ಬಾಗಲಕೋಟೆ: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ವೈಯಕ್ತಿಕ ಪ್ರತಿಷ್ಠೆಯನ್ನು ಬದಿಗಿಟ್ಟು ಬಿಜೆಪಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಶಾಸಕ, ಬಿಟಿಡಿಎ ಅಧ್ಯಕ್ಷ ವೀರಣ್ಣ ಚರಂತಿಮಠ ಕಾರ್ಯಕರ್ತರಿಗೆ ಕರೆ ನೀಡಿದರು.
ನಗರದ ಬಿವಿವಿ ಸಂಘದ ನೂತನ ಸಭಾಭವನದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯ ಹಿನ್ನಲೆಯಲ್ಲಿ ಬಿಜೆಪಿ ವತಿಯಿಂದ ಶನಿವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪಕ್ಷದ ಬೆಂಬಲ ಹಾಗೂ ನಾಯಕರ, ಕಾರ್ಯಕರ್ತರ ಬೆಂಬಲದಿಂದ ಗೆದ್ದುಬಂದು ಪಕ್ಷಕ್ಕೆ ದ್ರೋಹ ಬಗೆಯುವ ಅಭ್ಯರ್ಥಿಗಳನ್ನು ಚುನಾವಣೆಯಲ್ಲಿ ಬೆಂಬಲಿಸದೇ ಪಕ್ಷಕ್ಕೆ ನಿಷ್ಠರಾಗಿರುವವರನ್ನು ಗುರುತಿಸಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುವಂತೆ ಮಾಡಬೇಕು ಎಂದರು.
ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕಾರ್ಯಕರ್ತರು ಹೆಚ್ಚು ಕೆಲಸ ಮಾಡಿದರೆ ಮುಂಬರುವ ಜಿ.ಪಂ, ತಾ.ಪಂ ಚುನಾವಣೆಯಲ್ಲಿ ಪಕ್ಷವು ಗಟ್ಟಿಯಾಗುವ ಜತೆಗೆ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಅನುಕೂಲವಾಗಲಿದೆ. ಪಕ್ಷಕ್ಕೆ ನಿಷ್ಠೆಯಾಗಿರುವ ಅಭ್ಯರ್ಥಿಗಳನ್ನು ಹಾಗೂ ಎಲ್ಲ ಸಮುದಾಯದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಉತ್ತಮವಾಗಿ ಕೆಲಸ ಮಾಡಬೇಕು ಎಂದು ತಿಳಿಸಿದರು.
ಮಾಜಿ ಶಾಸಕ ಪಿ.ಎಚ್.ಪೂಜಾರ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಪ್ರತಿ ವ್ಯಕ್ತಿ ಬಿಜೆಪಿ ಸರ್ಕಾರಗಳ ಲಾನುಭವಿಗಳು ಇದ್ದಾರೆ. ಒಂದಿಲ್ಲೊಂದು ಯೋಜನೆಯ ಲಾಭವನ್ನು ಪಡೆದವರೇ ಆಗಿದ್ದಾರೆ. ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಗಳನ್ನು ಜನರಿಗೆ ಮುಟ್ಟಿಸುವ ಮೂಲಕ ಪಕ್ಷದ ಬೆಂಬಲಿತ ಅಭ್ಯರ್ಥಿಯನ್ನು ಗೆಲ್ಲಿಸಲು ಕೆಲಸ ಮಾಡಬೇಕು. ಗ್ರಾ.ಪಂ. ಚುನಾವಣೆ ಯಶಸ್ವಿ ಚುನಾವಣೆ ಆಗಬೇಕಾದರೆ ಪ್ರತಿಯೊಂದು ಸಮುದಾಯವನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದರು.
ಪಕ್ಷದ ಮುಖಂಡ ಜಿ.ಎನ್.ಪಾಟೀಲ ಮಾತನಾಡಿ, ವೈಯಕ್ತಿಕ ಪ್ರತಿಷ್ಠೆಯನ್ನು ಬದಿಗಿಟ್ಟು ಕೆಲಸ ಮಾಡಬೇಕು. ಗ್ರಾಮದಲ್ಲಿ ವೈಷಮ್ಯವನ್ನು ತಪ್ಪಿಸುವಂತಹ ಕೆಲಸವಾಗಲಿ. ಗ್ರಾಮ ಸ್ವರಾಜ್ಯ ಕಲ್ಪನೆಯನ್ನು ತರಬೇಕಾಗಿದೆ. ಗ್ರಾಮ ಬೆಳೆದರೆ ದೇಶ ಅಭಿವೃದ್ಧಿಯತ್ತ ಸಾಗಲಿದೆ. ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿ ಎಂದು ಕಾರ್ಯಕರ್ತರಿಗೆ ತಿಳಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ, ಸಿ.ವಿ.ಕೋಟಿ, ಬಸಲಿಂಗಪ್ಪ ನಾವಲಗಿ, ರಾಜು ನಾಯ್ಕರ, ರಾಜಶೇಖರ ಮುದೆನೂರ, ವೀರಣ್ಣ ಹಳೇಗೌಡರ, ಕೃಷ್ಣಪ್ಪ ನಾಯಕ, ರಾಜು ರೇವಣಕರ, ಅಶೋಕ ಲಿಂಬಾವಳಿ, ಶಿವಾನಂದ ಟವಳಿ, ಸುರೇಶ ಕೊಣ್ಣೂರ, ಬಸವರಾಜ ಅವರಾದಿ ಇದ್ದರು.
ಕಾರ್ಯಕರ್ತರು ಒಟ್ಟುಗೂಡಿ ಬಿಜೆಪಿ ಬೆಂಬಲಿತ ಹೆಚ್ಚು ಅಭ್ಯರ್ಥಿಗಳು ಗೆಲ್ಲುವಂತೆ ಕಾರ್ಯಕರ್ತರು ಈಗಿನಿಂದಲೇ ಶ್ರಮ ವಹಿಸಿ ಕೆಲಸ ಮಾಡಬೇಕು.
= ಶಾಂತಗೌಡ ಪಾಟೀಲ ಬಿಜೆಪಿ ಜಿಲ್ಲಾಧ್ಯಕ್ಷ
EndFragment