ಜಿಲ್ಲೆ

ಲಾಕ್‌ಡೌನ್‌ಗೆ ಕೋಟೆನಾಡು ಸ್ತಬ್ಧ !

Bagalkot

ಬಾಗಲಕೋಟೆ: ಕೋವಿಡ್ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ವಿಧಿಸಿದ ಲಾಕ್‌ಡೌನ್‌ಗೆ ಕೋಟೆನಾಡಿನಲ್ಲಿ ಮಂಗಳವಾರ ಉತ್ತಮ ಸ್ಪಂದನೆ ವ್ಯಕ್ತವಾಯಿತು. ಬೆಳಗ್ಗೆ 10 ಗಂಟೆ ಬಳಿಕ ಸಂಪೂರ್ಣ ಬಂದ್ ಮಾಡಲಾಯಿತು. ನಗರ ಪಟ್ಟಣ ಪ್ರದೇಶ ಹಾಗೂ ಗ್ರಾಮೀಣ ಭಾಗವು ಸಂಪೂರ್ಣ ಸ್ತಬ್ಧಗೊಂಡಿತ್ತು.

ಜಿಲ್ಲಾ ಕೇಂದ್ರ ಸ್ಥಾನ ಬಾಗಲಕೋಟೆ ನಗರ ಹಾಗೂ ಮುಧೋಳ, ಜಮಖಂಡಿ, ಬೀಳಗಿ, ಬಾದಾಮಿ, ಕೆರೂರ, ರಬಕವಿ-ಬನಹಟ್ಟಿ, ಲೋಕಾಪುರ, ಇಳಕಲ್ಲ, ಹುನಗುಂದ, ಮಹಾಲಿಂಗಪುರ, ಲೋಕಾಪುರ ಸೇರಿದಂತೆ ಎಲ್ಲೆಡೆ ವ್ಯಾಪಾರ ವಹಿವಾಟು ಸಂಪೂರ್ಣವಾಗಿ ಬಂದ್ ಆಗಿತ್ತು. ಪ್ರಮುಖ ರಸ್ತೆ, ವೃತ್ತಗಳು ಬಿಕೋ ಎನ್ನ ತೊಡಗಿದ್ದವು. ಸರ್ಕಾರಿ ಬಸ್, ಟಂ.ಟಂ, ಅಟೋ, ಟ್ಯಾಕ್ಸಿ ಸೇವೆ ಸಂಪೂರ್ಣ ಸ್ಥಗೀತಗೊಂಡಿತ್ತು. ಬಹತೇಕ ಸಾರ್ವಜನಿಕರು ನಡೆದುಕೊಂಡೇ ಮಾರುಕಟ್ಟೆಯತ್ತ ಧಾವಿಸಿದರು. 10 ಗಂಟೆ ಬಳಿಕ ಔಷಧಿ, ಆಸ್ಪತ್ರೆ, ಪೆಟ್ರೋಲ್ ಬಂಕ್ ಬಿಟ್ಟರೇ ಎಲ್ಲವನ್ನು ಬಂದ್ ಮಾಡಲಾಯಿತು.

ಆದರೇ ಕೋವಿಡ್ ಸೋಂಕು ಬಗ್ಗೆ ಸಾಕಷ್ಟು ತಿಳುವಳಿಕೆ ನೀಡಿರುವ ಸಹ ಸಾರ್ವಜನಿಕರು ಅರ್ಥ ಮಾಡಿಕೊಳ್ಳುತ್ತಿಲ್ಲ. ಸಣ್ಣ, ಪುಟ್ಟ ಕಾರಣ ಹೇಳಿಕೊಂಡು ಕೆಲವರು ಹೊರಗೆ ಓಡಾಡುತ್ತಿರುವುದು ಕಂಡು ಬಂದಿತ್ತು. ಸೋಮವಾರ ಪೊಲೀಸರು ಸಂಪೂರ್ಣ ಕಠಿಣ ಕ್ರಮ ತೆಗೆದುಕೊಂಡಿದ್ದರಿಂದ ಸಾರ್ವಜನಿಕರು ಮನೆಯಿಂದ ಹೊರ ಬರಲು ನೊರೆಂಟು ಸಾರಿ ವಿಚಾರ ಮಾಡುತ್ತಿದ್ದರು. ಮಂಗಳವಾರ ಸ್ವಲ್ಪ ವಿನಾಯಿತಿ ನೀಡಿದ್ದರಿಂದ ಜಿಲ್ಲೆಯಲ್ಲಿ ಅನಗತ್ಯವಾಗಿ, ಬೇಕಾಬಿಟ್ಟಿಯಾಗಿ ಸಂಚಾರ ಮುಂದುವರೆದಿತ್ತು. ಹೀಗಾಗಿ ಬೈಕ್ ಸವಾರರು, ಪಾದಾಚಾರಿಗಳಿಗೆ ಪೊಲೀಸರು ಎಚ್ಚರಕೆ ನೀಡಿದರು.

ಜಿಲ್ಲೆಯಲ್ಲಿ 437 ವಾಹನ ವಶಕ್ಕೆ
ಜಿಲ್ಲೆಯ ಜಮಖಂಡಿ, ಮುಧೋಳ, ಬೀಳಗಿ, ಬಾದಾಮಿ, ಕೆರೂರ, ರಬಕವಿ-ಬನಹಟ್ಟಿ, ತೇರದಾಳ, ಹುನಗುಂದ, ಇಳಕಲ್ಲ, ಗುಳೇದಗುಡ್ಡ, ಬಾಗಲಕೋಟೆ ನಗರ ಸೇರಿದಂತೆ ಒಟ್ಟು 21 ಪೊಲೀಸ್ ವ್ಯಾಪ್ತಿಯಲ್ಲಿ ನಿಯಮ ಉಲ್ಲಂಘನೆ ಮಾಡಿದ ಬೈಕ್, ಕಾರು ವಶಕ್ಕೆ ಪಡೆಯಲಾಯಿತು. ಸೋಮವಾರ 584 ವಾಹನ, ಮಂಗಳವಾರ 434 ಬೈಕ್, 2 ಕಾರು ಸೇರಿ ಇತರೆ ಒಂದು ವಾಹನ ಸೇರಿ ಒಟ್ಟು 437 ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.