ಜಿಲ್ಲೆ

ಕಠಿಣ ಪರಿಶ್ರಮದಿಂದ ಯಶಸ್ಸು ಸಾಧ್ಯ

ಬಾಗಲಕೋಟೆ: ಕಠಿಣ ಪರಿಶ್ರಮದ ಅಧ್ಯಯನದಿಂದ ಮಾತ್ರ ಜೀವನದ ಯಶಸ್ಸಿನ ದಾರಿ ಮುಟ್ಟಲು ಸಾಧ್ಯವೆಂದು ಜಿಲ್ಲಾಧಿಕಾರಿ ಕೆ.ರಾಜೇಂದ್ರ ಹೇಳಿದರು.

ನವನಗರದ ಡಾ.ಬಿ.ಆರ್.ಅಂಬೇಡ್ಕರ ಭವನದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ವಸತಿ ನಿಲಯಗಳ ಪದವಿ ಮತ್ತು ಸ್ನಾತಕೋತ್ತರ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಸ್ಪರ್ಧಾತ್ಮಕ ಪರೀಕ್ಷೆಗಳು ಪ್ರಮಾಣಿಕವಾಗಿ ನಡೆಸಲಾಗುತ್ತದೆ. ಸಕಲ ಸಿದ್ಧತೆಯೊಂದಿಗೆ ಪರೀಕ್ಷೆ ಎದುರಿಸಿದಲ್ಲಿ ಖಂಡಿತ ಉತ್ತೀರ್ಣರಾಗುತ್ತೀರಿ. ಸರ್ಕಾರಿ ಕೆಲಸ ದೇವರ ಕೆಲಸ ಇದ್ದಂತೆ. ಅದಕ್ಕೆ ಗೌರವ ಸಲ್ಲಿಸುವುದು ಅಧಿಕಾರಿಗಳ ಕರ್ತವ್ಯ. ಪರಿಶ್ರಮವಿಲ್ಲದೇ ಯಾರು ಗುರಿ ಮುಟ್ಟಲು ಸಾಧ್ಯವಿಲ್ಲ. ಬಡಕುಟುಂಬದಲ್ಲಿ ಜನಸಿದ ಎಷ್ಟೋ ಪ್ರತಿಭೆಗಳು ದೇಶದ ಕೀರ್ತಿಯನ್ನು ಬೆಳಗಿಸುತ್ತಿದ್ದಾರೆ ಎಂದರು.

ಪ್ರೊಬೇಷನರಿ ಐ.ಎ.ಎಸ್ ಅಧಿಕಾರಿ ಗರಿಮಾ ಪವ್ವಾರ ಮಾತನಾಡಿ, ನಾವು ಕಾಣುವ ಕನಸು ನಮ್ಮ ಜೀವನದ ಗುರಿಯಾಗಿರಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಸ್ಥಾನ ಹೊಂದಲು ಹಗಲಿರುಳು ಪ್ರಯತ್ನಿಸಬೇಕು. ದೃಢ ನಿರ್ಧಾರ ಕೈಗೊಳ್ಳಬೇಕು. ಯಾವುದೇ ವಿಷಯದಲ್ಲಿ ಹೆಚ್ಚು ಆಸಕ್ತಿ ಹೊಂದಬೇಕಾದರೆ ಚಿಕ್ಕ ವಯಸ್ಸಿನಿಂದಲೇ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಶ್ರೀಶೈಲ ಕಂಕಣವಾಡಿ ಮಾತನಾಡಿ, ಶಾಲೆಗಳು ಜ್ಞಾನ ದೇಗುಲಗಳು ಇದ್ದಂತೆ. ಹೆಚ್ಚಿನ ಜ್ಞಾನ ಪಡೆದವರ ಬಾಳು ಬಂಗಾರದಂತಿರುತ್ತದೆ. ವಿದ್ಯಾರ್ಥಿಗಳು ಹೆಚ್ಚಿನ ಜ್ಞಾನ ಪಡೆದುಕೊಳ್ಳಬೇಕು. ಮಕ್ಕಳ ಭವಿಷ್ಯದ ಬಗ್ಗೆ ತಂದೆ-ತಾಯಿಗಳು ನೂರಾರು ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ. ಅವರ ಕನಸು ನನಸಾಗಿವುದು ಮಕ್ಕಳ ಕರ್ತವ್ಯ ಎಂದು ಹೇಳಿದರು.

ಈ ವೇಳೆ ಉಪವಿಭಾಗಾಧಿಕಾರಿ ಎಂ.ಗಂಗಪ್ಪ, ತಹಸೀಲ್ದಾರ ಗುರುಸಿದ್ದಯ್ಯ ಹಿರೇಮಠ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಬಲರಾಮ ಲಮಾಣಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ದೃಢ ನಿರ್ಧಾರದಿಂದ ಸದೃಢ ಭವಿಷ್ಯ ನಿರ್ಮಿಸಿಕೊಳ್ಳಲು ಸಾಧ್ಯವಿದೆ. ಹೀಗಾಗಿ ವಿದ್ಯಾರ್ಥಿಗಳು ಓದಿನತ್ತ ಹೆಚ್ಚು ಗಮನ ಹರಿಸಬೇಕು. ಶ್ರಮವಹಿಸಿ ಅಧ್ಯಯನ ಮಾಡಿದಾಗ ಮಾತ್ರ ಉನ್ನತ ಹುದ್ದೆಗಳನ್ನು ಅಲಂಕರಿಸಲು ಸಾಧ್ಯ. ಇಂತಹ ಕಾರ್ಯಾಗಾರಗಳು ಸ್ಪೂರ್ತಿದಾಯಕವಾಗಿವೆ.
- ಲೋಕೇಶ ಜಗಲಾಸರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ