ಜಿಲ್ಲೆ

ನ.29 ರಂದು ಬಾಗಲಕೋಟೆಯಲ್ಲಿ ಸಮಾವೇಶ

ಬಾಗಲಕೋಟೆ: ಕುರುಬ ಸಮಾಜವನ್ನು ಎಸ್ಟಿಗೆ ಸೇರ್ಪಡೆಗೊಳಿಸಬೇಕು ಎಂದು ಆಗ್ರಹಿಸಿ ರಾಜ್ಯದಲ್ಲಿ ನಿರಂತರವಾಗಿ ಹೋರಾಟ ನಡೆಯುತ್ತಿದೆ. ನ.29 ರಂದು ಬಾಗಲಕೋಟೆ ನಗರದಲ್ಲಿ ಬೆಳಗಾವಿ ವಿಭಾಗಮಟ್ಟದ ಪ್ರತಿಭಟನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಕುರುಬ ಎಸ್ಟಿ ಮೀಸಲಾತಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ, ಮಾಜಿ ಸಂಸದ ಕೆ.ವಿರುಪಾಕ್ಷಪ್ಪ ಹೇಳಿದರು.

ಕುರುಬ ಸಮಾಜವನ್ನು ಎಸ್ಟಿ ಪಟ್ಟಿಗೆ ಸೇರಿಸಬೇಕು ಎನ್ನುವುದು ಅನೇಕ ವರ್ಷಗಳಿಂದ ಹೋರಾಟ ನಡೆದುಕೊಂಡು ಬಂದಿದೆ. ಇದೀಗ ರಾಜ್ಯದಲ್ಲಿ ಪಕ್ಷಾತೀತವಾಗಿ ಬೆಂಬಲ ದೊರಕಿದೆ. ಇದು ನಮ್ಮ ಸಮುದಾಯದ ಹಕ್ಕಿಕಾಗಿ ಹೋರಾಟ ನಡೆಯುತ್ತಿದೆ. ಬೇರೆ ಸಮುದಾಯ ಗುರಿಯಾಗಿಸಿಲ್ಲ. ಬಾಗಲಕೋಟೆಯಲ್ಲಿ ನಡೆಯುವ ಸಮಾವೇಶದಲ್ಲಿ 50 ಸಾವಿರ ಜನ ಪಾಲ್ಗೊಳ್ಳಿದ್ದಾರೆ. ಹೋರಾಟಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ನೈತಿಕ ಬೆಂಬಲ ನೀಡಿದ್ದಾರೆ. ಎಚ್.ಎಂ.ರೇವಣ್ಣ, ಬಂಡೆಪ್ಪ ಕಾಶಂಪುರ, ಕೆ.ಎಸ್.ಈಶ್ವರಪ್ಪ ಸೇರಿದಂತೆ ಇನ್ನಿತರ ನಾಯಕರು ಪಕ್ಷಾತೀತವಾಗಿ ಭಾಗವಹಿಸಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬೆಂಗಳೂರು ವರೆಗೆ ಪಾದಯಾತ್ರೆ
ಎಸ್‌ಟಿ ಮೀಸಲಾಗಿ 2021 ಜ.15 ರಿಂದ ಕಾಗಿನೆಲೆಯಿಂದ ಬೆಂಗಳೂರು ವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. 20 ದಿನಗಳ ಕಾಲ ವಿವಿಧೆಡೆ ಪಾದಯಾತ್ರೆ ಸಂಚರಿಸಿ ಫೆ.7 ರಂದು ಬೆಂಗಳೂರು ತಲುಪಿ ಬೃಹತ್ ಪ್ರತಿಭಟನಾ ಸಮಾವೇಶವಾಗಿ ಮಾರ್ಪಡಲಿದೆ. ಅಂದಾಜು 10 ಲಕ್ಷ ಜನ ಪಾಲ್ಗೊಳ್ಳಲಿದ್ದಾರೆ. ಈ ವೇಳೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಮನವಿ ಸಲ್ಲಿಸಲಾಗುವುದು. ಸಮಾಜದ ನಾಲ್ಕು ಜನ ಸ್ವಾಮೀಜಿಗಳು ಹೋರಾಟದ ನೇತೃತ್ವ ವಹಿಸಲಿದ್ದಾರೆ. ಸರ್ಕಾರ ಸ್ಪಂದನೆ ಸಿಗದೇ ಹೋದಲ್ಲಿ ಉಗ್ರ ಹೋರಾಟ ನಡೆಸಲಾಗುವುದು. ಕಾನೂನು ಹೋರಾಟ ಕೂಡಾ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮುಖಂಡರಾದ ಕಾಂತೇಶ ಈಶ್ವರಪ್ಪ, ವೆಂಕಟೇಶ ಮೂರ್ತಿ. ಬಿ., ಕಾಶಿನಾಥ ಹುಡೇದ, ಆನೆಕಲ್ಲ ದೊಡ್ಡಯ್ಯ, ಟಿ.ಬಿ.ಬೆಳಗಾವಿ, ಡಾ.ರಾಜೇಂದ್ರ ಸಣ್ಣಕ್ಕಿ, ಆಸಂಗೆಪ್ಪ ನಕ್ಕರಗುಂದಿ, ಸುವರ್ಣ ನಾಗರಾಳ, ಶಶಿಕಾಂತ ಉದಗಟ್ಟಿ, ಡಿ.ಬಿ.ಸಿದ್ದಾಪುರ ಸುದ್ದಿಗೋಷ್ಠಿಯಲ್ಲಿ ಇದ್ದರು.