ಜಿಲ್ಲೆ

ನಾಳೆ ಸ್ತ್ರೀ ಶಕ್ತಿ ಸಮಾವೇಶ ಆಯೋಜನೆ

ಬಾಗಲಕೋಟೆ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಪಂ, ಜಿಲ್ಲಾಡಳಿತ ಸಹಯೋಗದಲ್ಲಿ ಮಾ. 8 ರಂದು ಸೀ ಶಕ್ತಿ ಸಮಾವೇಶ ಹಾಗೂ ಪೋಷನ್ ಪಕ್ವಾನ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಜಿಪಂ ಸಿಇಒ ಗಂಗೂಬಾಯಿ ಮಾನಕರ ತಿಳಿಸಿದರು.

ಮಹಿಳಾ ದಿನವನ್ನು ವಿಶೇಷವಾಗಿ ಆಚರಿಸುವ ನಿಟ್ಟಿನಲ್ಲಿ ಮಹಿಳೆಯರಿಗಾಗಿ ಜಿಲ್ಲಾ ಮಟ್ಟದಲ್ಲಿ 100 ಮೀ. ಓಟ, ಮ್ಯೂಜಿಕಲ್ ಚೇರ್, ಗುಂಡು ಎಸೆತ, ಜಾನಪದ ಗೀತೆ, ಸ್ಕೂಟಿ ಸ್ಪರ್ಧೆಗಳನ್ನು ನಡೆಸಲಾಗುವುದು. ವಿಶೇಷ ಸಾಧನೆ ಮಾಡಿದ ಮಹಿಳೆಯರನ್ನು ಗೌರವಿಸಲಾಗುತ್ತಿದೆ. ಕಾರ್ಯಕ್ರಮದಲ್ಲಿ 6 ತಾಲೂಕಿನ ಸೀ ಶಕ್ತಿ ಗುಂಪಿನ ಮಹಿಳೆಯರು, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಸೇರಿ 1 ಸಾವಿರ ಮಹಿಳೆಯರು ಪಾಲ್ಗೊಳ್ಳಲಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪೋಷನ್ ಅಭಿಯಾನ ಯೋಜನೆಯಡಿ ಮಾ.7 ರಂದು ಬೆಳಗ್ಗೆ 11 ಗಂಟೆಗೆ ಪುರುಷರಿಗಾಗಿ ಪೋಷನ್ ಪಕ್ವಾನ್ ಅಡುಗೆ ಸ್ಪರ್ಧೆಯನ್ನು ನವನಗರದ ಜಿಲ್ಲಾ ತರಬೇತಿ ಕೇಂದ್ರದಲ್ಲಿ ಆಯೋಜಿಸಲಾಗಿದೆ. 18 ರಿಂದ 35 ವರ್ಷದೊಳಗಿನ ಹಾಗೂ 36 ವರ್ಷ ಮೇಲ್ಪಟ್ಟ ಪುರುಷರು ಇದರಲ್ಲಿ ಭಾಗವಹಿಸಬಹುದು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ 5 ಸಾವಿರ ರೂ., ದ್ವಿತೀಯ 3 ಸಾವಿರ ರೂ. ಹಾಗೂ ತೃತೀಯ 2 ಸಾವಿರ ರೂ. ಬಹುಮಾನ ನೀಡಲಾಗುತ್ತದೆ. ಆಸಕ್ತರು ಅಂದು ಸ್ಥಳದಲ್ಲಿಯೇ ಹೆಸರು ನೋಂದಾಯಿಸಿಕೊಳ್ಳಬೇಕು. ಸ್ಪರ್ಧೆಯಲ್ಲಿ ಗ್ಯಾಸ್ ಒದಗಿಸಲಾಗುತ್ತದೆ. ಉಳಿದೆಲ್ಲ ಅಡುಗೆ ವಸ್ತುಗಳನ್ನು ಅವರೇ ತೆಗೆದುಕೊಂಡು ಬರಬೇಕು ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ಎನ್. ದೇಸಾಯಿ, ಆರೋಗ್ಯ ಇಲಾಖೆ ಜಿಲ್ಲಾ ಸಮೀಕ್ಷಣಾಧಿಕಾರಿ ಡಾ. ವಿಜಯ ಕಂಠಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ರೆಡ್ಡಿ ಇದ್ದರು.

ಕರೊನಾ ವೈರಸ್ ಆತಂಕ ಬೇಡ
ಜಿಲ್ಲೆಯ ಜನತೆ ಕರೊನಾ ವೈರಸ್ ಬಗ್ಗೆ ಯಾವುದೇ ರೀತಿಯ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಸಾರ್ವಜನಿಕರು ಸ್ವಚ್ಛತೆಗೆ ಆದ್ಯತೆ ನೀಡಬೇಕು. ಸಾರ್ವಜನಿಕ ಸಭೆ ಮತ್ತು ಸಮಾರಂಭ ಹಾಗೂ ಜನದಟ್ಟಣೆಗಳಿಂದ ದೂರವಿರಬೇಕು. ವಿದೇಶದಲ್ಲಿ ನೆಲೆಸಿ ಇದೀಗ ಸ್ವಂತ ಜಿಲ್ಲೆ ಬಾಗಲಕೋಟೆಗೆ ಆಗಮಿಸಿರುವ 5 ಜನರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಕರೊನಾ ಸೋಂಕು ಪತ್ತೆಯಾಗಿಲ್ಲ. ಉತ್ತರ ಕರ್ನಾಟಕದ ಭಾಗದಲ್ಲಿ ಉಷ್ಣಾಂಶದ ಪ್ರಮಾಣ ಹೆಚ್ಚಿರುವುದರಿಂದ ಕರೊನಾ ಸೋಂಕು ಹರಡುವ ಸಾಧ್ಯತೆಗಳು ಕಡಿಮೆ. ಆದ್ದರಿಂದ ಯಾರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಸಿಇಒ ಗಂಗೂಬಾಯಿ ಮಾನಕರ ಹೇಳಿದರು.

EndFragment