ಜಿಲ್ಲೆ

ಬಜೆಟ್‌ನಲ್ಲಿ 30 ಸಾವಿರ ಕೋಟಿ ರೂ. ಮೀಸಲಿಡಿ

ಬಾಗಲಕೋಟೆ: ಕೃಷ್ಣಾ ಮೇಲ್ದಂಡೆ ಯೋಜನಾ ಬಾಧಿತರಿಗೆ ಯೋಗ್ಯ ಪರಿಹಾರದ ಜತೆಗೆ ರಾಷ್ಟ್ರೀಯ ಪುನರ್ ವಸತಿ ನೀತಿ ಅನುಸಾರ ಪುನರ್‌ವಸತಿ ಕಲ್ಪಿಸಬೇಕು ಮತ್ತು 3ನೇ ಹಂತದ ಭೂಸ್ವಾಧೀನಕ್ಕೆ 2020 ಬಜೆಟ್‌ನಲ್ಲಿ ಪ್ರತ್ಯೇಕವಾಗಿ 30 ಸಾವಿರ ಕೋಟಿ ರೂ. ನೀಡಬೇಕು ಎಂದು ಆಗ್ರಹಿಸಿ ವಿಜಯಪುರ- ಬಾಗಲಕೋಟೆ ಜಿಲ್ಲೆಯ ಸಂತ್ರಸ್ತರು ಜಿಲ್ಲಾಡಳಿತ ಭವನ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ ಸಂತ್ರಸ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬಳಿಕ ಡಿಸಿಎಂ ಗೋವಿಂದ ಕಾರಜೋಳ ಅವರಿಗೆ ಮನವಿ ಸಲ್ಲಿಸಿದರು.

ಕೃಷ್ಣಾ ಮೇಲ್ದಂಡೆ ಯೋಜನೆಯ ಮೊದಲು ಮತ್ತು ಎರಡನೇ ಹಂತದ ಯೋಜನೆಯಲ್ಲಿ ಭೂಮಿ ಕಳೆದುಕೊಂಡ ಶೇ.80ರಷ್ಟು ಜನರು ಮರಳಿ ಜಮೀನು ಖರೀದಿ ಮಾಡಲು ಸಾಧ್ಯವಾಗಿಲ್ಲ. ಅನೇಕ ಕುಟುಂಬಗಳ ಬದುಕು ಸುಧಾರಣೆಯಾಗಲಿಲ್ಲ. ಇದೀಗ ಮೂರನೇ ಹಂತಕ್ಕೆ ಮುಳುಗಡೆಯಾಗುವ ಭೂಮಿ. ಗ್ರಾಮ, ಪುನರ್ವಸತಿ ಕೇಂದ್ರಕ್ಕೆ ಹಾಗೂ ಕಾಲುವೆಗಳ ನಿರ್ಮಾಣಕ್ಕೆ ಸ್ವಾಧೀನ ಪಡಿಸಿಕೊಳ್ಳುವ ಭೂಮಿಗೆ ಯೋಗ್ಯ ಪರಿಹಾರ ನೀಡಬೇಕು. ಸಂತ್ರಸ್ತರ ಬೀದಿಪಾಲಾಗದಂತೆ ಸರ್ಕಾರ ಜವಾಬ್ದಾರಿಯುತ ನಿರ್ಣಯ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

2015 ಆಗಸ್ಟ್ 27 ರಂದು ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್. ಪಾಟೀಲ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾರ್ಗಸೂಚಿ ಬೆಲೆ ಪರಿಷ್ಕರಿಸಲಾಯಿತು. ಅಂದಿನ ಸಭೆಯಲ್ಲಿ ಗೋವಿಂದ ಕಾರಜೋಳ ಕೂಡ ಭಾಗವಹಿಸಿ ಬೆಲೆ ನಿರ್ಧಾರಣಾ ಸಮಿತಿ ರಚಿಸಬೇಕು ಎಂದು ಆಗ್ರಹಿಸಿದ್ದರು. ಅದರಂತೆ ಸಮಿತಿ ರಚಿಸಬೇಕು. ತನ್ಮೂಲಕ ವಾಸ್ತವ ಮಾರುಕಟ್ಟೆ ಬೆಲೆ ಆಧರಿಸಿ ಪರಿಹಾರ ನೀಡಬೇಕು. ಅವೈಜ್ಞಾನಿಕ ತಡೆಗೋಡೆ ನಿರ್ಮಿಸುವ ಯೋಜನೆ ಬಿಟ್ಟು ಸಂಪೂರ್ಣವಾಗಿ ಗ್ರಾಮಗಳನ್ನು ಸ್ಥಳಾಂತರಿಸಬೇಕು. ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಮಾದರಿಯಲ್ಲಿ ಪುನರ್ವಸತಿ ಕೇಂದ್ರಗಳ ಅಭಿವೃದ್ಧಿ ಪ್ರಾಧಿಕಾರದ ರಚನೆ ಮಾಡಿ ಸಂಸದರ ಅಧ್ಯಕ್ಷತೆಯಲ್ಲಿ ಜನಪ್ರತಿನಿಧಿ ಹಾಗೂ ಗ್ರಾಮ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿ ರಚನೆ ಮಾಡಬೇಕು. ನಗರ ಯೋಜನೆ ನಿಯಮದಂತೆ ಗ್ರಾಮಗಳ ಪುನರ್ವಸತಿ ಕೇಂದ್ರಗಳನ್ನು ಅಭಿವೃದ್ಧಿ ಪಡಿಸಬೇಕು. ಪುನರ್ವಸತಿ ಕೇಂದ್ರಕ್ಕೆ ಭೂಮಿ ಕಳೆದುಕೊಂಡ ರೈತರನ್ನು ಸಂತ್ರಸ್ತರೆಂದು ಪರಿಗಣಿಸಬೇಕು. ವಾಸಕ್ಕೆ ನಿವೇಶನದ ಜತೆಗೆ ವಾಣಿಜ್ಯ ನಿವೇಶನಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು.

ಬಾಗಲಕೋಟೆಯ ನವನಗರದ ನಿರ್ಮಾಣಕ್ಕಾಗಿ ಭೂಮಿ ನೀಡಿದವರಿಗೆ ಅತಿಥಿ ಸಂತ್ರಸ್ತರು ಎಂದು ಪರಿಗಣಿಸದೆ ಪೂರ್ಣ ಪ್ರಮಾಣದ ಸಂತ್ರಸ್ತರು ಎಂದು ಪರಿಗಣಿಸಿ ‘ಸಿ’ ಮಾದರಿ ನಿವೇಶನ ನೀಡಬೇಕು. ಸಂತ್ರಸ್ತರ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೆ ಶಿಕ್ಷಣ ಹಾಗೂ ವಸತಿ ನಿಲಯಗಳ ಪ್ರವೇಶ ಉಚಿತವಾಗಿ ನೀಡಬೇಕು. ಮುಂಬರುವ 2020 ಬಜೆಟ್‌ನಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಗೆ 30 ಸಾವಿರ ಕೋಟಿ ರೂ. ಒದಗಿಸಿ ಸಂತ್ರಸ್ತರ ಅತಂತ್ರ ಸ್ಥಿತಿಗೆ ಪೂರ್ಣ ವಿರಾಮ ನೀಡಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಪ್ರಕಾಶ ಅಂತರಗೊಂಡ, ಮಲ್ಲಿಕಾರ್ಜುನ ಅಂಗಡಿ, ಕಿರಣ ಬಾಳಾಗೋಳ, ಸಿದ್ದು ಗಿರಗಾಂವಿ, ಬಸವರಾಜ ಮಲಕಗೊಂಡ, ಈಶ್ವರ ಕೋನಪ್ಪನವರ, ಹನುಮಂತಗೌಡ ಪಾಟೀಲ, ರಾಜು ಕಾಖಂಡಕಿ, ಹನುಮಂತ ಪಾಟೀಲ ನೇತೃತ್ವ ವಹಿಸಿದ್ದರು.

EndFragment