ಬಾಗಲಕೋಟೆ: ಕೋವಿಡ್ ನಿರ್ವಹಣೆ, ಆಕ್ಸಿಜನ್, ಲಸಿಕೆ ಕುರಿತು ಬಿಜೆಪಿ ನಾಯಕರು ಮಾಡಿದ ಆರೋಪಕ್ಕೆ ಕಾಂಗ್ರೆಸ್ ಪಕ್ಷದ ನಾಯಕರು ಪ್ರತ್ಯುತ್ತರ ನೀಡಿದರು. ಪ್ರತಿಯೊಂದು ಹೇಳಿಕೆ ಪ್ರಸ್ತಾಪ ಮಾಡಿ ಕಮಲ ಪಾಳೆಯದ ಮೇಲೆ ಕೈ ನಾಯಕರು ತೀವ್ರ ವಾಗ್ದಾಳಿ ನಡೆಸಿದರು.
ನವನಗರದ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಶುಕ್ರವಾರ ಜಂಟಿ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ನಾಯಕರು, ಕೋವಿಡ್ ಸೋಂಕು ಹೆಚ್ಚಳದ ಬಗ್ಗೆ ತಜ್ಞರ ಸಮಿತಿ ವರದಿ ನೀಡಿತ್ತು. ಆದರು ಸಹ ಕೇಂದ್ರ, ರಾಜ್ಯ ಸರ್ಕಾರ ನಿರ್ಲಕ್ಷೃ ವಹಿಸಿದ ಪರಿಣಾಮ ಸೋಂಕು ದ್ವಿಗುಣಗೊಂಡಿತ್ತು. ಡಬಲ್ ಇಂಜಿನ್ ಸರ್ಕಾರ ಯಾವ ಒಳ್ಳೆಯ ಕೆಲಸ ಮಾಡುತ್ತಿಲ್ಲ. ನೆಪ ಮಾತ್ರಕ್ಕೆ ಪ್ಯಾಕೇಜ್ ಘೋಷಣೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಮೊದಲು ದೇಶದ ಪ್ರಧಾನಿ ಆಗಲಿ. ನಂತರ ವಿಶ್ವ ನಾಯಕರಾಗಲಿ ಎಂದು ಲೇವಡಿ ಮಾಡಿದರು.
ವಿಧಾನ ಪರಿಷತ್ತ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ ಮಾತನಾಡಿ, ಕೋವಿಡ್ ನಿರ್ವಹಣೆಯಲ್ಲಿ ಕೇಂದ್ರ, ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿವೆ. ರಾಜ್ಯದ 31 ಜಿಲ್ಲೆಗಳಲ್ಲಿಯೂ ಆಕ್ಸಿಜನ್ ಕೊರತೆ ಇದೆ. ಇದರಿಂದ ಸಾವಿನ ಪ್ರಮಾಣ ಹೆಚ್ಚಾಗಿದೆ. ರಾಜ್ಯಕ್ಕೆ 1800 ಕೆ.ಎಲ್ ಆಕ್ಸಿಜನ್ ಅವಶ್ಯಕತೆ ಇತ್ತು. 800 ಕೆ.ಎಲ್ ಮಾತ್ರ ಕೇಂದ್ರ ಪೂರೈಕೆ ಮಾಡುತ್ತಿತ್ತು. ನ್ಯಾಯಾಲಯ ಆದೇಶದ ಬಳಿಕ 1200 ಪೂರೈಕೆಯಾಗುತ್ತಿದೆ. ಇದೀಗ ಬ್ಲಾಕ್, ವೈಟ್ ಫಂಗಸ್ ಸೋಂಕು ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ಬೇಕಾದ ಔಷಧಿ ಕೊರತೆ ಇದೆ. ಸೋಂಕಿತರ ಪರದಾಟ ಮುಗಿಲು ಮುಟ್ಟಿದೆ ಎಂದು ಆರೋಪಿದರು.
ಬಿಜೆಪಿಯವರು ತಮ್ಮ ಮನೆಯಿಂದ ಕೊಟ್ಟಿದ್ದಾರಾ?
ಕಳೆದ ಘೋಷಣೆ ಮಾಡಿದ ಪ್ಯಾಕೇಜ್ ಹಣ ಇದು ವರೆಗೂ ಹಣ ಬಂದಿಲ್ಲ. ಈ ಸಾರಿ 1250 ಕೋಟಿ ರೂ. ಪ್ಯಾಕೇಜ್ ಘೋಷಿಸಿ 4 ಕೋಟಿ ಫಲಾನುಭವಿಗಳಿಗೆ ತಲುಪಿಸುದಾಗಿ ತಿಳಿಸಿದ್ದಾರೆ. ಈ ಹಣ ತಲಾವಾರು ಹಂಚಿಕೆ ಮಾಡಿದರೇ 165 ರೂ. ಬರುವದಿಲ್ಲ. ಇನ್ನು 100 ಕೋಟಿ ರೂ. ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಕಾಂಗ್ರೆಸ್ ನೀಡಲು ಮುಂದಾಗಿರುವುದಕ್ಕೆ ಟೀಕೆ ಮಾಡಿರುವುದು ಸರಿಯಲ್ಲ. ಬಿಜೆಪಿಯವರು ಪ್ಯಾಕೇಜ್ ಘೋಷಣೆ ಮಾಡಿದ್ದಾರಲ್ಲ ಅದನ್ನು ತಮ್ಮ ಮನೆಯಿಂದ ಕೊಟ್ಟಿದ್ದಾರಾ? ಪ್ರಧಾನಿ ಮೋದಿ 20 ಲಕ್ಷ ಕೋಟಿ ರೂ. ಪ್ಯಾಕೇಜ್ ಏನಾಯಿತು ಎಂದು ಪ್ರಶ್ನೆಗಳ ಸುರಿಮಳೆಗೈದ ಎಸ್.ಆರ್.ಪಾಟೀಲ ಅವರು, ನಾವು ಕೂಡಾ ಅಂಬುಲೇನ್ಸ್, ಆಹಾರ ಕಿಟ್ ವಿತರಣೆ ಮಾಡಿದ್ದೇವೆ. ಅದನ್ನು ಎಲ್ಲಿಯೂ ಹೇಳಿಕೊಂಡಿಲ್ಲ ಎಂದು ತಿಳಿಸಿದರು.
ಶೇ.4 ರಷ್ಟು ಲಸಿಕೆ ವಿತರಣೆ
ದೇಶದಲ್ಲಿ 130 ಕೋಟಿ ಜನ ಸಂಖ್ಯೆ ಇದೆ. 100 ಕೋಟಿ ಜನ ಲಸಿಕೆ ಪಡೆಯಲು ಅರ್ಹರಿದ್ದಾರೆ. ಈ ವರೆಗೆ 14 ಕೋಟಿ ಜನ ಮಾತ್ರ ಫಸ್ಟ್ ಡೋಜ್ ಲಸಿಕೆ ಹಾಕಿಸಿಕೊಂಡಿದ್ದಾರೆ. ಶೇ.4 ಜನರಿಗೆ ಎರಡು ಡೋಜ್ ಲಸಿಕೆ ತಲುಪಿದೆ. ಶೇ.95 ರಷ್ಟು ಜನರಿಗೆ ಲಸಿಕೆ ತಲುಪಿಲ್ಲ. ದೇಶವಾಸಿಗಳಿಗೆ ಲಸಿಕೆ ನೀಡುವ ಬದಲು ತಮ್ಮ ಪ್ರಚಾರಕ್ಕಾಗಿ 95 ರಾಷ್ಟ್ರಗಳಿಗೆ 6.6 ಕೋಟಿ ಲಸಿಕೆ ಹಂಚಿಕೆ ಮಾಡಿದ್ದಾರೆ. ಈಗಲಾದರು ಮೂರನೇ ಅಲೆ ಬಗ್ಗೆ ಎಚ್ಚರಗೊಳ್ಳಲಿ ಎಂದು ಎಸ್.ಆರ್.ಪಾಟೀಲ ದೂರಿದರು. ಮುಖಂಡರಾದ ಎಸ್.ಎನ್.ರಾಂಪೂರ, ಸಂತೋಷ ಬಗಲಿದೇಸಾಯಿ, ನಾಗರಾಜ ಹದ್ಲಿ ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.
ಲಸಿಕೆ ಬಗ್ಗೆ ಕಾಂಗ್ರೆಸ್ ಅಪ್ರಚಾರ ಮಾಡಿಲ್ಲ
ಶಾಸಕ ಆನಂದ ನ್ಯಾಮಗೌಡ ಮಾತನಾಡಿ, ಲಸಿಕೆ ಬಗ್ಗೆ ಕಾಂಗ್ರೆಸ್ ಪಕ್ಷವು ಅಪ್ರಚಾರ ಮಾಡಿಲ್ಲ. ವ್ಯಾಕ್ಸಿನ್ ನೀಡುವಾಗ 3 ಹಂತದ ಪರೀಕ್ಷೆಗಳು ಇರುತ್ತವೆ. ಅದಕ್ಕೆ ಒಪ್ಪಿಗೆ ಸಿಕ್ಕಿದ ಬಳಿಕ ನೀಡಿ, ಇಲ್ಲವಾದಲ್ಲಿ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದೇವೆ. ಅದನ್ನು ತಪ್ಪಾಗಿ ಬಿಂಬಿಸುವ ಯತ್ನ ನಡೆಯುತ್ತಿದೆ. ನೀವು(ಬಿಜೆಪಿ) ಹೇಳಿದಾಗ ಜನ ಚಪ್ಪಾಳೆ ತಟ್ಟಿದರು, ತಮಟೆ ಭಾರಿಸಿದರು, ದೀಪ ಹಚ್ಚಿದರು. ಮತ್ತೆ ವ್ಯಾಕ್ಸಿನ್ ಯಾಕೇ ಹಾಕಿಸಿಕೊಳ್ಳಲಿಲ್ಲ ಎಂದು ವ್ಯಂಗ್ಯವಾಡಿದರು.
ವ್ಯಾಕ್ಸಿನ್ ಬಗ್ಗೆ ವಿಶ್ವದ ಅನೇಕ ರಾಷ್ಟ್ರಗಳು ತಮ್ಮ ದೇಶದ ಜನರ ಕಾಳಜಿ ವಹಿಸಿದ್ದವು. ತಮ್ಮ ದೇಶದ ಜನ ಸಂಖ್ಯೆಗ್ಗಿಂತ 2 ರಿಂದ 3 ಪಟ್ಟು ಲಸಿಕೆ ಖರೀದಿಸುವ ಬಗ್ಗೆ 2020 ಮೇ, ಆಗಸ್ಟ್ ತಿಂಗಳಿನಲ್ಲಿ ಒಪ್ಪಿಗೆ ನೀಡಿದ್ದವು. ಯೂನೈಟೆಡ್ ಕಿಂಗಡಮ್(ಯುಕೆ) 3.5 ಪಟ್ಟು, ಅಮೆರಿಕಾ 2 ಪಟ್ಟು, ಕೆನಡಾ ದೇಶ ತನ್ನ ಜನ ಸಂಖ್ಯೆಗ್ಗಿಂತ 5 ಪಟ್ಟು ಲಸಿಕೆ ಖರೀದಿ ಮಾಡಿದ್ದವು. ಆದರೇ ಪ್ರಧಾನಿ ನರೇಂದ್ರ ಮೋದಿ ಜನವರಿ 2021 ರಲ್ಲಿ ಲಸಿಕೆ ಖರೀದಿಗೆ ಮುಂದಾದರು. 100 ಕೋಟಿ ಗೂ ಹೆಚ್ಚು ಜನ ಸಂಖ್ಯೆ ಇರುವ ದೇಶಕ್ಕೆ ಕೇವಲ ಶೇ.4 ರಷ್ಟು ಮಾತ್ರ ಲಸಿಕೆ ಖರೀದಿ ಮಾಡಿದರು. ಇದೀಗ ತಮ್ಮ ತಪ್ಪು ಮುಚ್ಚಿಕೊಳ್ಳಲು ಕಾಂಗ್ರೆಸ್ ಮೇಲೆ ಆರೋಪ ಮಾಡುತ್ತಿದ್ದಾರೆ. ನರೇಂದ್ರ ಮೋದಿ ಮೊದಲು ದೇಶಕ್ಕೆ ಮೊದಲ ಪ್ರಧಾನಿ ಆಗಲಿ, ಹೆಚ್ಚುವರಿ ಲಸಿಕೆ ಕೊಟ್ಟು ನಂತರ ವಿಶ್ವಗುರು ಆಗಲಿ ಎಂದು ಟೀಕಿಸಿದರು.
ಇನ್ನೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೋವಿಡ್ ಸೋಂಕು ಬಗ್ಗೆ 2020 ಜನವರಿಯಲ್ಲಿ ಎಚ್ಚರಿಕೆ ನೀಡಿದ್ದರು. ಮಾರ್ಚ್‌ನಲ್ಲಿ 137 ಪ್ರಕರಣ ಕಾಣಿಸಿಕೊಂಡಾಗ ಮತ್ತೆ ಸರ್ಕಾರಕ್ಕೆ ಸಲಹೆ ನೀಡಿದರು. ಆದರೇ ಪ್ರಧಾನಿ ಮೋದಿ ಟ್ರಂಪ್ ಕಾರ್ಯಕ್ರಮದಲ್ಲಿ ಬಿಜಿ ಆಗಿದ್ದರು. 2020 ಆಗಸ್ಟ್ ಲಸಿಕೆ ಬಗ್ಗೆ ಪಾರದರ್ಶಕತೆ ಕಾಯ್ದುಕೊಳ್ಳುವಂತೆ ತಿಳಿಸಿದ್ದರು. ನಂತರ ಎರಡನೇ ಅಲೆ ಬಗ್ಗೆ ಹೇಳಿಕೆ ನೀಡಿ ಸರ್ಕಾರದ ಗಮನ ಸೆಳೆದಿದ್ದರು. ಆದರೇ ಕೇಂದ್ರ ಸರ್ಕಾರ ಪಶ್ಚಿಮ ಬಂಗಾಳ ಚುನಾವಣೆ, ಕುಂಬಮೇಳದಲ್ಲಿ ಮಗ್ನವಾಗಿತ್ತು. ಇದರ ಫಲವಾಗಿ ಇಂದು ನಾವು ಅನುಭವಿಸುತ್ತಿದ್ದೇವೆ ಎಂದು ಬಿಜೆಪಿ ಸರ್ಕಾರಗಳ ವಿರುದ್ಧ ಅಂಕಿ, ಅಂಶಗಳ ಮೂಲಕ ತೀವ್ರ ವಾಗ್ದಾಳಿ ನಡೆಸಿದರು.
ಪ್ರಧಾನಿ ಮೋದಿ ಹುಚ್ಚ ಎನ್ನಲು ಆಗುತ್ತಾ?
ರಾಹುಲ್ ಗಾಂಧಿ ಬಗ್ಗೆ ಶಾಸಕ ವೀರಣ್ಣ ಚರಂತಿಮಠ ನೀಡಿರುವ ಹೇಳಿಕೆಗೆ ತಿರುಗೇಟು ನೀಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ, ರಾಜಕಾರಣದಲ್ಲಿ ಎಲ್ಲರಿಗೂ ಗೌರವ ಭಾಷೆ ಬಳಸಬೇಕು. ಶಾಸಕ ಚರಂತಿಮಠ ನಾಲಿಗೆ ಅವರ ಸಂಸ್ಕೃತಿ ಬಿಂಬಿಸುತ್ತದೆ. ಪ್ರಧಾನಿ, ವಿರೋಧ ನಾಯಕ ಹುದ್ದೆಗೆ ತನ್ನದೆಯಾದ ಗೌರವ ಇರುತ್ತದೆ. ಗಡ್ಡಬಿಟ್ಟಿದ್ದಾರೆ ಎಂದ ಮಾತ್ರಕ್ಕೆ ಪ್ರಧಾನಿ ಮೋದಿ ಹುಚ್ಚ ಎನ್ನಲು ಆಗುತ್ತಾ? ಸರ್ಕಾರ ಕಾರ್ಯವೈಖರಿ ಬಗ್ಗೆ ಶಾಸಕರಾದ ಎಚ್.ವಿಶ್ವನಾಥ, ಬಸನಗೌಡ ಪಾಟೀಲಯತ್ನಾಳ ಅವರೇ ಟೀಕೆ ಮಾಡುತ್ತಿದ್ದಾರೆ. ಸೋಂಕಿಗೆ ಬಲಿಯಾಗುತ್ತಿರುವವರ ಸಂಖ್ಯೆ ಕಡಿಮೆ ಮಾಡಲಿ, ಅದು ಬಿಟ್ಟು ಜನರ ದಿಕ್ಕು ತಪ್ಪಿಸುವ ಹೇಳಿಕೆ ಸಲ್ಲ ಎಂದು ತಿರುಗೇಟು ನೀಡಿದರು.
ಕೋವಿಡ್ ಸೋಂಕು ನಿಯಂತ್ರಿಸುವಲ್ಲಿ ಸರ್ಕಾರ ಎಡವಿದೆ. ತಜ್ಞರ ಸಮಿತಿ ವರದಿ, ವಿಪಕ್ಷಗಳ ಸಲಹೆ, ಸೂಚನೆ ಪರಿಗಣಿಸುತ್ತಿಲ್ಲ. ಮನಸ್ಸಿಗೆ ಬದ್ದಂತೆ ಆಡಳಿತ ನಡೆಸುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಸೋಂಕು ಹೆಚ್ಚಳಗೊಂಡಿದ್ದು, ಜನ ಭಯ ಭೀತರಾಗಿದ್ದಾರೆ. ಜನರಲ್ಲಿ ಜಾಗೃತಿ ಮೂಡಿಸಿ ಚಿಕಿತ್ಸೆ ನೀಡುವುದ ಜತೆಗೆ ಧೈರ್ಯ ತುಂಬುಬೇಕು.
- ಎಚ್.ವೈ.ಮೇಟಿ ಮಾಜಿ ಸಚಿವ