ಬಾಗಲಕೋಟೆ: ಹುನಗುಂದ ತಾಲೂಕಿನ ಮರೋಳ ಗ್ರಾಮದ ಬಳಿ ಸೋಮವಾರ ಸಂಜೆ ಬಸ್ ತಡೆದು ಕರ್ತವ್ಯನಿರತ ಕಂಡಕ್ಟರ್ ಮುರುಗೇಶ ಹುಲ್ಲಳ್ಳಿ ಕಣ್ಣಿಗೆ ಖಾರದಪುಡಿ ಎರಚಿ ಹಲ್ಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಮಹಾಂತೇಶ ಹಾದಿಕಾರ, ವಿನಾಯಕ ಹಗೇದಾಳ, ಕುಮಾರ ಗುಲಬುರ್ಗಾ ಬಂಧಿತರು. ಹನ್ನೆರಡು ಜನರ ಮೇಲೆ ಪ್ರಕರಣ ದಾಖಲಾಗಿದೆ. ಗಾಯಗೊಂಡಿರುವ ಕಂಡಕ್ಟರ್ ಬಾಗಲಕೋಟೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹುನಗುಂದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
ಬಳಿಕ ಮಾತನಾಡಿದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ, ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ ಬೆಂಬಲಿಗ ಅಶೋಕ ಬಂಡರಗಲ್ ಹಾಗೂ ಇತರರು ಹಲ್ಲೆ ನಡೆಸಿದ್ದಾರೆ. ಅಶೋಕ ಬಂಡರಗಲ್ ಮೇಲೆ ಇಂಥ ಅನೇಕ ಪ್ರಕರಣಗಳು ಇವೆ. ರೌಡಿಶೀಟರ್ ಇದ್ದು, ಆತನನ್ನು ಕೂಡಲೇ ಜಿಲ್ಲೆಯಿಂದ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.
ಹಾಲಿ ಶಾಸಕರ ಬೆಂಬಲಿಗ ಆಗಿದ್ದರಿಂದ ಆತನನ್ನು ಪೊಲೀಸರು ಬಂಧಿಸಿಲ್ಲ. ಆತನ ಗುಂಡಾಗಿರಿಯಿಂದ ಜನರಿಗೆ ಸಾಕಷ್ಟು ತೊಂದರೆಯಾದರೂ ಪೊಲೀಸರು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಕೂಡಲೇ ಎಲ್ಲ ಆರೋಪಿಗಳನ್ನು ಬಂಧಿಸಿ ಕ್ರಮ ತೆಗೆದುಕೊಳ್ಳದಿದ್ದಲ್ಲಿ ಉಗ್ರ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
EndFragment