ಬಾಗಲಕೋಟೆ: ಬಾಗಲಕೋಟೆ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ನನ್ನ ಹೆಸರು ಹೇಳಿಕೊಂಡು ನೌಕರಿ, ಮನೆ ಕೊಡಿಸುತ್ತೇವೆ ಎಂದು ಹೇಳಿ ಯಾರಾದರು ಹಣ ಕೇಳಿದರೆ ಜನರು ನಂಬಬಾರದು. ಈ ಬಗ್ಗೆ ನನ್ನ ಗಮನಕ್ಕೆ ತರಬೇಕು ಎಂದು ಶಾಸಕ ವೀರಣ್ಣ ಚರಂತಿಮಠ ಮನವಿ ಮಾಡಿದರು.
ಡಿಸಿಸಿ ಬ್ಯಾಂಕ್‌ನಲ್ಲಿ ನೌಕರಿ ಕೊಡಿಸುತ್ತೇನೆ ಅಂತ ಹೇಳಿ ಬಿಜೆಪಿ ಕಾರ್ಯಕರ್ತ ರಾಘವೇಂದ್ರ ನಾಗೂರ ವಂಚನೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಮಾಧ್ಯಮಗಳಲ್ಲಿಯೂ ಸುದ್ದಿಯಾಗಿದೆ. ಇದಕ್ಕೂ ನನಗೂ ಸಂಬಂಧವಿಲ್ಲ. ಆತ ಪಕ್ಷದ ಸಾಮಾನ್ಯ ಕಾರ್ಯಕರ್ತ. ರಾಘವೇಂದ್ರ ಅವರಿಗೆ ಪಕ್ಷದಲ್ಲಿ ಯಾವುದೇ ಜವಾಬ್ದಾರಿ ಇಲ್ಲ. ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡುವಂತೆ ಸೂಚನೆ ನೀಡಲಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಗುತ್ತಿಗೆದಾರರು, ಸಾರ್ವಜನಿಕರು ಯಾರೇ ಇರಲಿ ಈ ಬಗ್ಗೆ ಎಚ್ಚರ ವಹಿಸಬೇಕು. ನನ್ನ ಹೆಸರು ಹೇಳಿದಲ್ಲಿ ಯಾರು ನಂಬಬಾರದು. ಖುದ್ದು ಭೇಟಿಯಾಗಿ ಸಮಸ್ಯೆ ಪರಿಹರಿಸಿಕೊಳ್ಳಬೇಕು ಎಂದ ಅವರು, ಮತಕ್ಷೇತ್ರ ವ್ಯಾಪ್ತಿಯಲ್ಲಿ ಕಳ್ಳಬಟ್ಟಿ ಸಾರಾಯಿ ತಯಾರಿಕೆ ಮತ್ತು ಮಾರಾಟ, ಜೂಜು ಅಡ್ಡೆಗಳನ್ನು ನಡೆಸಲು ಅವಕಾಶ ನೀಡಬಾರದು. ಯಾರಾದರು ಭಾಗಿಯಾದಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಕುಮಾರೇಶ್ವರ ಆಸ್ಪತ್ರೆಯಲ್ಲಿ ಸೇವೆ
ಕರೊನಾ ವೈರಸ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಬಿವಿವಿ ಸಂಘದ ಕುಮಾರೇಶ್ವರ ಆಸ್ಪತ್ರೆ ಸರ್ಕಾರದೊಂದಿಗೆ ಕೈ ಜೋಡಿಸಿದೆ. ಆಸ್ಪತ್ರೆ ವೈದ್ಯರು-ಸಿಬ್ಬಂದಿಗೆ ರಜೆ ರದ್ದು ಮಾಡಲಾಗಿದೆ. ಕೋವಿಡ್-19 ಸಹಾಯವಾಣಿ ಆರಂಭಿಸಲಾಗಿದೆ. ನಮ್ಮಲ್ಲಿ ಬರುವ ರೋಗಿಯ ರೋಗದ ಲಕ್ಷಣ, ಅವರ ಪ್ರವಾಸದ ವಿವರ ಪಡೆದು ಸೋಂಕು ತಗುಲಿರುವ ಶಂಕೆ ವ್ಯಕ್ತವಾದಲ್ಲಿ ರಕ್ತ ಮತ್ತು ಗಂಟಲು ದ್ರಾವಣ ಪಡೆದು ಜಿಲ್ಲಾ ಆಸ್ಪತ್ರೆಗೆ ಕಳುಹಿಸಲು ಟ್ರೈಯೇಜ್ ಘಟಕ ಸ್ಥಾಪಿಸಲಾಗಿದೆ. ಒಂದು ಆಂಬುಲೆನ್ಸ್ ಸಿದ್ಧಗೊಳಿಸಲಾಗಿದೆ. 5 ಹಾಸಿಗೆ ತುರ್ತು ಚಿಕಿತ್ಸಾ ಘಟಕ, 13 ಹಾಸಿಗೆಯ ಐಸೋಲೇಷನ್ ವಾರ್ಡ್ ಸ್ಥಾಪಿಸಲಾಗಿದೆ. 24*7 ವೈದ್ಯರು, ಸಿಬ್ಬಂದಿ ಸೇವೆ ನೀಡಲಿದ್ದಾರೆ. ಸಾರ್ವಜನಿಕರು ಕೂಡ ಆರೋಗ್ಯ ಇಲಾಖೆ ಮತ್ತು ವೈದ್ಯರು ನೀಡಿರುವ ಸಲಹೆಗಳನ್ನು ಪಾಲಿಸಬೇಕು. ಸ್ವಚ್ಛತೆ ಕಾಪಾಡಬೇಕು ಎಂದು ಶಾಸಕ ವೀರಣ್ಣ ಚರಂತಿಮಠ ಮನವಿ ಮಾಡಿದರು.