ಜಿಲ್ಲೆ

ಆಹಾರ ಭದ್ರತಾ ಕಾಯ್ದೆ ಅನುಷ್ಠಾನಕ್ಕೆ ಬದ್ಧ

ಬಾಗಲಕೋಟೆ: ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಸಮರ್ಪಕವಾಗಿ ಅನುಷ್ಠಾನಕ್ಕೆ ತರುವಲ್ಲಿ ರಾಜ್ಯ ಆಹಾರ ಆಯೋಗವು ಬದ್ಧವಾಗಿದೆ ಎಂದು ಆಹಾರ ಆಯೋಗದ ಅಧ್ಯಕ್ಷ ಎಚ್.ವಿ.ಶಿವಶಂಕರ ಹೇಳಿದರು.

ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಗುರುವಾರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರದಿಂದ ನೀಡುವ ಉಚಿತ ಆಹಾರಧಾನ್ಯ ಅರ್ಹ ಲಾನುಭವಿಗಳಿಗೆ ತಲುಪಿಸುವ ಉದ್ದೇಶದಿಂದ ಆಯೋಗವು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿದೆ. ಕಳೆದ ಎರಡು ದಿನಗಳಲ್ಲಿ ಜಿಲ್ಲೆಯ 9 ತಾಲೂಕುಗಳಲ್ಲಿನ ಪೈಕಿ 48 ಸಂಸ್ಥೆಗಳಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಸ್ವಚ್ಛತೆಗೆ ಹೆಚ್ಚು ಮಹತ್ವ ನೀಡುರುವುದು ಕಂಡುಬಂದಿದೆ ಎಂದರು.

ಜಿಲ್ಲೆಯಲ್ಲಿ 7 ನ್ಯಾಯಬೆಲೆ ಅಂಗಡಿ, 3 ಆಹಾರ ಧಾನ್ಯಗಳ ಗೋದಾಮು, 5 ಅಂಗನವಾಡಿ ಕೇಂದ್ರ, 4 ರೈತ ಸಂಪರ್ಕ ಕೇಂದ್ರ, 9 ವಿವಿಧ ವಸತಿ ನಿಲಯ, 4 ಅನಾಥಾಶ್ರಮ, 2 ಎಚ್.ಆರ್.ಸಿ. ಕೇಂದ್ರ, 1 ಕೆಎಂಎ್ ಹಾಗೂ 2 ಮಧ್ಯಾಹ್ನದ ಬಿಸಿಯೂಟದ ಕೇಂದ್ರ ಸೇರಿ ಇತರ ಸಂಸ್ಥೆಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಕೆಲವೆಡೆ ಕಳಪೆ ಆಹಾರ ಧಾನ್ಯ ವಿತರಣೆ ಕಂಡು ಬಂದಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ವರದಿ ಪಡೆದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅಂಗನವಾಡಿ ಕೇಂದ್ರಗಳಲ್ಲಿ ನಿರ್ವಹಣೆ ಕೊರತೆ ಇದೆ. ಸ್ಟಾಕ್ ರಿಜಿಸ್ಟರ್ ಚಾಲ್ತಿಯಲ್ಲಿ ಇಲ್ಲದಿರುವುದು ಕಂಡುಬಂದಿದ್ದು, ಸಂಬಂಧಿಸಿದ ಸಿಡಿಪಿಒ ಮತ್ತು ಮೇಲ್ವಿಚಾರಕರು ಕೇಂದ್ರಗಳಿಗೆ ಭೇಟಿ ನೀಡಿರುವ ಬಗ್ಗೆ ಯಾವುದೇ ದಾಖಲೆ ಇರುವುದಿಲ್ಲ. ಹುನಗುಂದದಲ್ಲಿರುವ ಒಂದು ಅಂಗನವಾಡಿ ಕೇಂದ್ರದಲ್ಲಿ ಮೊಟ್ಟೆ ನೀಡಿಲ್ಲ, ಕೆಲವೊಂದು ಕಡೆ ಅಂದಾಜಿನ ಮೇಲೆ ಆಹಾರ ಧಾನ್ಯ ವಿತರಣೆಯಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳು ಗಮನಹರಿಸಬೇಕು. ನರೇಗಾ ಮೂಲಕ ಅಂಗನವಾಡಿ ಕೇಂದ್ರಗಳಲ್ಲಿ ಶೌಚಗೃಹ ನಿರ್ಮಿಸಬೇಕು ಎಂದು ಸೂಚಿಸಿದರು.

ವಸತಿ ನಿಲಯಗಳಿಗೆ ಶೇ.95 ರಷ್ಟು ಪಿಲ್ಲೋಸ್, ಕರ್ಟನ್ ನೀಡಿದ್ದು, ಸರಿಯಾಗಿ ವಿತರಣೆಯಾಗಿರುವುದಿಲ್ಲ. ಅಲ್ಲದೆ, ಬರ್ನಿಂಗ್ ಮಷಿನ್ ಬಳಕೆಯಾಗುತ್ತಿಲ್ಲ. ಇದನ್ನು ಹೊರತು ಪಡಿಸಿ ಉಳಿದೆಲ್ಲ ವ್ಯವಸ್ಥೆಗಳು ಚೆನ್ನಾಗಿರುವುದಾಗಿರುವಾಗಿ ಪ್ರಸಂಶೆ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿರುವ 5 ಎಂಎಸ್‌ಪಿಟಿಸಿಗಳು ಚೆನ್ನಾಗಿ ಕೆಲಸ ನಿರ್ವಹಿಸುತ್ತಿದ್ದು, ಸ್ವಚ್ಛತೆಗೆ ಹೆಚ್ಚು ಗಮನಹರಿಸಿದ್ದಾರೆ. ಜಮಖಂಡಿ ಎಂಎಸ್‌ಪಿಟಿಸಿ ಕೇಂದ್ರವು ಉತ್ತಮ ನಿರ್ವಹಣೆ ಮಾಡುತ್ತಿದ್ದು, ಪ್ರಸಂಶನಾ ಪತ್ರಕ್ಕೆ ಅರ್ಹವಾಗಿದೆೆ, ಅಲ್ಲದೆ, ತುಳಸಿಗೇರಿ ಕುವೆಂಪು ಮಾದರಿ ಶಾಲೆಯಲ್ಲಿ ಉತ್ತಮ ಪರಿಸರ ರೂಪಿಸಲಾಗಿದೆ. ಅವರಿಗೂ ಆಯೋಗದಿಂದ ಪ್ರಸಂಶನಾ ಪತ್ರ ನೀಡಲಾಗುವುದು ಎಂದು ತಿಳಿಸಿದರು.

ರಾಜ್ಯ ಆಹಾರ ಆಯೋಗದ ಸದಸ್ಯೆ ಮಂಜುಳಾ ಸಾತನೂರ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಜಿಪಂ ಉಪಕಾರ್ಯದರ್ಶಿ ಅಮರೇಶ ನಾಯಕ, ಆಹಾರ ಇಲಾಖೆ ಉಪನಿರ್ದೇಶಕ ಶ್ರೀಶೈಲ ಕಂಕಣವಾಡಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಹೇತ ಪೋತದಾರ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಮಂಜುನಾಥ ಡೊಂಬರ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಚೇತನಾ ಪಾಟೀಲ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ಎನ್.ದೇಸಾಯಿ ಇತರರು ಉಪಸ್ಥಿತರಿದ್ದರು.

ರಾಜ್ಯಾದ್ಯಂತ ಆಯೋಗದಿಂದ ಪ್ರವಾಸ ಕೈಗೊಂಡಿದ್ದು, ರಾಜ್ಯದ ಯಾವ ಜಿಲ್ಲೆಯಲ್ಲಿಯೂ ಶೇ.100 ರಷ್ಟು ಆಹಾರಧಾನ್ಯ ವಿತರಣೆಯಲ್ಲಿ ಪ್ರಗತಿ ಸಾಧಿಸಿರುವುದಿಲ್ಲ. ಬಾಗಲಕೋಟೆಯಲ್ಲಿ ಮಾತ್ರ ಶೇ.100 ರಷ್ಟು ಕಾರ್ಯಕ್ರಮ ಅನುಷ್ಠಾನಗೊಂಡಿದೆ. ಇಂತಹ ಮಾದರಿ ಕೆಲಸಗಳು ಎಲ್ಲೆಡೆ ನಡೆಯಬೇಕು ಎನ್ನುವುದು ಆಯೋಗದ ಆಶಯ.
- ಎಚ್.ವಿ.ಶಿವಶಂಕರ, ಆಹಾರ ಆಯೋಗದ ಅಧ್ಯಕ್ಷ

EndFragment