ಜಿಲ್ಲೆ

ಎಥೆನಾಲ್ ಉತ್ಪಾದನೆಗೆ ಮುಕ್ತ ಪರವಾನಗಿ

ಬಾಗಲಕೋಟೆ: ಇಂಧನ ಆಮದು ಕಡಿಮೆಗೊಳಿಸುವುದರ ಜತೆಗೆ ಪರಿಸರ ಸ್ನೇಹಿ ಎಥೆನಾಲ್ ಉತ್ಪಾದನೆ, ಬಳಕೆ ಹೆಚ್ಚಳಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ. ಈ ಮೂಲಕ ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗಿದೆ. ಆತ್ಮ ನಿರ್ಭರ ಭಾರತಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದು ಕೇಂದ್ರದ ಗೃಹ ಸಚಿವ ಅಮಿತ್ ಷಾ ಮನವಿ ಮಾಡಿದರು.

ಜಿಲ್ಲೆಯ ಬಾದಾಮಿ ತಾಲೂಕಿನ ಕೆರಕಲಮಟ್ಟಿ ಗ್ರಾಮದಲ್ಲಿನ ಕೇದಾರನಾಥ ಸಕ್ಕರೆ ಆವರಣದಲ್ಲಿ ಭಾನುವಾರ ಎಂಆರ್‌ಎನ್ ನಿರಾಣಿ ಉದ್ಯಮ ಸಮೂಹದಿಂದ ನಿತ್ಯ 26 ಲಕ್ಷ ಲೀಟರ್ ಎಥೆನಾಲ್ ಉತ್ಪಾದನೆ ಘಟಕ ಹಾಗೂ 75 ಸಾವಿರ ಟನ್ ಕಬ್ಬು ಉತ್ಪಾದಿಸುವ ಸಕ್ಕರೆ ಕಾರ್ಖಾನೆ ವಿಸ್ತರಣೆ ಘಟಕ, 260 ಮೆಗಾವಾಟ್ ವಿದ್ಯುತ್ ಉತ್ಪಾದನೆ ಘಟಕಗಳಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ವಿದೇಶಗಳಿಂದ ತೈಲ ಆಮದು ಮಾಡಿಕೊಳ್ಳುತ್ತಿರುವ ಪರಿಣಾಮ ಅಧಿಕ ಹಣ ವ್ಯಯವಾಗುತ್ತಿದೆ. ಇದನ್ನು ತಗ್ಗಿಸುವುದು ಕೇಂದ್ರ ಸರ್ಕಾರ ಉದ್ದೇಶ. ಹೀಗಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆತ್ಮನಿರ್ಭರ ಭಾರತ ಭಾಗವಾಗಿ ದೇಶದಲ್ಲಿ ಎಥೆನಾಲ್ ಉತ್ಪಾದನೆಗೆ ಒತ್ತು ನೀಡಿದ್ದಾರೆ. ಸಕ್ಕರೆ, ಬೆಲ್ಲ, ಕಬ್ಬು ತ್ಯಾಜ್ಯದಿಂದ ಎಥೆನಾಲ್ ತಯಾರಿಸಬಹುದು. ಮೆಕ್ಕೆಜೋಳ ಮತ್ತು ಭತ್ತವನ್ನು ಎಥೆನಾಲ್ ಉತ್ಪಾದನೆಯಡಿ ತರಲಾಗಿದೆ. ಎಥೆನಾಲ್ ಉತ್ಪಾದನೆಗೆ ಮುಕ್ತವಾದ ಪರವಾನಗಿ ನೀಡಲಾಗಿದೆ. ಇದರಿಂದ ಕಾರ್ಖಾನೆಗಳ ಬೆಳವಣಿಗೆ ಹೊಂದುವುದರ ಜತೆಗೆ ಅನ್ನದಾತರ ಆದಾಯ ದ್ವಿಗುಣಗೊಳ್ಳಲಿದೆ ಎಂದು ತಿಳಿಸಿದರು.

ಈ ಮೊದಲು ಇಂಧನದಲ್ಲಿ ಎಥೆನಾಲ್ ಶೇ.1.18 ರಷ್ಟು ಮಿಶ್ರಣ ಮಾಡಲಾಗುತ್ತಿತ್ತು. ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮಿಶ್ರಣ ಪ್ರಮಾಣ ಏರಿಕೆ ಮಾಡಲಾಗಿದೆ. 2022ಕ್ಕೆ ಶೇ.10 ರಷ್ಟು ಹಾಗೂ 2025ಕ್ಕೆ ಶೇ.25ಕ್ಕೆ ಹೆಚ್ಚಿಸಲು ಗುರಿ ಹೊಂದಲಾಗಿದೆ. ಪೆಟ್ರೋಲ್ ಮತ್ತು ಇತರ ವಸ್ತುಗಳ ಆಮದು ಮೂಲಕ ದೇಶದ ಆರ್ಥಿಕ ಹೊರೆ ಹೆಚ್ಚಾಗುತ್ತಿತ್ತು. ಗಲ್ಫ್ ರಾಷ್ಟ್ರಗಳಿಗೆ ಎಥೆನಾಲ್‌ಗಾಗಿ ಶೇ.10ರಿಂದ 20 ರಷ್ಟು ಹಣ ಕೊಡುತ್ತಿದ್ದೇವು. ನಮ್ಮಲ್ಲಿ ಎಥೆನಾಲ್ ಬಳಕೆ ಮಾಡುವುದರಿಂದ ಅದೇ ಹಣ ನಮ್ಮ ದೇಶದ ಅನ್ನದಾತರಿಗೆ ಸಿಗಲಿದೆ ಎಂದರು.

ಪರಿಸರ ಸ್ನೇಹಿಯಾಗಿರುವ ಎಥೆನಾಲ್ ಉತ್ಪಾದನೆ, ಬಳಕೆಗೆ ಕಾಂಗ್ರೆಸ್ ಅಧಿಕಾರದಲ್ಲಿದಾಗ ಒತ್ತು ನೀಡಲಿಲ್ಲ. 2014 ರಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹೊಸ ನೀತಿಗಳಿಂದ 2018-19 ವರೆಗೆ 89 ಕೋಟಿ ಲೀಟರ್ ಉತ್ಪಾದನೆ ಮಾಡುವ ಸಾಮರ್ಥ್ಯ ಸೃಷ್ಟಿಸಲಾಯಿತು. ಸದ್ಯ ಸರಾಸರಿ 325 ಕೋಟಿ ಲೀಟರ್ ಎಥೆನಾಲ್ ಉತ್ಪಾದನೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ 400 ಕೋಟಿ ಲೀಟರ್ ಉತ್ಪಾದನೆ ಗುರಿ ಹೊಂದಿದೆ. 2018 ರಲ್ಲಿ ಎಥೆನಾಲ್ ಮೇಲೆ ಶೇ.18 ಜಿಎಸ್‌ಟಿ ವಿಧಿಸಲಾಗಿತ್ತು. ಇದೀಗ ಶೇ. 5 ಕ್ಕೆ ಇಳಿಸಿ ಉತ್ತೇಜನ ನೀಡಲಾಗಿದೆ. ಒಟ್ಟಾರೆ ಪರ್ಯಾಯ ಇಂಧನ ಉತ್ಪಾದನೆಯಲ್ಲಿ ಭಾರತ ಸ್ವಾವಲಂಬಿಯಾಗಬೇಕು ಎನ್ನುವುದು ಮೋದಿ ಅವರ ಆಶಯವಾಗಿದೆ ತಿಳಿಸಿದರು.

ಕಾಶ್ಮೀರ್ ವಿಷಯದಲ್ಲಿ 371 ಕಲಂ ತೆಗೆಯುವ ಧೈರ್ಯ ಯಾರೂ ಮಾಡಲಿಲ್ಲ. ಅದನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿದರು. ಈಗ ಕಾಶ್ಮೀರ್ ಯಾವತ್ತೂ ನಮ್ಮದು. ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮನಿರ್ಭರ ಭಾರತಕ್ಕೆ ನಿಮ್ಮೆಲ್ಲರ ಆಶೀರ್ವಾದ ಇರಲಿ ಎಂದು ಮನವಿ ಮಾಡಿದರು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಿಎಂ ಬಿ.ಎಸ್. ಯಡಿಯೂರಪ್ಪ, ಡಿಸಿಎಂ ಗೋವಿಂದ ಕಾರಜೋಳ, ಸಚಿವರಾದ ಜಗದೀಶ ಶೆಟ್ಟರ, ಬಿ.ಸಿ. ಪಾಟೀಲ, ಆರ್. ಶಂಕರ, ಬಸವರಾಜ ಬೊಮ್ಮಾಯಿ, ಶಶಿಕಲಾ ಜೊಲ್ಲೆ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ನಿರಾಣಿ ಉದ್ಯಮ ಸಮೂಹ ಸಂಸ್ಥೆಗಳ ಅಧ್ಯಕ್ಷ ಸಚಿವ ಮುರುಗೇಶ ನಿರಾಣಿ, ಸಂಸದರಾದ ಪಿ.ಸಿ. ಗದ್ದಿಗೌಡರ, ಜಿ.ಎಂ. ಸಿದ್ದೇಶ, ರಮೇಶ ಜಿಗಜಿಣಗಿ, ಸಂಗಣ್ಣ ಕರಡಿ, ಅಣ್ಣಾಸಾಹೇಬ ಜೊಲ್ಲೆ, ಮಹಾರಾಷ್ಟ್ರದ ಶಾಸಕ ರಾಹುಲ್ ಕೇಲ್, ಸಾಂಗ್ಲಿ ಸಂಸದ ಸಂಜಯ ಪಾಟೀಲ, ಶಾಸಕ ಎ.ಎಸ್.ಪಾಟೀಲ ನಡಹಳ್ಳಿ, ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಬೆಳ್ಳಿ ಪ್ರಕಾಶ ವೇದಿಕೆ ಮೇಲೆ ಉಪಸ್ಥಿತರಿದ್ದರು. ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ ಸ್ವಾಗತಿಸಿದರು. ಸಿದ್ದರಾಮಯ್ಯ ಮಠಪತಿ ಸಂಗಡಿಗರು ಪ್ರಾರ್ಥಿಸಿದರು. ಸಂಗಮೇಶ ನಿರಾಣಿ ನಿರೂಪಿಸಿದರು.

ಕಾಂಗ್ರೆಸ್ ಪಕ್ಷಕ್ಕೆ ಟಾಂಗ್
ಕೃಷಿ ಕಾನೂನು, ಭೂ ಸುಧಾರಣೆ ಕಾಯ್ದೆ ಬಗ್ಗೆ ಸುಳ್ಳು ಆರೋಪ ಮಾಡುತ್ತಿರುವ ಕಾಂಗ್ರೆಸ್ ಪಕ್ಷದ ನಾಯಕರು ತಾವು ಅಧಿಕಾರ ಇದ್ದಾಗ ಅನ್ನದಾತರಿಗೆ ಏನು ಮಾಡಿದ್ದಾರೆ ಎನ್ನುವುದು ಅರ್ಥಮಾಡಿಕೊಳ್ಳಬೇಕು. 2013-14ರ ಬಜೆಟ್‌ನಲ್ಲಿ 21,900 ಕೋಟಿ ರೂ. ಮಾತ್ರ ಕೃಷಿ ಕ್ಷೇತ್ರಕ್ಕೆ ಮೀಸಲಿಟ್ಟಿತ್ತು. ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 1,34,399 ಕೋಟಿ ರೂ. ನೀಡಿದ್ದಾರೆ. ರೈತರ ಬೆಳೆಗಳಿಗೆ ಬೆಂಬಲ ಬೆಲೆ ಹೆಚ್ಚಳ ಮಾಡಲಾಗಿದೆ. ರೈತರು ಖರ್ಚು ಮಾಡಿದ ವೆಚ್ಚಕ್ಕಿಂತ ಶೇ.50 ಲಾಭ ಪಡೆಯುವ ಹಾಗೇ ಮಾಡಿದ್ದೇವೆ. 2020 ಡಿಸೆಂಬರ್ 25 ರವರೆಗೆ 9 ಕೋಟಿಗ್ಗಿಂತಲೂ ಅಧಿಕ ರೈತರ ಖಾತೆಗೆ ಪ್ರಧಾನ ಕಿಸಾನ್ ಸಮ್ಮಾನ್ ಯೋಜನೆ ಅಡಿ ಪ್ರತಿ ತಿಂಗಳು 6 ಸಾವಿರ ರೂ. ನಂತೆ 1,13,619 ಕೋಟಿ ರೂ. ಯಾವುದೇ ದಲ್ಲಾಳಿಗಳು ಇಲ್ಲದೆ ನೇರವಾಗಿ ಜಮೆ ಮಾಡಲಾಗಿದೆ. ಇದೇ ಕಾಂಗ್ರೆಸ್ ಹಾಗೂ ಮೋದಿ ಸರ್ಕಾರಕ್ಕೆ ಇರುವ ವ್ಯತ್ಯಾಸ ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ಅಂಕಿ ಅಂಶಗಳ ಮೂಲಕ ವಾಗ್ದಾಳಿ ನಡೆಸಿದರು.

ಇದಲ್ಲದೆ, 22 ಕೋಟಿ ರೈತರಿಗೆ ಮಣ್ಣು ಪರೀಕ್ಷೆ ಕಾರ್ಡ್ ನೀಡಿದ್ದೇವೆ. ಯೂರಿಯಾ ಗೊಬ್ಬರಕ್ಕೆ ಬೇವಿನ ರಸ ಲೇಪನೆ ಮಾಡುವ ಕಳ್ಳ ಮಾರಾಟ ತಡೆಗಟ್ಟಿದ್ದೇವೆ. ಪ್ರಧಾನ ಮಂತ್ರಿ ಕೃಷಿ ಸಿಂಚನ ಯೋಜನೆ ಮೂಲಕ 50 ಲಕ್ಷ ಹೆಕ್ಟೇರ್‌ಗೆ ಹನಿ ನೀರಾವರಿ ಕಲ್ಪಿಸಲಾಗಿದೆ. ಫಸಲ್ ಬಿಮಾ ಯೋಜನೆ 5 ವರ್ಷ ಪೂರ್ಣಗೊಂಡಿದ್ದು, ಇದರಿಂದ ಈ ವರೆಗೆ 90 ಸಾವಿರ ಕೋಟಿ ರೂ. ರೈತರ ಖಾತೆಗೆ ಜಮೆಯಾಗಿದೆ. ರೈತರಿಗೆ ಬೆಲೆಯಲ್ಲಿ ಗೋಲ್‌ಮಾಲ್ ತೆಡೆಗಟ್ಟಲು 1 ಸಾವಿರ ಕೃಷಿ ಮಾರುಕಟ್ಟೆಗಳನ್ನು ಆನ್‌ಲೈನ್ ವ್ಯವಸ್ಥೆ ತರಲಾಗಿದೆ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ 6 ಲಕ್ಷ ಕೋಟಿ ರೂ. ಮಾತ್ರ ರೈತರಿಗೆ ಸಾಲ ನೀಡಲಾಗಿತ್ತು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 13.8 ಲಕ್ಷ ಕೋಟಿ ರೂ. ರೈತರಿಗೆ ಸಾಲ ನೀಡಿದೆ. 10 ಸಾವಿರ ರೈತರ ಉತ್ಪಾದನೆ ಕೇಂದ್ರ ಸ್ಥಾಪಿಸಲು 7 ಸಾವಿರ ಕೋಟಿ ರೂ., ಜೇನು ಕೃಷಿಗೆ 500 ಕೋಟಿ ರೂ., 1 ಕೋಟಿಗಿಂತಲೂ ಅಧಿಕ ಕಿಸಾನ್ ಕ್ರೆಡಿಟ್ ಕಾರ್ಡ್ ಕಳೆದ 6 ತಿಂಗಳ ಅವಧಿಯಲ್ಲಿ ನೀಡಲಾಗಿದೆ ಎಂದು ಅನ್ನದಾತರಿಗೆ ಮೋದಿ ಸರ್ಕಾರ ನೀಡಿದ ಕೊಡುಗೆಗಳ ಬಗ್ಗೆ ವಿವರ ನೀಡಿದ ಅಮಿತ್ ಷಾ, ನೀವು ಅಧಿಕಾರದಲ್ಲಿ ಇದ್ದಾಗ ಇಷ್ಟು ಯೋಜನೆ ಯಾಕೆ ಜಾರಿಗೊಳಿಸಲಿಲ್ಲ ಎಂಬುದಕ್ಕೆ ಕಾಂಗ್ರೆಸ್ ನಾಯಕರು ಉತ್ತರಿಸಬೇಕು ಎಂದು ಸವಾಲ್ ಹಾಕಿದರು.

ಇನ್ನು ಕರ್ನಾಟಕದಲ್ಲಿ ಕೇಂದ್ರ ಸರ್ಕಾರ ಯೋಜನೆ ಸಮರ್ಪಕ ಅನುಷ್ಠಾನಗೊಳಿಸಲು ಹಾಗೂ ರೈತರ ಪರ ಯೋಜನೆಗಳನ್ನು ಜಾರಿಗೊಳಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉತ್ತಮ ಕಾರ್ಯ ಮಾಡುತ್ತಿದ್ದಾರೆ. ದೇಶಕ್ಕೆ ಮಾದರಿ ಸರ್ಕಾರ ಇದಾಗಿದೆ ಎಂದು ಸಿಎಂ ಬಿಎಸ್‌ವೈ ಅವರನ್ನು ಹಾಡಿಹೊಗಳಿದರು.

ನಿರಾಣಿ ಉದ್ಯಮ ಸಂಸ್ಥೆಗೆ ಮೆಚ್ಚುಗೆ
ಬಾಗಲಕೋಟೆ ಜಿಲ್ಲೆಯೂ ಪುಣ್ಯ ಭೂಮಿಯಾಗಿದೆ. ಕೃಷ್ಣಾ, ಘಟಪ್ರಭಾ ನದಿ ತೀರದ ಅನ್ನದಾತರು ವರ್ಷ 12 ತಿಂಗಳು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಕಬ್ಬು ಬೆಳೆ ಮೂಲಕ ದೇಶಕ್ಕೆ ಸಿಹಿ ಹಂಚುತ್ತಿದ್ದಾರೆ. ತಮ್ಮ ಪರಿಶ್ರಮ, ಬೆವರಿನ ಹನಿ ಮೂಲಕ ದೇಶಕ್ಕೆ ಅಪಾರ ಕೊಡುಗೆ ನೀಡುತ್ತಿದ್ದಾರೆ. ಕರ್ನಾಟಕದ ಜನತೆಗೆ ವಿಶೇಷ ಕೃತಜ್ಞತೆ ಸಲ್ಲಿಸುತ್ತೇನೆ. ಕರ್ನಾಟಕದ ಜನರು 2014 ಮತ್ತು 2019 ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪೂರ್ಣ ಬಹುಮತ ನೀಡಿದ್ದಾರೆ. ಮುಂಬೈ ಕರ್ನಾಟಕ ಭಾಗದ ಜನರು ಪ್ರತಿಯೊಂದು ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸುತ್ತಿರುವುದಕ್ಕೆ ಧನ್ಯವಾದಗಳು ಎಂದು ಅಮಿತ್ ಷಾ ತಿಳಿಸಿದರು.

ನಿರಾಣಿ ಉದ್ಯಮ ಸಮೂಹ ಸಂಸ್ಥೆ ಉತ್ತಮ ಕಾರ್ಯ ಮಾಡುತ್ತಿದೆ. ಎಥೆನಾಲ್ ಉತ್ಪಾದನೆಗೆ ದಿಟ್ಟ ಹೆಜ್ಜೆ ಇಟ್ಟಿದೆ. 6 ಸಕ್ಕರೆ ಕಾರ್ಖಾನೆಗಳ ಮೂಲಕ ಪ್ರತಿನಿತ್ಯ 45 ಸಾವಿರ ಮೆಟ್ರಿಕ್ ಟನ್ ಕಬ್ಬು ನುರಿಸುತ್ತಿದ್ದು, 56 ಸಾವಿರ ಮೆಟ್ರಿಕ್ ಟನ್‌ವರೆಗೆ ಗುರಿ ಹೊಂದಿದ್ದಾರೆ. ಇದು ದೇಶದಲ್ಲಿಯೇ ಅತಿ ದೊಡ್ಡ ಕಬ್ಬು ನುರಿಸುವ ಸಂಸ್ಥೆಯಾಗಿದೆ. ಇದರಿಂದ ಈ ಭಾಗದ ರೈತರ ಆರ್ಥಿಕಮಟ್ಟ ಇಮ್ಮಡಿಗೊಳ್ಳಲಿದೆ. ಜೈವಿಕ ಇಂಧನ ಕ್ಷೇತ್ರದಲ್ಲಿ ಹೊಸ ಸಾಹಸ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

EndFragment