ಬಾಗಲಕೋಟೆ: ಸಪ್ತ ಸ್ವರಗಳ ಝೇಂಕಾರ, ರಾಗಗಳ ಅಲಾಪ, ಕೊಳಲು, ಮೃಂದಂಗ, ತಬಾಲಾ, ಸಂತೂರ ವಾದ್ಯಗಳ ನಿನಾದ….! ಹಿಂದೂಸ್ತಾನಿ ಸಂಗೀತ ಕ್ಷೇತ್ರದ ದಿಗ್ಗಜರ ಜುಗಲಬಂದಿ. ಅಹೋರಾತ್ರಿ ಸಂಗೀತೋತ್ಸವ ಕಾರ್ಯಕ್ರಮ ಕೋಟೆನಗರಿ ಸಂಗೀತ ಲೋಕದಲ್ಲಿ ಮಿಂದೇಳುವಂತೆ ಮಾಡಿತು.
ನಟರಾಜ ಸಂಗೀತ ವಿದ್ಯಾಲಯ ಮತ್ತು ಕಲಾ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ನಟರಾಜ ಸಂಗೀತ ವಿದ್ಯಾಲಯದ ಪಂ. ಆರ್.ಎಚ್. ಮೋರೆ ಶಿಷ್ಯ ವೃಂದ ನವನಗರದ ಕಲಾಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಕಲಾವಿದರಿಂದ ಅಹೋರಾತ್ರಿ ಸಂಗೀತೋತ್ಸವ ಗಮನ ಸೆಳೆಯಿತು. ಸಂಗೀತ ಪ್ರಿಯರು, ಆಸಕ್ತರು ಶಾಸ್ತ್ರೀಯ ಸಂಗೀತದ ಲಹರಿಯಲ್ಲಿ ಅಕ್ಷರಶಃ ಮುಳಗಿ ಹೋದರು.
ನಟರಾಜ ಸಂಗೀತ ವಿದ್ಯಾಲಯದ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಸಮೂಹ ಗಾಯನ, ತಬಲಾವಾದನ ಆಕರ್ಷಿಸಿತು. ಮಂಗಳೂರಿನ ಅಂಕುಶ ನಾಯಕ ಸಿತಾರವಾದನ, ದಿಲ್ಲಿಯ ಡಾ. ಬಿಪುಲರೇ ಅವರ ಸಂತೂರ ನಾದಕ್ಕೆ ಹಾಗೂ ಪದ್ಮಶೀ ಪಂ. ಧಾರವಾಡದ ಎಂ. ವೆಂಕಟೇಶಕುಮಾರ ಗಾಯನಕ್ಕೆ ಸಭಿಕರು ನಿಬ್ಬೆರಗಾದರು. ರಘುನಾಥ ನಾಕೋಡ, ಡಾ.ರವಿಕಿರಣ ನಾಕೋಡ ತಬಲಾ ವಾದನ, ಡಾ. ವಿಜಯಕುಮಾರ ಪಾಟೀಲ ಅವರ ಗಾಯನ, ಮುಂಬಯಿನ ಪಂ. ರೋಣು ಮುಜುಮ್ ದಾರ ಅವರ ಬಾನ್ಸೂರಿ ಹೊಸ ಲೋಕಕ್ಕೆ ಕೊಂಡ್ಯೊಯಿತು.
ಮೈಸೂರಿನ ಮೈಸೂರ ಮಂಜುನಾಥ ವಯೋಲಿನ್ ವಾದನವಂತು ದಕ್ಷಿಣ, ಉತ್ತರ ಕರ್ನಾಟಕದ ಸಾಂಸ್ಕೃತಿಕ, ಸಾಹಿತ್ಯ, ಕಲೆ ಸಮ್ಮೀಲಗೊಳಿಸಿತು. ಪಂ. ರಾಜೇಂದ್ರ ನಾಕೋಡ, ಡಾ. ರವಿಕಿರಣ ನಾಕೋಡ, ಕೇಶವ ಜೋಶಿ, ಮೃದಂಗದಲ್ಲಿ ಅನಿರುದ್ದ ಭಟ್, ಹಾರ್ಮೋನಿಯಂದಲ್ಲಿ ನರೇಂದ್ರ ನಾಯಕ, ಸತೀಶ ಕೊಳ್ಳಿ ಸಾಥಿ ನೀಡಿದರು. ಸ್ಥಳೀಯ ೩೨ ಕಲಾವಿದರಿಂದ ತಬಲಾ ಸೋಲೋ ಆಕರ್ಷಿಸಿತು.
ಕಾರ್ಯಕ್ರಮದಲ್ಲಿ ೨೫ ಸಾವಿರ ರೂ. ನಗದು, ಪ್ರಶಸ್ತಿ ಫಲಕ ಹೊಂದಿರುವ ಅನೋಖೆ ತಬಲಾ ವಾದಕ ಪ್ರಶಸ್ತಿಯನ್ನು ಧಾರವಾಡದ ಪಂ.ರಘುನಾಥ ನಾಕೋಡ ಅವರಿಗೆ ನೀಡಿ ಗೌರವಿಸಲಾಯಿತು. ಅಲ್ಲದೆ ಕಾಳಿದಾಸ ಸಮ್ಮಾನ ಪುರಸ್ಕೃತ ಪದ್ಮಶ್ರೀ, ಖ್ಯಾತ ಗಾಯಕ ಪಂ. ಎಂ. ವೆಂಕಟೇಶಕುಮಾರ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಖ್ಯಾತ ಗಾಯಕ ಅನಂತ ಕುಲಕರ್ಣಿ ಹಾಗೂ ವಿಪ್ರಶ್ರೀ ಪ್ರಶಸ್ತಿ ಪುರಸ್ಕೃತ ಸುರೇಂದ್ರ ಕುಲಕರ್ಣಿ ಅವರನ್ನು ಸನ್ಮಾನಿಸಲಾಯಿತು.
ಮುರನಾಳ ಮಳೆಯಪ್ಪ ಸ್ವಾಮಿಮಠದ ಜಗನ್ನಾಥ ಮಹಾಪುರಷ ಸಾನ್ನಿಧ್ಯ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ, ಮುಖಂಡ ಮಲ್ಲಿಕಾರ್ಜುನ ಚರಂತಿಮಠ, ಉದ್ಯಮಿ ಪವನ ಸೀಮಿಕೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಬಸವರಾಜ ಹೂಗಾರ, ಹಿರಿಯ ತಬಲಾ ವಾದಕ ಪಂ. ಆರ್.ಎಚ್. ಮೋರೆ, ಖ್ಯಾತ ಸಾಂಸ್ಕೃತಿಕ ಸಂಘಟಕ, ಧಾರವಾಡದ ನಿಜಗುಣಿ ರಾಜಗುರು, ಹೈಕೋರ್ಟ ನ್ಯಾಯವಾದಿ ಧಾರವಾಡದ ಉದಯ ದೇಸಾಯಿ, ರಘುನಾಥ ನಾಕೋಡ, ಪಂ.ವೆಂಕಟೇಶಕುಮಾರ, ಅನಂತ ಕುಲಕರ್ಣಿ, ಕೇಶವ ಜೋಶಿ, ವಿಷ್ಣು ಜೋಶಿ, ರವಿ ಮಠ, ಪ್ರವೀಣ ಮಂಕಣಿ, ಸುನೀಲ ಮಠ ಸೇರಿದಂತೆ ಇತರರು ಇದ್ದರು.