ಬಾಗಲಕೋಟೆ: ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಅವಕಾಶ ನೀಡಬೇಕು. ಕೂಡಲೇ ಸರ್ಕಾರ ನಿರ್ಬಂಧ ತೆರವುಗೊಳಿಸಬೇಕು ಎಂದು ಆಗ್ರಹಿಸಿ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಜಿಲ್ಲಾಡಳಿತ ಭವನ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ ಹಿಂಜಾವೇ ಕಾರ್ಯಕರ್ತರು ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ವಿರುದ್ಧ ಘೋಷಣೆ ಕೂಗಿದರು. ಬಳಿಕ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ವೇದಿಕೆ ಜಿಲ್ಲಾಧ್ಯಕ್ಷ ಆನಂದ ಮುತ್ತಗಿ ಮಾತನಾಡಿ, ದೇಶದಲ್ಲಿ ಗಣೇಶೋತ್ಸವಕ್ಕೆ ಭವ್ಯವಾದ ಇತಿಹಾಸವಿದೆ. ಸ್ವಾತಂತ್ರೃ ಚಳವಳಿಯ ಭಾಗ ಹಬ್ಬದ ಆಚರಣೆಯಲ್ಲಿ ಅಡಗಿತ್ತು. ಇದರಲ್ಲಿ ರಾಷ್ಟ್ರೀಯತೆ ಜಾಗೃತಿ ಇದೆ. ಇಂತಹ ವಿಶೇಷ ಹಬ್ಬ ಆಚರಣೆಗೆ ಸರ್ಕಾರ ಕೋವಿಡ್ ನೆಪ ಹೇಳಿ ನಿರ್ಬಂಧ ವಿಧಿಸುವುದು ತರವಲ್ಲ ಎಂದು ದೂರಿದರು.
ಕಳೆದ ವರ್ಷ ಕೋವಿಡ್ ಕರಿನೆರಳಿನ ನಡುವೆಯೂ ಸರ್ಕಾರದ ನಿಯಮ ಪಾಲಿಸಿ ಯಶಸ್ಸುಗೊಳಿಸಲಾಗಿದೆ. ವ್ಯಾಕ್ಸಿನ್ ಇಲ್ಲದಿದ್ದರೂ ಸಹ ಕರೊನಾ ಸೋಂಕು ಉಲ್ಬಣಿಸದಂತೆ ಎಚ್ಚರವಹಿಸಿ ಹಬ್ಬ ಆಚರಿಸಲಾಗಿತ್ತು. ಪ್ರಸಕ್ತ ವರ್ಷ ಸರ್ಕಾರದ ಕೋವಿಡ್ ನೆಪದಲ್ಲಿ ಸಾರ್ವಜನಿಕ ಗಣೇಶ ಉತ್ಸವ ಆಚರಣೆಗೆ ಬ್ರೇಕ್ ಹಾಕಲು ಮುಂದಾಗಿದೆ. ಇದರಿಂದ ಕೋಟ್ಯಂತರ ಹಿಂದುಗಳ ಧಾರ್ಮಿಕ, ಸಾಮಾಜಿಕ ಹಕ್ಕುಗಳ ಕಸಿದುಕೊಂಡಂತಾಗುತ್ತದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ನಿತ್ಯ ಸಂತೆ, ರಾಜಕೀಯ ಸಮಾವೇಶ, ಚಿತ್ರಮಂದಿರ, ಮಾಲ್, ಚುನಾವಣೆಗಳು ಸೇರಿ ಹಲವಾರು ಸಾಮಾಜಿಕ ಚಟುವಟಿಕೆ ಸಾಂಗವಾಗಿ ನಡೆಯುತ್ತಿವೆ. ಅವುಗಳಿಗೆ ಸರ್ಕಾರ ಕಠಿಣ ನಿಯಮ ವಿಧಿಸಿಲ್ಲ. ಗಲ್ಲಿ ಗಲ್ಲಿಗಳಲ್ಲಿ ಜನರು ಸೇರಿ ಆಚರಿಸುವ ಗಣೇಶ ಉತ್ಸವಕ್ಕೆ ಅಡೆತಡೆ ಉಂಟು ಮಾಡುತ್ತಿರುವುದು ನೋಡಿದರೆ ಹಿಂದುಗಳ ಹಬ್ಬ ಆಚರಣೆಗೆ ನಿರ್ಬಂಧ ವಿಧಿಸುವ ಹುನ್ನಾರ ಅಡಗಿದೆ. ಸಾರ್ವಜನಿಕರು, ಗಣೇಶ ಉತ್ಸವ ಮಂಡಳಿಗಳ ಅಭಿಪ್ರಾಯಕ್ಕೆ ಅವಕಾಶ ನೀಡದೆ ಏಕ ಪಕ್ಷಿಯವಾಗಿ ನಿರ್ಧಾರ ತೆಗೆದುಕೊಳ್ಳುವುದು ಸಹಿಸಲು ಸಾಧ್ಯವಿಲ್ಲ ಎಂದು ಗುಡುಗಿದರು.
ಮುಖಂಡರಾದ ಈರಪ್ಪಣ್ಣ ಲಾಯದಗುಂದಿ, ಮಹಾಂತೇಶ ಕಸ್ತೂರಿ, ಕುಮಾರಸ್ವಾಮಿ ಹಿರೇಮಠ, ಮಹಾಂತೇಶ ಮಡಿವಾಳರ, ನಾಗೇಶ ಅಂಬಿಗೇರ ಇತರರಿದ್ದರು.