪಿ, ಎಂಎಲ್ಸಿ ಪೆನ್ಷನ್ ಸಹ ನಾನು ತೆಗೆದುಕೊಳ್ಳಲ್ಲ. ಇಲ್ಲಿಯೂ ಸಹ ಪ್ರಶಸ್ತಿ ಹಣ ಬೇಡ ಎಂದರೂ ಸ್ವಾಮೀಜಿ ಇದು ಆಶೀರ್ವಾದ ಪಡೆಯಲೇಬೇಕು ಅಂತಿದ್ದಾರೆ. ಈ ಹಣವನ್ನು ಹುಬ್ಬಳ್ಳಿಯಲ್ಲಿ ನಿರ್ಮಾಣ ಮಾಡುತ್ತಿರುವ ದೇವಾಲಯಕ್ಕೆ ನಾಳೆಯೇ ಸಲ್ಲಿಸುತ್ತೇನೆ ಎಂದು ತಿಳಿಸಿದರು.
ಸಿದ್ದನಕೊಳ್ಳ ಕ್ಷೇತ್ರ ಅಭೂತಪೂರ್ವವಾಗಿ ಬೆಳೆಯಬೇಕು. ಮುಂದಿನ ಪೀಳಿಗೆಗೆ ಇದು ಉಳಿಯಬೇಕು. ಇಲ್ಲಿನ ಶ್ರೀಗಳು ದುಡ್ಡು ತೆಗೆದುಕೊಳ್ಳಲ್ಲ. ಹೀಗಾಗಿ ಮಠದ ಭಕ್ತರು, ಉತ್ಸವಗಳ ಪ್ರಾಯೋಜಕರು ಎಲ್ಲರೂ ಸೇರಿ ಕ್ಷೇತ್ರ ಅಭಿವೃದ್ದಿ ಪಡಿಸಿ, ನಾನು ಸಹ ನಿಮ್ಮ ಜೊತೆ ಇರುತ್ತೇನೆ ಎಂದು ಹೇಳಿದರು.
ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ, ಕುಷ್ಟಗಿ ಶಾಸಕ ಅಮರೇಗೌಡ ಭಯ್ಯಾಪುರ, ಬಿಜೆಪಿ ಯುವ ಮುಖಂಡ ಡಾ.ಆರ್.ಎಸ್. ರಾಜು, ಮಲ್ಲಿಕಾರ್ಜುನ ಚರಂತಿಮಠ, ಚಿತ್ರ ನಿರ್ಮಾಪಕ ಘನಶಾಮ ಭಾಂಡಗೆ ಸೇರಿದಂತೆ ಅನೇಕರು ವೇದಿಕೆ ಮೇಲಿದ್ದರು.