ಬಾಗಲಕೋಟೆ: ರೈತನಿಗೆ ಪರಿಹಾರ ಧನ ಜಮೆ ಮಾಡುವುದಕ್ಕಾಗಿ ಲಂಚ ಸ್ವೀಕರಿಸುತ್ತಿದ್ದ ನವನಗರದಲ್ಲಿರುವ ಕೃಷ್ಣಾ ಮೇಲ್ದಂಡೆ ಯೋಜನೆಯ ಪುನರ್ವಸತಿ ಮತ್ತು ಪುನರ್ ನಿರ್ಮಾಣದ ಮುಖ್ಯ ಲೆಕ್ಕಾಧಿಕಾರಿ ಕಚೇರಿಯ ವಿಷಯ ನಿರ್ವಾಹಕಿ ಸುನಂದಾಬಾಯಿ ತೆಗ್ಗಿ ಸೋಮವಾರ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಜಿಲ್ಲೆಯ ಹುನಗುಂದ ತಾಲೂಕಿನ ಕಮತಗಿಯ ಶಿವಕುಮಾರ ಸಂಗಪ್ಪ ಹಿರಾಳ ತಮ್ಮ ಸರ್ವೇ ನಂಬರ್ 10/1 ರಲ್ಲಿನ 16 ಗುಂಟೆ ಜಮೀನು ಕೃಷ್ಣಾ ಮೇಲ್ದಂಡೆ ಯೋಜನೆಯ ಕಾಲುವೆ ನಿರ್ಮಾಣಕ್ಕೆ ಕಳೆದುಕೊಂಡಿದ್ದರು. ಭೂ ಸ್ವಾಧೀನಾಧಿಕಾರಿಗಳು ಜಮೀನು ಭೂ ಸ್ವಾಧೀನ ಮಾಡಿಕೊಂಡು 3,43,281 ರೂ. ಪರಿಹಾರ ಧನ ಮಂಜೂರು ಮಾಡಿದ್ದರು. ಈ ಮೊತ್ತವನ್ನು ಆರ್‌ಟಿಜಿಎಸ್ ಮೂಲಕ ಜಮೆ ಮಾಡಲು ಆರ್ ಆ್ಯಂಡ್ ಆರ್ ಕಚೇರಿ ಸಿಬ್ಬಂದಿ ಸುನಂದಾಬಾಯಿ ತೆಗ್ಗಿ, ಶಿವಕುಮಾರ ಹಿರಾಳ ಅವರಿಗೆ 4 ಸಾವಿರ ರೂ. ಲಂಚದ ಬೇಡಿಕೆ ಇಟ್ಟಿದ್ದರು. ಇದರಿಂದ ರೋಸಿಹೋಗಿದ್ದ ಶಿವಕುಮಾರ ಬಾಗಲಕೋಟೆ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರಿಗೆ ದೂರು ನೀಡಿದ್ದರು.
ಸೋಮವಾರ ರೈತ ಶಿವಕುಮಾರ ಹಿರಾಳ ಅವರಿಂದ ಸುನಂದಾಬಾಯಿ 4 ಸಾವಿರ ರೂ.ಲಂಚ ಸ್ವೀಕರಿಸಿದ್ದಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದಾಗ ರೆಡ್‌ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ. ಎಸಿಬಿ ತಂಡ ಆರ್ ಆ್ಯಂಡ್ ಆರ್ ಕಚೇರಿಯಲ್ಲಿ ಪರಿಹಾರದ ಧನ ನೀಡಬೇಕಾದ ಫಲಾನುಭವಿಗಳ ಪಟ್ಟಿ ಹಾಗೂ ಚೆಕ್‌ಗಳ ಪರಿಶೀಲನೆ ನಡೆಸಿತು. ಈ ವೇಳೆ 46,146.310 ರೂ. ಮೊತ್ತ 70 ಜನ ಫಲಾನುಭವಿಗಳಿಗೆ ನೀಡಬೇಕಾದ 56 ಚೆಕ್‌ಗಳನ್ನು ಬಾಕಿ ಇಟ್ಟುಕೊಂಡಿರುವುದು ತಿಳಿದು ಬಂದಿದೆ. ಈ ಚೆಕ್‌ಗಳನ್ನು ಕೂಡಲೇ ಫಲಾನುಭವಿಗಳಿಗೆ ಜಮೆ ಮಾಡಬೇಕು ಎಂದು ಎಸಿಬಿ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ದಾಳಿ ವೇಳೆ ಎಸಿಬಿ ಡಿವೈಎಸ್‌ಪಿ ಮಂಜುನಾಥ ಗಂಗಲ್, ಪಿಎಸ್‌ಐಗಳಾದ ವಿಶ್ವನಾಥ್ ಚೌಗಲಾ, ಸಮೀರ ಮುಲ್ಲಾ, ಸಿಬ್ಬಂದಿ ಎಚ್.ಎಸ್.ಹೂಗಾರ, ಬಿ.ಬಿ.ಕಾಖಂಡಕಿ, ಬಿ.ಎಚ್.ಮುಲ್ಲಾ, ಎಚ್.ಎ.ಪೂಜಾರಿ, ಎಸ್.ಎಸ್.ರಾಠೋಡ, ಸಿ.ಎಸ್.ಅಚನೂರ, ಶಶಿಧರ ಚರ್ಚುಳ, ಬಿ.ಎಸ್.ಪಾಟೀಲ, ಎಂ.ಎಸ್.ಹಂಗರಗಿ ಇದ್ದರು.
EndFragment