ಬಾಗಲಕೋಟೆ: ನರೇಗಾ ಯೋಜನೆ ಅಡಿಯಲ್ಲಿ ಕೈಗೊಳ್ಳುವ ಕಾಮಗಾರಿಗಳನ್ನು ನೈಸರ್ಗಿಕ ಸಂಪನ್ಮೂಲಗಳು ಉಳಿಸಿ ಬೆಳೆಸುವ ನಿಟ್ಟಿನಲ್ಲಿ, ಜಲಾನಯನ ಆಧಾರಿತ ಕ್ರಿಯಾ ಯೋಜನೆ ರೂಪಿಸಬೇಕು ಎಂದು ಜಿ.ಪಂ ಸಿಇಒ ಟಿ.ಭೂಬಾಲನ್ ಹೇಳಿದರು.
ಜಿಲ್ಲಾ ಪಂಚಾಯಿತಿ ನೂತನ ಸಭಾಭವನದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಆಶ್ರಯದಲ್ಲಿ ಗ್ರಾಮೀಣಾಭಿವೃದ್ಧ್ದಿ ಇಲಾಖೆಯ ಸಹಾಯಕ ನಿರ್ದೇಶಕರು, ತಾಂತ್ರಿಕ ಸಂಯೋಜಕರು, ತಾಂತ್ರಿಕ ಸಹಾಯಕರು ಹಾಗೂ ಕೃಷಿ, ತೋಟಗಾರಿಕೆ, ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಜಿ.ಐ.ಎಸ್ ರೆಡ್ಜ್ ಟು ವ್ಯಾಲ್ಯೂ ಆಧಾರಿತ ಕ್ರಿಯಾ ಯೋಜನೆ ರೂಪಿಸುವ ಕುರಿತು ಹಮ್ಮಿಕೊಂಡ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಕ್ರಿಯಾ ಯೋಜನೆಗಳು ಗುಣಮಟ್ಟದಿಂದ ಕೂಡಿರಬೇಕು ಎನ್ನುವ ಕಾರಣಕ್ಕೆ ಸರ್ಕಾರ ಜಿಐಎಸ್ ಮಾರ್ಗಸೂಚಿ ರೂಪಿಸಿದೆ. ಈಗಾಗಲೇ ಬಳ್ಳಾರಿ ಜಿಲ್ಲೆಯ ಹಡಗಲಿ ಹಾಗೂ ಎಚ್.ಬಿ.ಹಳ್ಳಿ ತಾಲೂಕುಗಳಲ್ಲಿ ಜಲಾನಯನ ಪ್ರದೇಶದಲ್ಲಿ ರೆಡ್ಜ ಟು ವ್ಯಾಲ್ಯೂ ಪರಿಕಲ್ಪನೆಯಲ್ಲಿ ನರೇಗಾ ಯೋಜನೆಯಡಿ ವಿವಿಧ ಚಟುವಟಿಕೆಗಳನ್ನು ಅನುಷ್ಠಾನಗೊಳಿಸಿದ್ದು ಯಶಸ್ವಿಯಾಗಿದೆ. ಈ ಪರಿಕಲ್ಪಣೆ ಎಲ್ಲ ಕಡೆಗಳಲ್ಲಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಯಾದಗಿರಿ, ಕೊಪ್ಪಳ, ಗದಗ, ಹಾವೇರಿ, ಬೆಳಗಾವಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಶಿಬಿರಾರ್ಥಿಗಳಿಗೆ ತರಬೇತಿ ಹಮ್ಮಿಕೊಂಡಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕಾರ್ಯಾಗಾರದ ರಾಜ್ಯ ಮಟ್ಟದ ನೋಡಲ್ ಅಧಿಕಾರಿ ಎಸ್.ಬಿ.ದಿಡ್ಡಿಮನಿ ಮಾತನಾಡಿ, ಅಭಿವೃದ್ಧ್ದಿ ಪೂರಕ ಯೋಜನೆ ರೂಪಿಸಲು ಜಲಾನಯನ ಆಧಾರಿತ ಕಾರ್ಯಕ್ರಮ ಅಗತ್ಯವಾಗಿದೆ. ಇದು ಮಾನವ ದಿನಗಳ ಸೃಷ್ಟಿಯ ಜೊತೆಗೆ ಅಂತರ್ಜಲ ಮರುಪೂರ್ಣ ಸಾಧ್ಯವಾಗುತ್ತದೆ. ಇದರಿಂದ ಕೃಷಿ ಬೆಳೆಗೆ ಉತ್ತೇಜನ ನೀಡಿದಂತಾಗುತ್ತದೆ ಎಂದು ತಿಳಿಸಿದರು.
ಮುಂದಿನ ಆರ್ಥಿಕ ವರ್ಷದಲ್ಲಿ ಆಯ್ದ ಗ್ರಾಮ ಪಂಚಾಯಿತಿಗಳನ್ನು ಆಯ್ದುಕೊಳ್ಳಲಾಗುತ್ತಿದ್ದು, ಈ ನಿಟ್ಟಿನಲ್ಲಿ ಕೃಷಿ, ತೋಟಗಾರಿಕೆ, ಅರಣ್ಯ ಇಲಾಖೆಗಳ ಮೂಲಕ ಈ ಯೋಜನೆ ಆಧಾರಿತ ಕಾರ್ಯಕ್ರಮಗಳ ಪ್ರಾಥಮಿಕ ತರಬೇತಿ ನೀಡಲಾಗುತ್ತಿದೆ. ಎರಡು ವರ್ಷದಲ್ಲಿ ಜಲಾನಯನ ಆಧಾರಿತ ಯೋಜನೆ ಹಮ್ಮಿಕೊಳ್ಳಲಾಗುತ್ತಿದೆ. ಆದ್ದರಿಂದ 4 ದಿನಗಳ ಕಾಲ ಜರಗುವ ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಅಮರೇಶ ನಾಯಕ, ಕೃಷಿ ಜಂಟಿ ನಿರ್ದೇಶಕಿ ಚೇತನಾ ಪಾಟೀಲ, ಕೃಷಿ ಉಪನಿರ್ದೇಶಕ ಎಸ್.ಬಿ.ಕೊಂಗವಾಡ, ಉಪ ಅರಣ್ಯ ಸಂರಕ್ಷಣಧಿಕಾರಿ ಎಸ್.ಬಿ.ಸಾವಂತ ಉಪಸ್ಥಿತರಿದ್ದರು.
ಜಿಲ್ಲೆಯಲ್ಲಿ ಆಯಾ ಜಲಾನಯನ ಪ್ರದೇಶಗಳಲ್ಲಿ ಕ್ರಿಯಾ ಯೋಜನೆ ತಯಾರಿಕೆಗಾಗಿ ಟ್ರಾವರ್ಸ ಸರ್ವೇ ಬಗ್ಗೆ ಕ್ಷೇತ್ರ ಪ್ರವಾಸದ ಮೂಲಕ ತರಬೇತಿ ಕಾರ್ಯಾಗಾರ ನಡೆಯಲಿದೆ.
- ಎಸ್.ಬಿ.ದಿಡ್ಡಿಮನಿ, ನೋಡಲ್ ಅಧಿಕಾರಿ
EndFragment