ಜಿಲ್ಲೆ

ಕಿಡ್ನಿ ಫೌಂಡೇಷನ್ ಆಸ್ಪತ್ರೆ ಉದ್ಘಾಟನೆ

ಬಾಗಲಕೋಟೆ: ನಗರದ ಪ್ರತಿಷ್ಠಿತ ಕೆರೂಡಿ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದಿಂದ ನೂತನವಾಗಿ ಸ್ಥಾಪಿಸಿರುವ ಕಿಡ್ನಿ ಫೌಂಡೇಷನ್ ಆಸ್ಪತ್ರೆಯನ್ನು ಚರಂತಿಮಠದ ಪ್ರಭು ಸ್ವಾಮೀಜಿ, ಸಂಸದ ಪಿ.ಸಿ.ಗದ್ದಿಗೌಡರ ಭಾನುವಾರ ಉದ್ಘಾಟಿಸಿದರು.

ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಚರಂತಿಮಠದ ಪ್ರಭು ಸ್ವಾಮೀಜಿ ಮಾತನಾಡಿ, ಉತ್ತರ ಕರ್ನಾಟಕ ಭಾಗದಲ್ಲಿ ವೈದ್ಯಕೀಯ ಸೇವೆ ದುರ್ಲಬ ಎನ್ನುವ ಕಾಲದಲ್ಲಿ ಅಂದರೆ 25 ವರ್ಷಗಳ ಹಿಂದೆ ಕೆರೂಡಿ ಆಸ್ಪತ್ರೆ ನಗರದಲ್ಲಿ ಸ್ಥಾಪನೆಯಾಯಿತು. ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವ ಮೂಲಕ ಈ ಆಸ್ಪತ್ರೆ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ. ಹೃದಯ ರೋಗ, ಕ್ಯಾನ್ಸರ್ ರೋಗದ ಚಿಕಿತ್ಸೆಗೆ ಪ್ರತ್ಯೇಕ ಆಸ್ಪತ್ರೆಯನ್ನು ಸ್ಥಾಪಿಸಿದೆ. ಈ ಭಾಗದ ಜನರ ಚಿಕಿತ್ಸೆಗಾಗಿ ದೂರದ ಊರಿಗೆ ಅಲೆಯುವುದನ್ನು ಕೆರೂಡಿ ಆಸ್ಪತ್ರೆ ತಪ್ಪಿಸಿದೆ. ಇದೀಗ ಕಿಡ್ನಿಗೆ ಸಂಬಂಧಿಸಿದ ರೋಗಗಳ ಚಿಕಿತ್ಸೆಗೆ ನೂತನ ಆಸ್ಪತ್ರೆ ಆರಂಭಿಸಿರುವುದು ಉತ್ತಮ ಬೆಳವಣಿಗೆ ಎಂದು ಹರ್ಷ ವ್ಯಕ್ತಪಡಿಸಿದರು.

ಆಸ್ಪತ್ರೆ ಮುಖ್ಯಸ್ಥ, ಖ್ಯಾತ ವೈದ್ಯ ಬಿ.ಎಚ್.ಕೆರೂಡಿ ಮಾತನಾಡಿ, ಕೆರೂಡಿ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರವು ಉತ್ತರ ಕರ್ನಾಟಕದ ರೋಗಿಗಳಿಗೆ ಗುಣಮಟ್ಟದ ಆರೋಗ್ಯ ಸೇವೆಯನ್ನು ನೀಡುತ್ತಿದೆ. ಮೂತ್ರ ರೋಗಗಳಿಗೆ ಸಂಬಂಧಿಸಿದ ಚಿಕಿತ್ಸೆಯನ್ನು 2002ರಿಂದ ನಮ್ಮ ಆಸ್ಪತ್ರೆ ನೀಡುತ್ತಿದೆ. ಈಚೆಗಿನ ದಿನಗಳಲ್ಲಿ ಮೂತ್ರಪಿಂಡದ ಹರಳು, ರಕ್ತದೊತ್ತಡ, ಮಧುಮೇಹದಿಂದಾಗಿ ಕಿಡ್ನಿ ವೈಲ್ಯ ಹಾಗೂ ಕಿಡ್ನಿ ಕ್ಯಾನ್ಸರ್ ಹೆಚ್ಚುತ್ತ ಬಂದಿವೆ. ಇದಕ್ಕೆ ಉತ್ತಮ ಚಿಕಿತ್ಸೆಯ ಅಗತ್ಯತೆಯನ್ನು ಮನಗಂಡು ಡಾ.ಸೋಮಶೇಖರ ಕೆರೂಡಿ ಹಾಗೂ ಡಾ.ದೇವೇಂದ್ರ ಜಲ್ದೆ ನೇತೃತ್ವದಲ್ಲಿ ಪ್ರತ್ಯೇಕ ಕಿಡ್ನಿ ಆಸ್ಪತ್ರೆಯನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.

ಈ ಆಸ್ಪತ್ರೆಯಲ್ಲಿ ಯುರೋಲ್ಯಾಬ್, ಯುರೋಪ್ಲೋಮೆಟ್ರಿ, ಯುರೋಡೈನಾಮಿಕ್, ವಿವಿಧ ಮಾದರಿಯ ಯುರೇಟರೋಸ್ಕೋಪ್, ಸಿಸ್ಟೋಸ್ಕೋಪ್, ಹೊಲ್ಮಿಯಮ್ ಲೇಸರ್ ಸೇರಿ ವಿನೂತನ ಮಾದರಿಯಾದ ವೈದ್ಯಕೀಯ ಲೋಕದ ವೈಜ್ಞಾನಿಕ ತಂತ್ರಜ್ಞಾನ ಅಳವಡಿಸಲಾಗಿದೆ. ಅತ್ಯಾಧುನಿಕ ಹೆಮೋಡಯಾಲಿಸಿಸ್ ಘಟಕವನ್ನೂ ಪ್ರಾರಂಭಿಸಲಾಗಿದೆ ಎಂದರು.

ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ ಆಗಮಿಸಿ ಶುಭಕೋರಿದರು. ಡಾ.ಅನಸೂಯಾ ಕೆರೂಡಿ, ಡಾ.ಸೋಮಶೇಖರ ಕೆರೂಡಿ, ಡಾ.ಚಂದ್ರಶೇಖರ ಕೆರೂಡಿ, ಡಾ.ಕ್ಷಮತಾ ಕೆರೂಡಿ, ಡಾ.ಸುನಿತಾ ಕೆರೂಡಿ, ಡಾ.ದೇವೇಂದ್ರ ಜಲ್ದೆ ಸೇರಿ ಇತರರು ಇದ್ದರು.

1 ಲಕ್ಷ ರೂ. ದೇಣಿಗೆ
ಬಡರೋಗಿಗಳ ಚಿಕಿತ್ಸೆಗಾಗಿ ಕಿಡ್ನಿ ಫೌಂಡೇಷನ್‌ಗೆ ಬಾಗಲಕೋಟೆ ನಗರದ ಸರ್ಕಾರಿ ನಿವೃತ್ತ ನೌಕರ ಎಂ.ಎಚ್.ಜಮಾದಾರ, ಎ.ಎಂ.ಜಮಾದಾರ ಕುಟುಂಬ ಒಂದು ಲಕ್ಷ ರೂ.ದೇಣಿಗೆ ನೀಡಿತು.

ಬಾಗಲಕೋಟೆ, ಕೆರೂಡಿ ಆಸ್ಪತ್ರೆ, ಕಿಡ್ನಿ ಫೌಂಡೇಷನ್ ಆಸ್ಪತ್ರೆ, ಪ್ರಭು ಸ್ವಾಮೀಜಿ, ಸಂಸದ ,ಪಿ.ಸಿ.ಗದ್ದಿಗೌಡರ, Bagalkot, Kerudy Hospital, Kidney Foundation Hospital, Prabhu Swamiji, MP, PC gadigoudar,