ಬಾಗಲಕೋಟೆ: ಕೋವಿಡ್ ಎರಡನೇ ಅಲೆ ಪಾಸಿಟಿವಿಟಿ ಪ್ರಮಾಣ ಜಿಲ್ಲೆಯಲ್ಲಿ ಕಡಿಮೆಯಾಗುತ್ತಿದ್ದಂತೆ ಜಿಲ್ಲೆಯಲ್ಲಿ ಅನ್‌ಲಾಕ್ ಪ್ರಕ್ರಿಯೆ ಆರಂಭಗೊಂಡಿದೆ. ಹೆಮ್ಮಾರಿ ಅಟ್ಟಹಾಸಕ್ಕೆ ಸ್ತಬ್ಧಗೊಂಡಿದ್ದ ಕೋಟೆನಾಡು ಸೋಮವಾರದಿಂದ ಸಹಜ ಸ್ಥಿತಿಯತ್ತ ಸಾಗಿತು.
ಜಿಲ್ಲಾ ಕೇಂದ್ರ ಸ್ಥಾನ ಬಾಗಲಕೋಟೆ ಹಾಗೂ ಮುಧೋಳ, ಜಮಖಂಡಿ, ರಬಕವಿ-ಬನಹಟ್ಟಿ, ತೇರದಾಳ, ಮಹಾಲಿಂಗಪುರ, ಬಾದಾಮಿ, ಗುಳೇದಗುಡ್ಡ, ಹುನಗುಂದ, ಇಳಕಲ್ಲ, ಅಮೀನಗಡ, ಕಮತಗಿ ಸೇರಿ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕ, ಸಾಮಾಜಿಕ ಚಟುವಟಿಕೆ ಮತ್ತು ಮಾರುಕಟ್ಟೆಯಲ್ಲಿ ವ್ಯಾಪಾರ, ವಹಿವಾಟು ಪುನರಾರಂಭಗೊಂಡವು.
ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆ ವರೆಗೆ ಸರ್ಕಾರದ ಮಾರ್ಗಸೂಚಿ ಅನ್ವಯ ವ್ಯಾಪಾರ, ವಹಿವಾಟು ನಡೆಯಿತು. ಮಧ್ಯಾಹ್ನದ ಹೊತ್ತಿಗೆ ಪೊಲೀಸರು, ನಗರ ಸ್ಥಳೀಯ ಸಂಸ್ಥೆಗಳ ಸಿಬ್ಬಂದಿ ಸಂಚರಿಸಿ ಸಾರ್ವಜನಿಕರನ್ನು ವಾಪಸ್ ಕಳುಹಿಸಿ ವ್ಯಾಪಾರ, ವಹಿವಾಟು ಬಂದ್ ಮಾಡಿದರು. ಲಾಕ್‌ಡೌನ್‌ನಿಂದ ನೀರವ ಮೌನ ಆವರಿಸಿದ್ದ ಪ್ರಮುಖ ರಸ್ತೆ, ಬೀದಿಗಳಲ್ಲಿ ವಾಹನ ಸಂಚಾರ, ಸಾರ್ವಜನಿಕರ ಓಡಾಟ ಕಂಡು ಬಂದಿತು. ವಿವಿಧ ವಸ್ತುಗಳನ್ನು ಖರೀದಿಸಲು ಸಾರ್ವಜನಿಕರು ಮುಗಿಬಿದ್ದರು.
ಆಹಾರ, ದಿನಸಿ, ಹಣ್ಣು, ತರಕಾರಿ, ಮೀನ, ಮಾಂಸ, ಡೇರಿ ಹಾಗೂ ಹಾಲಿನ ಬೂತ್‌ಗಳು, ಪಶು ಆಹಾರಗಳ ವಹಿವಾಟು ನಡೆಯಿತು. ಬಟ್ಟೆ ಅಂಗಡಿಗಳು, ಜ್ಯುವೆಲರಿ ಶಾಪ್ ಸೇರಿ ಇತರ ಯಾವುದೇ ವಹಿವಾಟಿಗೆ ಅವಕಾಶ ಇರಲಿಲ್ಲ. ಪೆಟ್ರೋಲ್ ಬಂಕ್, ಆಸ್ಪತ್ರೆ, ವೈದ್ಯಕೀಯ ಸೇವೆಗೆ ಯಾವುದೇ ಸಮಸ್ಯೆ ಉಂಟಾಗಲಿಲ್ಲ. ಜಿಲ್ಲೆಯ ಅನೇಕ ವ್ಯಾಪಾರಿಗಳು, ಅಲ್ಲಿ ಕೆಲಸ ಮಾಡುವ ಕಾರ್ಮಿಕರು, ಸಿಬ್ಬಂದಿ ಲಸಿಕೆ ಪಡೆದುಕೊಳ್ಳಲು ಆಸ್ಪತ್ರೆಗಳತ್ತ ಧಾವಿಸಿದರು. ದಿನವಿಡೀ ಹೋಟೆಲ್, ಖಾನಾವಳಿಗಳಲ್ಲಿ ಹೋಮ್ ಡೆಲಿವರಿಗೆ ಅವಕಾಶ ಕಲ್ಪಿಸಲಾಗಿತ್ತು. ಉದ್ಯಾನಗಳು, ಪಾರ್ಕ್‌ಗಳಲ್ಲಿ ಬೆಳಗ್ಗೆ ಹೊತ್ತಿನಲ್ಲಿ ಜನ ಕಂಡು ಬಂದರು. ಟ್ಯಾಕ್ಸಿ, ಆಟೋ ರಿಕ್ಷಾಗಳು ಸೇವೆ ದೊರೆಯಿತು. ಸರ್ಕಾರಿ ಕಚೇರಿಗಳಲ್ಲಿಯೂ ಲವಲವಿಕೆ ವಾತಾವರಣ ಕಾಣಿಸಿತು.
ಮತ್ತೆ ನಿರ್ಲಕ್ಷೃ ಧೋರಣೆ
ಮಾರುಕಟ್ಟೆ ಪ್ರದೇಶ, ಪ್ರಮುಖ ಬೀದಿಗಳಲ್ಲಿ ಸಾರ್ವಜನಿಕರ ಓಡಾಟ, ಜನದಟ್ಟಣೆ ಇತ್ತು. ಆದರೆ, ಖರೀದಿಗೆ ಮುಗಿಬಿದ್ದ ಜನರು ಮತ್ತೆ ಕೋವಿಡ್ ಬಗ್ಗೆ ನಿರ್ಲಕ್ಷೃ ಧೋರಣೆ ಅನುಸರಿಸಿದರು. ಮಾಸ್ಕ್, ಪರಸ್ಪರ ಅಂತರ ನಿಯಮಕ್ಕೆ ಬೆಲೆ ಇಲ್ಲದಂತಾಗಿತ್ತು. ಬೇಕಾಬಿಟ್ಟಿಯಾಗಿ ಓಡಾಡಿದರು. ಪೊಲೀಸರು, ಸ್ಥಳೀಯ ಸಂಸ್ಥೆಗಳ ಸಿಬ್ಬಂದಿ ಕೋವಿಡ್ ಮಾರ್ಗಸೂಚಿ ಪಾಲನೆ ಮಾಡವರಿಗೆ ದಂಡ ವಿಧಿಸಿ ಪಾಠ ಮಾಡಿದರು.