ಬಾಗಲಕೋಟೆ : ಬಾಗಲಕೋಟೆ ನಗರಸಭೆ ಪ್ರಸಕ್ತ 2021-22ನೇ ಸಾಲಿನಲ್ಲಿ 5056.41 ಲಕ್ಷ ರೂ.. ಆದಾಯ ಹಾಗೂ 5042.37 ಲಕ್ಷ ರೂ. ನಿರೀಕ್ಷಿತ ವೆಚ್ಚದೊಂದಿಗೆ 14.04 ಲಕ್ಷ ರೂ. ಉಳಿತಾಯ ಬಜೆಟ್ ಮಂಡಿಸಿದೆ.
ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಉಪಾಧ್ಯಕ್ಷ ಬಸವರಾಜ ಅವರಾದಿ ನೇತೃತ್ವದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಉಳಿತಾಯ ಬಜೆಟ್‌ಗೆ ಸರ್ವಾನುಮತದಿಂದ ಅನುಮೋದನೆ ನೀಡಲಾಯಿತು.
ಆಸ್ತಿ ತೆರಿಗೆ, ನೀರಿನ ಶುಲ್ಕ, ಘನತ್ಯಾಜ್ಯ ವಿಲೇವಾರಿ ಸೆಸ್, ಕಟ್ಟಡ ಅನುಮತಿ ಶುಲ್ಕ, ಮಳಿಗೆಗಳ ಬಾಡಿಗೆ, ಮಾರುಕಟ್ಟೆ ಹರಾಜು ಶುಲ್ಕ ಸೇರಿ ಇತರ ಶುಲ್ಕದಿಂದ 959.32 ಲಕ್ಷ ರೂ. ಹಾಗೂ ಬರ ಪರಿಹಾರ, ವಿದ್ಯುತ್, ವೇತನ, ಎಸ್.ಎ್.ಸಿ. ಅನುದಾನ, ಇತರ ಅನುದಾನ 1606 ಲಕ್ಷ ರೂ. ಸೇರಿ ಒಟ್ಟು 2565.32 ಲಕ್ಷ ರೂ., ಕಂದಾಯ ಸ್ವೀಕೃತಿಗಳು, 15ನೇ ಹಣಕಾಸು ಅನುದಾನ 800 ಲಕ್ಷ ರೂ., ಘನ ತ್ಯಾಜ್ಯ ವಸ್ತು ವಿಲೇವಾರಿ ನಿರ್ವಹಣೆ ಡಿಪಿಆರ್ ಅನುಮೋದಿತ ಅನುದಾನ, ವಿಶೇಷ ಅನುದಾನ ಸೇರಿ ಒಟ್ಟು ಬಂಡವಾಳ ಸ್ವೀಕೃತಿಗಳು 1665 ಲಕ್ಷ , ಪ.ಜಾ.,ಪ.ಪಂ., ಬಡಜನರ ಕಲ್ಯಾಣ ನಿಧಿ, ಅಂಗವಿಕಲರ ಕ್ರೀಡಾ ಕಲ್ಯಾಣ ನಿಧಿಗೆ ವರ್ಗಾವಣೆ, ಇತರ ಅನುದಾನ ಸೇರಿ ಒಟ್ಟು ಅಸಾಮಾನ್ಯ ಸ್ವೀಕೃತಿಗಳು, 826.09 ಲಕ್ಷ ರೂ.ದೊಂದಿಗೆ ಒಟ್ಟು 5056.41 ಲಕ್ಷ ರೂ. ಆದಾಯವನ್ನು ಪ್ರಸಕ್ತ ವರ್ಷದಲ್ಲಿ ನಗರಸಭೆ ನಿರೀಕ್ಷಿಸಿದೆ.
ಕಂದಾಯ ಪಾವತಿ 906.28 ಲಕ್ಷ ರೂ., ಕಂದಾಯ ಅನುದಾನ 1425 ಲಕ್ಷ ರೂ. ಸೇರಿ ಒಟ್ಟು 2331.28 ಲಕ್ಷ ರೂ. ಕಂದಾಯ ಪಾವತಿ, 1885 ಲಕ್ಷ ರೂ. ಬಂಡವಾಳ ಪಾವತಿ, 826.09 ಲಕ್ಷ ರೂ. ಅಸಾಮಾನ್ಯ ಪಾವತಿ ಸೇರಿ ಒಟ್ಟು ಪ್ರಸಕ್ತ ವರ್ಷದಲ್ಲಿ 5042.37 ಲಕ್ಷ ರೂ. ವೆಚ್ಚದ ಮೂಲಕ 14.04 ಲಕ್ಷ ರೂ. ಉಳಿತಾಯ ಬಜೆಟ್ ಮಂಡಿಸಲಾಯಿತು.
ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ಬಜೆಟ್‌ನಲ್ಲಿ ಮಂಡಿಸಲಾಗಿರುವ ಅನುದಾನ ಸದ್ಬಳಕೆಯಾಗಬೇಕು. ಯಾವುದೇ ಲೋಪದೋಷಕ್ಕೆ ಅವಕಾಶ ನೀಡಬಾರದು. ನಗರದ ಜನತೆಗೆ ಮೂಲ ಸೌಕರ್ಯ ಕಲ್ಪಿಸುವ ಮೂಲಕ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಸದಸ್ಯರು ತಿಳಿಸುವ ಸಮಸ್ಯೆಗಳಿಗೆ ಅಧಿಕಾರಿಗಳು ತಕ್ಷಣಕ್ಕೆ ಸ್ಪಂದಿಸಬೇಕು. ನಗರದ ಸರ್ವತೋಮುಖ ಅಭಿವೃದ್ಧಿಗೆ ಮುಂದಾಗಬೇಕು ಎಂದು ನಗರಸಭೆ ಸದಸ್ಯರು, ಅಧಿಕಾರಿಗಳಿಗೆ ಸಲಹೆ ನೀಡಿದರು.
ಸಭೆಯಲ್ಲಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ರವಿ ಧಾಮಜಿ ಹಾಗೂ ನಗರಸಭೆಯಿಂದ ಬುಡಾಗೆ ನಾಮ ನಿರ್ದೇಶನಗೊಳ್ಳುವ ಸ್ಥಾನಕ್ಕೆ ನಗರಸಭೆ ಸದಸ್ಯೆ ಸವಿತಾ ಲೆಂಕೆನ್ನವರ ಅವರನ್ನು ಆಯ್ಕೆ ಮಾಡಲಾಯಿತು. ಬುಡಾ ಆಯುಕ್ತ ಗಣಪತಿ ಪಾಟೀಲ, ನಗರಸಭೆ ಸದಸ್ಯರಾದ ಪ್ರದೀಪ ರಾಯ್ಕರ, ಚನಯ್ಯ ಹಿರೇಮಠ ಇತರರು ಇದ್ದರು.
ಮಾತಿನ ಚಕಮಕಿ
ಸಾಮಾನ್ಯ ಸಭೆಯಲ್ಲಿ ನಗರದಲ್ಲಿ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ ಸದಸ್ಯ ಹಾಜಿಸಾಬ ದಂಡಿನ ಮಾತನಾಡಿ, ನಮ್ಮ ವಾರ್ಡ್‌ನಲ್ಲಿ ಯಾವುದೇ ಕೆಲಸಗಳು ಆಗುತ್ತಿಲ್ಲ. ಇದುವರೆಗೂ ಒಂದೂ ಕಾಮಗಾರಿ ಆರಂಭವಾಗಿಲ್ಲ ಎಂದು ದೂರಿದರು. ಇದಕ್ಕೆ ಕೆಂಡಾಮಂಡಲಾದ ನಗರಸಭೆ ಉಪಾಧ್ಯಕ್ಷ ಬಸವರಾಜ ಅವರಾದಿ ಪಕ್ಷಭೇದ ಮಾಡದೆ ಶಾಸಕ ವೀರಣ್ಣ ಚರಂತಿಮಠ ಅಭಿವೃದ್ಧಿ ಮಾಡುತ್ತಿದ್ದಾರೆ. ಈ ಹಿಂದೆ 5 ವರ್ಷದ ಅವಧಿಯಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ. ಎರಡು ವರ್ಷದಲ್ಲಿ ಬಾಗಲಕೋಟೆ ಸಿಲಿಕಾನ್ ಸಿಟಿ ಮಾಡುತ್ತೇವೆ ಎಂದು ಗುಡುಗಿದರು. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು.
ಕಾಂಗ್ರೆಸ್ ಸದಸ್ಯ ಚನ್ನವೀರ ಅಂಗಡಿ ಮಾತನಾಡಿ, ಹಳೇ ಬಾಗಲಕೋಟೆ ಹೊರವಲಯದಲ್ಲಿ ಕಸ ವಿಲೇವಾರಿ ಘಟಕ ಸ್ಥಾಪಿಸಲಾಗಿದ್ದು, ಅಲ್ಲಿನ ಕಸಕ್ಕೆ ಬೆಂಕಿ ಹೆಚ್ಚಲಾಗುತ್ತದೆ. ಇದರಿಂದ ಗಬ್ಬು ವಾಸನೆ ಹೊರ ಬಂದು ಕೌಲಪೇಟೆ, ಸಾಬಟನ್ ಓಣಿ, ಹುಂಡೇಕಾರ ಗಲ್ಲಿ ಸೇರಿ ವಿವಿಧ ಪ್ರದೇಶದ ಜನರ ಆರೋಗ್ಯ ಹದಗೆಡುತ್ತಿದೆ. ಈ ಬಗ್ಗೆ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಅಭಿವೃದ್ಧಿ ಮಾಡ್ತಿರೋ ಬಿಡ್ತಿರೋ ಗೊತ್ತಿಲ್ಲ. ಜನರ ಆರೋಗ್ಯ ಮೊದಲು ರಕ್ಷಣೆ ಮಾಡಿ ಎಂದು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕ ವೀರಣ್ಣ ಚರಂತಿಮಠ, ನಗರದ ಅಭಿವೃದ್ಧಿ ಹೇಗೆ ಮಾಡಬೇಕು ಎನ್ನುವುದು ಗೊತ್ತಿದೆ. ಹಳೇ ಬಾಗಲಕೋಟೆ, ನವನಗರದಲ್ಲಿ ಅಭಿವೃದ್ಧಿ ಕೆಲಸಗಳು ಭರದಿಂದ ಸಾಗಿದೆ. ಯಾರಿಂದಲೂ ಪಾಠ ಹೇಳಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದರು.
ಸದಸ್ಯ ಲಕ್ಷ್ಮಣ ಮುಚಖಂಡಿ ಮಾತನಾಡಿ, ರಸ್ತೆಗಳ ಡಾಂಬರೀಕರಣ ಮಾಡುವಾಗ ರಸ್ತೆ ಮೇಲೆ ಯುಜಿಡಿ ಸಂಪರ್ಕ ಕಲ್ಪಿಸುವ ಚೇಂಬರ್ ಬರುವಂತೆ ಮಾಡಬೇಕು. ಸ್ಮಶಾನಗಳಲ್ಲಿ ರಾತ್ರಿ ವೇಳೆ ಶವ ಸಂಸ್ಕಾರಕ್ಕೆ ಹೋದಾಗ ಕತ್ತಲು ಇರುತ್ತದೆ. ವಿದ್ಯುತ್ ಸಂಪರ್ಕ ಕಲ್ಪಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.
700 ಆಸ್ತಿಗೆ 3 ಸಾವಿರ ಖಾತೆ ದಾಖಲು
ಆಶ್ರಯ ಮನೆಗಳ ಆಸ್ತಿಗಳನ್ನು ದಾಖಲು ಮಾಡಬೇಕು ಎಂದು ಸದಸ್ಯರಾದ ಶ್ರೀನಾಥ ಸಜ್ಜನ್, ಪ್ರಕಾಶ ಹಂಡಿ ತಿಳಿಸಿದರು. ಇದಕ್ಕೆ ಆಯುಕ್ತ ವಿ.ಮುನಿಶಾಮಪ್ಪ ಮಾತನಾಡಿ, ಆಶ್ರಯ ಯೋಜನೆಯಡಿ ನಿರ್ಮಾಣವಾಗಿರುವ 700 ಆಸ್ತಿಗಳಿಗೆ 3 ಸಾವಿರ ಖಾತೆಗಳು ನಗರಸಭೆಯಲ್ಲಿ ದಾಖಲಾಗಿವೆ. ಇದಕ್ಕೆ ಗೊಂದಲ ಉಂಟಾಗಿದೆ. ಒಂದು ಮನೆಗೆ ಹತ್ತಾರು ಖಾತೆಗಳು ಸೃಷ್ಟಿಯಾಗಿವೆ ಎಂದು ತಿಳಿಸಿದರು.