ಬಾಗಲಕೋಟೆ: ಜಿಲ್ಲೆಯಲ್ಲಿ ಕೋವಿಡ್ ಸೋಂಕು ಹೆಚ್ಚಾಗುತ್ತಿದೆ. ಹೀಗಾಗಿ ಜಿಲ್ಲೆಯಲ್ಲಿ ಅನುಮತಿ ನೀಡಿದ ಎಲ್ಲ ಮದುವೆ ಕಾರ್ಯಕ್ರಮಗಳನ್ನು ರದ್ದು ಪಡಿಸಲಾಗಿದೆ. ಅಲ್ಲದೆ, ಸೋಂಕಿನ ಲಕ್ಷಣ ಇರುವ ರೋಗಿಗಳಿಗೆ ಈಗಾಗಲೇ ಸ್ಥಾಪಿಸಲಾಗಿರುವ ಕೋವಿಡ್ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ರಾಜೇಂದ್ರ ಹೇಳಿದರು.
ಜಿಲ್ಲೆಯಲ್ಲಿ ಮದುವೆಗಾಗಿ ಬಾಗಲಕೋಟೆ ಉಪವಿಭಾಗದಲ್ಲಿ 685, ಜಮಖಂಡಿಯಲ್ಲಿ 291 ಪರವಾನಗಿ ಪಡೆದಿದ್ದಾರೆ. ಈ ಎಲ್ಲ ಪರವಾನಗಿ ರದ್ದು ಪಡಿಸಲಾಗಿದೆ. ಸಾರ್ವಜನಿಕವಾಗಿ ಗುಂಪು ಸೇರಿ ಮದುವೆ ಮಾಡುವಂತಿಲ್ಲ. ಮನೆಯಲ್ಲಿ ಸರಳವಾಗಿ ಮದುವೆಯಾದರೆ ನಮ್ಮ ಅಭ್ಯಂತರವಿಲ್ಲ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವ್ಯಾಕ್ಸಿನ್ ಬಗ್ಗೆ ಗೊಂದಲವಿತ್ತು. ಅಗತ್ಯವಿರುವಷ್ಟು ವ್ಯಾಕ್ಸಿನ್ ಜಿಲ್ಲೆಗೆ ಬಂದಿವೆ. 18 ವರ್ಷ ಮೇಲ್ಪಟ್ಟ ಎಲ್ಲರಿಗೂ ವ್ಯಾಕ್ಸಿನ್ ಹಾಕಲಾಗುತ್ತದೆ. 1300 ಕೋವ್ಯಾಕ್ಸಿನ್ ಬಂದಿದೆ. ಎರಡನೇ ಡೋಸ್ ಪಡೆಯುವವರಿಗೆ ಮಾತ್ರ ಹಾಕಲಾಗುತ್ತದೆ. 16,700 ಕೋವಿಶೀಲ್ಡ್ ದಾಸ್ತಾನು ಇದೆ. ಈ ಪೈಕಿ 6,500 ಡೋಸ್ 18 ರಿಂದ 45 ವರ್ಷ ದೊಳಗಿನ ಜನರಿಗೆ ನೀಡಲು ಮೀಸಲಿಡಲಾಗಿದೆ. ನೋಂದಣಿ ಮಾಡಿಕೊಂಡು ತಮ್ಮ ಮೊಬೈಲ್‌ಗೆ ಎಸ್‌ಎಂಎಸ್ ಬಂದ ಮೇಲೆ ಲಸಿಕೆ ಪಡೆಯಲು ಆಸ್ಪತ್ರೆಗೆ ಬರಬೇಕು. ಇನು ್ನಕೋವಿಡ್ ಸೋಂಕಿನ ಲಕ್ಷಣ ಇರುವವರಿಗೆ ಹೋಮ್ ಐಸೋಲೇಷನ್‌ನಲ್ಲಿ ಚಿಕಿತ್ಸೆ ನೀಡುವುದಿಲ್ಲ. ಬದಲಾಗಿ ಬಾಗಲಕೋಟೆ ನಗರದಲ್ಲಿ ಸ್ಥಾಪಿಸಲಾಗಿರುವ 4, ಪ್ರತಿ ತಾಲೂಕು ಕೇಂದ್ರದಲ್ಲಿ ಸ್ಥಾಪಿಸಲಾಗಿರುವ ಕೋವಿಡ್ ಕೇರ್ ಸೆಂಟರ್‌ನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುವುದು ಎಂದು ಹೇಳಿದರು.
ಕೋವಿಡ್ ಲಸಿಕೆ ಪಡೆದರು ಸೋಂಕು ಬರುವುದಿಲ್ಲ ಎಂದುಕೊಳ್ಳಬೇಡಿ. ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಹೀಗಾಗಿ ಲಸಿಕೆ ಪಡೆದರು ಸಹ ಮಾಸ್ಕ್, ಪರಸ್ಪರ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ. ಕೋವಿಡ್ ಲಕ್ಷಣಗಳು ಕಂಡುಬಂದವರಿಗೆ ಕೋವಿಡ್ ಚಿಕಿತ್ಸೆಯಲ್ಲಿ ನೀಡುವಂತಹ ಮಾತ್ರೆಗಳ ಕಿಟ್‌ಗಳನ್ನು ಆಶಾ ಕಾರ್ಯಕರ್ತೆಯರ ಮೂಲಕ ಮನೆ ಮನೆಗೆ ವಿತರಿಸಲಾಗುತ್ತಿದೆ. ಕಿಟ್ ವಿತರಣೆಗೆ ಅಭಿಯಾನ ಹಮ್ಮಿಕೊಂಡಿದ್ದು, ಈಗಾಗಲೇ 29 ಸಾವಿರ ಕಿಟ್ ವಿತರಿಸಲಾಗಿದೆ. ಲಕ್ಷಣಗಳು ಹೊಂದಿರುವವರನ್ನು ಕಡ್ಡಾಯವಾಗಿ ಸಿಸಿಸಿ ಕೇಂದ್ರಗಳಿಗೆ ಸ್ಥಳಾಂತರ ಮಾಡಲಾಗುತ್ತದೆ ಎಂದರು.
ಜಿಲ್ಲಾ ಪಂಚಾಯಿತಿ ಸಿಇಒ ಟಿ.ಭೂಬಾಲನ್ ಮಾತನಾಡಿ, ವಿವಿಧ ಭಾಗದಿಂದ ಜಿಲ್ಲೆಗೆ 4,886 ವಲಸೆ ಕಾರ್ಮಿಕರು ಆಗಮಿಸಲಿದ್ದಾರೆ. ಅಲ್ಲದೆ, ಮೇ 10 ರಂದು 528 ಜನ ವಲಸೆ ಕಾರ್ಮಿಕರು ಆಗಮಿಸಿದ್ದು, ಅವರೆಲ್ಲರ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ. ಈವರೆಗೆ ಆಗಮಿಸಿದ ವಲಸೆ ಕಾರ್ಮಿಕರ ಪೈಕಿ 396 ಜನರಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಗ್ರಾಮೀಣ ಭಾಗದಲ್ಲಿ ಕೋವಿಡ್ ಲಕ್ಷಣಗಳು ಕಂಡುಬಂದಲ್ಲಿ ಅವರಿಗೆ ಕೋವಿಡ್ ಪರೀಕ್ಷೆಗೆ ಒಳಪಡಿಸಲು ವಾರ್‌ರೂಮ್ ಸ್ಥಾಪಿಸಲಾಗಿದೆ. ಲಕ್ಷಣಗಳು ಇದ್ದಲ್ಲಿ ಅಂತವರನ್ನು ಸಿಸಿಸಿ ಕೇಂದ್ರಗಳಿಗೆ ದಾಖಲಿಸಲಾಗುತ್ತಿದೆ. ಕೋವಿಡ್ ಪ್ರಕರಣಗಳು ಹೆಚ್ಚಾದಲ್ಲಿ ಶಾಲೆಗಳನ್ನು ಸಿಸಿಸಿ ಕೇಂದ್ರಗಳಾಗಿ ಪರಿವರ್ತನೆ ಮಾಡಲಾಗುವುದು ಎಂದು ಹೇಳಿದರು. ಡಿಎಚ್‌ಒ ಡಾ.ಅನಂತ ದೇಸಾಯಿ ಸುದ್ದಿಗೋಷ್ಠಿಯಲ್ಲಿ ಇದ್ದರು.
ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಮದುವೆ ಕಾರ್ಯಕ್ರಮಗಳಿಗೆ ನೀಡಿದ ಅನುಮತಿ ರದ್ದುಪಡಿಸಲಾಗಿದೆ. ಸೋಂಕಿನಿಂದ ತಂದೆ, ತಾಯಿಗಳು, ಪೋಷಕರು ಮೃತಪಟ್ಟು ಮಕ್ಕಳು ಅನಾಥವಾಗಿರುವುದು ಕಂಡು ಬಂದಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಕರೆ ಮಾಡಿ ಮಾಹಿತಿ ನೀಡುವ ಮೂಲಕ ನೆರವಿಗೆ ನಿಲ್ಲಬೇಕು. ಲಾಕ್‌ಡೌನ್ ನಿಯಮ ಉಲ್ಲಂಘನೆಯಾದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು.
- ಕೆ.ರಾಜೇಂದ್ರ, ಜಿಲ್ಲಾಧಿಕಾರಿ
ಸಹಾಯವಾಣಿ ಸ್ಥಾಪನೆ
ಕೋವಿಡ್ ಚಿಕಿತ್ಸೆಗಾಗಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿರುವ ವಿವಿಧ ತರಹದ ಬೆಡ್‌ಗಳ ಮಾಹಿತಿ ನೀಡುವ ಸಲುವಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ದಿನ 24 ಗಂಟೆಗಳ ಸಹಾಯವಾಣಿ ಸ್ಥಾಪಿಸಲಾಗಿದ್ದು, 08354-235512 ಸಂಖ್ಯೆಗೆ ಕರೆ ಮಾಡುವ ಮೂಲಕ ಮಾಹಿತಿ ಪಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿ ಕೆ.ರಾಜೇಂದ್ರ ಮನವಿ ಮಾಡಿದರು.
ಬಾಗಲಕೋಟೆ ವೆಬ್‌ಪೋರ್ಟಲ್ ಮೂಲಕ ಬೆಡ್ ಲಭ್ಯತೆ ಬಗ್ಗೆ ಕ್ಷಣ ಕ್ಷಣದ ಮಾಹಿತಿ ನೀಡಲಾಗುತ್ತಿದ್ದು, ಇದರ ಜತೆಗೆ ಸಹಾಯವಾಣಿ ಮೂಲಕವು ಸಹ ಕೋವಿಡ್ ಚಿಕಿತ್ಸೆಗೆ ಜನರಲ್ ಬೆಡ್, ಆಕ್ಸಿಜನ್ ಬೆಡ್, ಐಸಿಯು ಮತ್ತು ವೆಂಟಿಲೇಟರ್ ಹೊಂದಿದ ಬೆಡ್, ಎಚ್‌ಡಿಯು ಹಾಗೂ ಆಕ್ಸಿಜನ್ ಬೆಡ್‌ಗಳ ಲಭ್ಯತೆ ಬಗ್ಗೆ ಮಾಹಿತಿ ಒದಗಿಸಲಾಗುತ್ತಿದೆ ಎಂದು ತಿಳಿಸಿದರು.
ದಾಖಲೆಗಳನ್ನು ಹಾಜರು ಪಡಿಸಿ
ಲಾಕ್‌ಡೌನ್ ನಿಯಮ ಉಲ್ಲಂಸಿ ಸೋಮವಾರ ಬೇಕಾಬಿಟ್ಟಿ ಓಡಾಡುತ್ತಿದ್ದ 584 ದ್ವಿಚಕ್ರ ವಾಹನಗಳನ್ನು ಲಾಕ್‌ಡೌನ್ ಮೊದಲ ದಿನ ಜಪ್ತಿ ಮಾಡಲಾಗಿದೆ. ಎರಡನೇ ದಿನವಾದ ಮಂಗಳವಾರ 350 ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಎಸ್‌ಪಿ ಲೋಕೇಶ ಜಗಲಾಸರ್ ಹೇಳಿದರು.
ವಾಹನ ಮಾಲೀಕರು ದಾಖಲೆಗಳನ್ನು ಹಾಜರು ಪಡಿಸಿದಲ್ಲಿ ಲಾಕ್‌ಡೌನ್ ಮುಗಿದ ಬಳಿಕ ವಾಹನ ವಾಪಸ್ ನೀಡಲಾಗುವುದು. ದಾಖಲಾತಿ ಸರಿ ಇಲ್ಲದೆ ಹೋದಲ್ಲಿ ವಾಹನಗಳನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗುವುದು. ದಿನಸಿ ವಸ್ತುಗಳ ಖರೀದಿಗೆ ಬೆಳಗ್ಗೆ 6 ರಿಂದ 10 ಗಂಟೆವರೆಗೆ ಅವಕಾಶ ಕಲ್ಪಿಸಿದೆ. ಈ ಅವಧಿಯಲ್ಲಿ ಮಾತ್ರ ಖರೀದಿಗೆ ಬರಬೇಕು. ಇನ್ನು ಮುಧೋಳ ನಗರದಲ್ಲಿ ದಿನಸಿ ಮಾರಾಟದ ವರ್ತಕರು ಸಂಪೂರ್ಣ ಅಂಗಡಿ ಬಂದ್ ಮಾಡಿದ್ದಾರೆ. ನಗರದ ಪ್ರತಿಯೊಂಂದು ಪ್ರದೇಶದಲ್ಲಿ ಹೋಮ್ ಡೆಲಿವರಿ ಮಾಡುವ ಕಾರ್ಯ ಕೈಗೊಂಡು ಮಾದರಿ ಕಾರ್ಯ ಮಾಡಿದ್ದಾರೆ. ಜಿಲ್ಲೆಯ ಉಳಿದ ಕಡೆ ಈ ವ್ಯವಸ್ಥೆ ಮಾಡಿದಲ್ಲಿ ಜನರು ಹೊರಗಡೆ ಬರುವುದನ್ನು ತಪ್ಪಿಸಬಹುದಾಗಿದೆ ಎಂದು ಹೇಳಿದರು.