ಜಿಲ್ಲೆ

ನಾಳೆ ಡಿಸಿಸಿ ಬ್ಯಾಂಕ್ ಚುನಾವಣೆ ಫಲಿತಾಂಶ

ಬಾಗಲಕೋಟೆ: ಪ್ರತಿಷ್ಠಿತ ಬಾಗಲಕೋಟೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆಗಾಗಿ ನಡೆದ ಚುನಾವಣೆ ಪ್ರಕ್ರಿಯೆಯ ಮತ ಎಣಿಕೆಗೆ ಹೈಕೋರ್ಟ್ ಹಸಿರು ನಿಶಾನೆ ತೋರಿಸಿದೆ.

ನ್ಯಾಯಾಲಯ ಆದೇಶದ ಹಿನ್ನೆಲೆಯಲ್ಲಿ ನ.27 ರಂದು ಬೆಳಗ್ಗೆ 11 ಗಂಟೆಗೆ ಡಿಸಿಸಿ ಬ್ಯಾಂಕ್‌ನಲ್ಲಿ ಮತ ಎಣಿಕೆ ಪ್ರಕ್ರಿಯೆ ನಡೆದು ಫಲಿತಾಂಶ ಪ್ರಕಟಗೊಳಿಸಲಾಗುವುದು ಎಂದು ಚುನಾವಣಾಧಿಕಾರಿ, ಬಾಗಲಕೋಟೆ ಉಪವಿಭಾಗಾಧಿಕಾರಿ ಗಂಗಪ್ಪ ಅವರು ತಿಳಿಸಿದ್ದಾರೆ.

ಸರ್ಕಾರದಿಂದ ನಾಮ ನಿರ್ದೇಶನಗೊಂಡಿರುವ ಸಿದ್ದನಗೌಡ ಪಾಟೀಲ ಅವರ ಮತ ಹೊರತುಪಡಿಸಿ ಇತರರ ಮತಗಳ ಎಣಿಕೆಗೆ ನ್ಯಾಯಾಲಯ ಸಮ್ಮತಿ ನೀಡಿದೆ. ಹೀಗಾಗಿ ಫಲಿತಾಂಶದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

ನವೆಂಬರ್ 5 ರಂದು ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆ ನಡೆದಿತ್ತು. ಅದಾದ ಬಳಿಕ ನ.17 ರಂದು ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಮುಗಿದಿತ್ತು. ಅಂದೇ ಮತ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗಬೇಕಿತ್ತು. ಆದರೆ, ಸರ್ಕಾರದಿಂದ ನಾಮನಿರ್ದೇಶನಗೊಂಡಿದ್ದ ಸಿದ್ದನಗೌಡ ಪಾಟೀಲ ಅವರ ನೇಮಕ ಪ್ರಶ್ನಿಸಿ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರು ಹೈಕೋರ್ಟ್ ಮೊರೆ ಹೋಗಿದ್ದರು.

ನ.17 ರಂದು ಮತದಾನ ನಡೆಸಲು ಸೂಚಿಸಿದ್ದ ನ್ಯಾಯಾಲಯ ಸಿದ್ದನಗೌಡ ಪಾಟೀಲ ಅವರಿಗೆ ಮತ ಚಲಾಯಿಸಲು ಅವಕಾಶ ನೀಡಿತ್ತು. ಆದರೆ, ಫಲಿತಾಂಶ ಪ್ರಕಟಿಸದಂತೆ ತಿಳಿಸಿದ್ದ ನ್ಯಾಯಾಲಯ ನ.18 ರಂದು ಅರ್ಜಿ ವಿಚಾರಣೆ ನಡೆಸಲಾಗುವುದು ಎಂದು ಹೇಳಿತ್ತು. ನಂತರ ಅರ್ಜಿ ವಿಚಾರಣೆಯನ್ನು ನ.25ಕ್ಕೆ ಮುಂದೂಡಿತ್ತು. ಗುರುವಾರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ನಾಮನಿರ್ದೇಶಿತ ಸದಸ್ಯನ ಮತ ಹೊರತುಪಡಿಸಿ ಇತರರ ಮತ ಎಣಿಕೆಗೆ ಹಸಿರು ನಿಶಾನೆ ತೋರಿಸಿದೆ. ಸಿದ್ದನಗೌಡ ಪಾಟೀಲ ಅವರ ನಾಮ ನಿರ್ದೇಶನ ಕುರಿತ ವಿಚಾರಣೆಯನ್ನು ಕಾಯ್ದಿರಿಸಿದೆ ಎಂದು ತಿಳಿದು ಬಂದಿದೆ.

14 ಮತಗಳ ಎಣಿಕೆ
ಡಿಸಿಸಿ ಬ್ಯಾಂಕ್ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಒಟ್ಟು 16 ಜನರಿಗೆ ಮತದಾನದ ಅವಕಾಶ ಸಿಕ್ಕಿತ್ತು. ಇದರಲ್ಲಿ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಮತದಾನ ಮಾಡಿರಲಿಲ್ಲ. ಹೀಗಾಗಿ 15 ಮತಗಳು ಚಲಾವಣೆಗೊಂಡಿದ್ದವು. ಈಗ ನ್ಯಾಯಾಲಯದ ತೀರ್ಪಿನಂತೆ ಸರ್ಕಾರದ ನಾಮನಿರ್ದೇಶಿತ ಸದಸ್ಯನ ಮತ ಕೈಬಿಟ್ಟು ಉಳಿದ 14 ಮತಗಳ ಎಣಿಕೆ ಕಾರ್ಯ ನಡೆಯಲಿದೆ. ಎಂಟು ಮತಗಳು ಪಡೆದವರು ವಿಜಯಶಾಲಿ ಆಗಲಿದ್ದಾರೆ.

ಬಲಾಬಲವನ್ನು ನೋಡಿದಾಗ ಕಾಂಗ್ರೆಸ್ ಮತ್ತು ಬಿಜೆಪಿ ಬೆಂಬಲಿಗ ಗುಂಪಿನಲ್ಲಿ ತಲಾ ಆರು ಮತದಾರರು ಇದ್ದಾರೆ. ಉಳಿದಂತೆ ಅಪೆಕ್ಸ್ ಬ್ಯಾಂಕ್ ಪ್ರತಿನಿಧಿ ಹಾಗೂ ಜಿಲ್ಲಾ ಸಹಕಾರ ಇಲಾಖೆ ಪ್ರಬಂಧಕರ ಮತಗಳು ಸೇರಿ ಒಟ್ಟು 14 ಮತಗಳು ಎಣಿಕೆ ಆಗಲಿವೆ.

ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬಣದಿಂದ ಕುಮಾರ ಜನಾಲಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಪ್ರಕಾಶ ತಪಶೆಟ್ಟಿ ಸ್ಪರ್ಧಿಸಿದ್ದಾರೆ. ಕಾಂಗ್ರೆಸ್ ಬಣದಿಂದ ಅಧ್ಯಕ್ಷ ಸ್ಥಾನಕ್ಕೆ ಅಜಯಕುಮಾರ ಸರನಾಯಕ, ಉಪಾಧ್ಯಕ್ಷ ಸ್ಥಾನಕ್ಕೆ ಮುರುಗೇಶ ಕಡ್ಲಿಮಟ್ಟಿ ಸ್ಪರ್ಧಿಸಿದ್ದಾರೆ.

ಮತದಾನದಲ್ಲಿ ಅಡ್ಡಮತದಾನ ಆಗಿದೆ ಎನ್ನುವ ಚರ್ಚೆಗಳು ಹರಿದಾಡುತ್ತಿದ್ದು, ಅದು ನಿಜವಾದಲ್ಲಿ ಕಾಂಗ್ರೆಸ್ ಬಣಕ್ಕೆ ಜಯದ ಮಾಲೆ ಬೀಳಲಿದೆ. ಅಡ್ಡಮತದಾನ ಆಗದೆ ಇದ್ದಲ್ಲಿ ಗೆಲುವಿನ ಹಾರ ಕಮಲ ಕಲಿಗಳು ಧರಿಸಲಿದ್ದಾರೆ. ಎಲ್ಲ ಕುತೂಹಲಕ್ಕೂ ನಾಳೆ(ಶುಕ್ರವಾರ) 11 ಗಂಟೆ ಬಳಿಕ ತೆರೆ ಬೀಳಲಿದೆ.

ನ.27 ರಂದು ಡಿಸಿಸಿ ಬ್ಯಾಂಕ್‌ನಲ್ಲಿ ಬೆಳಗ್ಗೆ 11 ಗಂಟೆಗೆ ಮತ ಎಣಿಕೆಗೆ ನ್ಯಾಯಾಲಯ ಸಮಯ ನಿಗದಿ ಮಾಡಿದೆ. ಮತ ಎಣಿಕೆಯಲ್ಲಿ ಬ್ಯಾಂಕ್‌ನ ಎಲ್ಲ ನಿರ್ದೇಶಕರು ಭಾಗವಹಿಸಲು ಅವಕಾಶ ಇದೆ.
- ಗಂಗಪ್ಪ, ಚುನಾವಣಾಧಿಕಾರಿ, ಎಸಿ ಬಾಗಲಕೋಟೆ

EndFragment