ಜಿಲ್ಲೆ

ಡಿಕೆಶಿ ಮೇಲೆ ಸಿಬಿಐ ದಾಳಿ ಖಂಡಿಸಿ ಪ್ರತಿಭಟನೆ

ಬಾಗಲಕೋಟೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರ ಮನೆ ಮೇಲೆ ಸಿಬಿಐ ದಾಳಿ ಖಂಡಿಸಿ ಕಾಂಗ್ರೆಸ್ ಜಿಲ್ಲಾ ಘಟಕದ ನೇತೃತ್ವದಲ್ಲಿ ನಗರದ ಬಸವೇಶ್ವರದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನಾ ಮೆರವಣಿಗೆ ಮೂಲಕ ಬಸವೇಶ್ವರ ವೃತ್ತಕ್ಕೆ ಆಗಮಿಸಿದ ಕಾಂಗ್ರೆಸ್ ಕಾರ್ಯಕರ್ತರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಬಿಜೆಪಿ ಪಕ್ಷದ ವಿರುದ್ಧ ಘೋಷಣೆ ಕೂಗಿದರು.

ಜಿಲ್ಲಾ ಮಾಧ್ಯಮ ವಕ್ತಾರ ನಾಗರಾಜ ಹದ್ಲಿ ಮಾತನಾಡಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರ ವರ್ಚಸ್ಸು ಕುಂದಿಸಲು ಬಿಜೆಪಿ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಕೀಳು ಮಟ್ಟದ ರಾಜಕೀಯ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಬಿಜೆಪಿ ಇದಕ್ಕೆ ದೊಡ್ಡ ಪಾಠ ಕಲಿಯಲಿದೆ. ಉಪಚುನಾವಣೆಯಲ್ಲಿ ಸೋಲಿನ ಭಯದಿಂದ ಬಿಜೆಪಿ ಹೇಡಿ ರೀತಿ ವರ್ತಿಸುತ್ತಿದೆ. ಕೇಂದ್ರ, ರಾಜ್ಯ ಸರ್ಕಾರಗಳು ಅಧಿಕಾರ ದುರಪಯೋಗ ಪಡಿಸಿಕೊಳ್ಳುತ್ತಿದೆ. ಇದರಲ್ಲಿ ಬಿಜೆಪಿ ಸಫಲವಾಗುವದಿಲ್ಲ. ಹೇಡಿಯಂತೆ ಸಿಬಿಐ ದಾಳಿ ಮಾಡಿಸುವುದನ್ನು ಬಿಟ್ಟು ಚುನಾವಣೆಯ ಎದುರಿಸಿ ತಾಕತ್ತು ತೋರಿಸಲಿ ಎಂದು ಸವಾಲು ಹಾಕಿದರು.

ಪಕ್ಷದ ಎಲ್ಲ ನಾಯಕರು, ಕಾರ್ಯಕರ್ತರು ಡಿ.ಕೆ.ಶಿವಕುಮಾರ ಜೊತೆಗೆ ಇದ್ದೇವೆ. ಈ ಸಂಕಷ್ಟದಿಂದ ಹೊರ ಬಂದು ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿ ಕೊಡುತ್ತಾರೆ ಎನ್ನುವ ವಿಶ್ವಾಸವಿದೆ ಎಂದರು.

ಜಿಲ್ಲಾ ಪ್ರಚಾರ ಸಮಿತಿಯ ಅಧ್ಯಕ್ಷ ಮಂಜುನಾಥ ವಾಸನದ, ಮುಖಂಡರಾದ ಉಮೇಶ ಮೇಟಿ, ನಿಂಗನಗೌಡ ಪಾಟೀಲ, ರಾಜು ಮನ್ನಿಕೇರಿ, ಹಾಜಿಸಾಬ ದಂಡಿನ, ರೇಣುಕಾ ನ್ಯಾಮಗೌಡ, ದ್ರಾಕ್ಷಾಯಿಣಿ ಗುಗ್ಯಾಳ, ಹನಮಂತ ರಾಕುಂಪಿ, ಮುತ್ತು ಜೋಳದ, ತಿಪ್ಪಣ್ಣ ನೀಲನಾಯಕ, ಆನಂದ ಶಿಲ್ಪಿ, ವಿರೇಶ ಹುಂಡೆಕಾರ, ಮಂಜುಳಾ ಭೂಸಾರೆ, ಮಂಜುನಾಥ ಬೀರಣ್ಣವರ, ಚೆನ್ನವೀರ ಅಂಗಡಿ, ವಿಜಯ ಮುಳ್ಳುರ, ಮಂಜುನಾಥ ಪುರುತಗೇರಿ, ಸಂಗಮೇಶ ಕಾಳಗಿ, ಶಂಕರ ನಾಯಕ, ಸಂದೀಪ ಬೆಳಗಲ್ಲ, ಶಿವಾನಂದ ಮಲ್ಲಾಪುರ ಇದ್ದರು.