ಬಾಗಲಕೋಟೆ: ಕೋವಿಡ್ ಕಾರಣದಿಂದ ಕಗ್ಗಂಟಾಗಿರುವ ಖಾಸಗಿ ಶಾಲೆಗಳ ಶುಲ್ಕ ವಿಚಾರವಾಗಿ ಈಗಾಗಲೇ ಶಿಕ್ಷಣ ಇಲಾಖೆ ಆಯುಕ್ತರು ತ್ರಿಸೂತ್ರಗಳನ್ನು ಒಳಗೊಂಡ ವರದಿಯನ್ನು ಸಲ್ಲಿಸಿದ್ದು, ಈ ಬಗ್ಗೆ ಪರಿಶೀಲಿಸಿ ಸರ್ಕಾರ ಶೀಘ್ರದಲ್ಲಿ ಒಂದು ಅಂತಿಮ ಸೂತ್ರವನ್ನು ಬಿಡುಗಡೆ ಮಾಡಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್‌ಕುಮಾರ್ ತಿಳಿಸಿದರು.
ಜಿಲ್ಲೆಯ ಜಮಖಂಡಿ ತಾಲೂಕಿನ ಹುಲ್ಯಾಳ ಕ್ರಾಸ್‌ನಲ್ಲಿ ವಿದ್ಯಾಭವನ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಸರ್ಕಾರಿ ಶಾಲೆಗಳಿಗೆ ಕಂಪ್ಯೂಟರ್ ವಿತರಣೆ ಕಾರ್ಯಕ್ರಮದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಕರೊನಾ ಹಿನ್ನೆಲೆಯಲ್ಲಿ ಜನರಿಗೆ ಆರ್ಥಿಕ ಹಿಂಜರಿತ ಉಂಟಾಗಿದೆ. ಹೀಗಾಗಿ ಖಾಸಗಿ ಶಾಲೆಗಳು ಶುಲ್ಕ ಕಟ್ಟಲು ಆಗಲ್ಲ ಎನ್ನುವುದು ತಿಳಿದಿದೆ. ಪಾಲಕರು ಶುಲ್ಕ ಕಡಿಮೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ. ಇತ್ತ ಖಾಸಗಿ ಶಾಲೆಗಳ ಶಿಕ್ಷಕರಿಗೆ ಕಳೆದ ಆರು ತಿಂಗಳಿಂದ ವೇತನವೂ ಇಲ್ಲ, ಕೆಲಸವೂ ಇಲ್ಲವಾಗಿದ್ದು, ಅನೇಕ ಶಿಕ್ಷಕರು ತರಕಾರಿ ವ್ಯಾಪಾರ ಮಾಡುತ್ತಿದ್ದಾರೆ. ಈಗ ಸರ್ಕಾರದ ಮುಂದೆ ಶುಲ್ಕ ನಿಗದಿ ಹೇಗೆ? ಎನ್ನುವುದು ಮುಖ್ಯ ವಿಷಯ. ಇದೇ ವಿಚಾರವಾಗಿ ಕಳೆದ ವಾರ ಶಿಕ್ಷಣ ಇಲಾಖೆ ಆಯುಕ್ತರು ಖಾಸಗಿ ಶಿಕ್ಷಣ ಸಂಸ್ಥೆ ಹಾಗೂ ಪಾಲಕರ ಸಭೆ ಕರೆದು ಅಭಿಪ್ರಾಯ ಸಂಗ್ರಹಿಸಿದ್ದಾರೆ. ಹಾಗೆಯೇ ಶುಲ್ಕ ನಿಗದಿ ಬಗ್ಗೆ ತ್ರಿಸೂತ್ರ ನೀಡಿದ್ದು, ಶೀಘ್ರ ಒಂದು ಸೂತ್ರವನ್ನು ಸರ್ಕಾರ ಅಂತಿಮಗೊಳಿಸಲಿದೆ ಎಂದರು.
ಈ ಮೊದಲು ಖಾಸಗಿ ಶಿಕ್ಷಣ ಸಂಸ್ಥೆಗಳು ಹಾಗೂ ಪೋಷಕರ ನಡುವೆ ಉತ್ತಮ ಸಂಬಂಧ ಇತ್ತು. ತಾವು ಅಂದುಕೊಂಡ ಖಾಸಗಿ ಶಾಲೆಯಲ್ಲಿ ಪ್ರವೇಶ ಪಡೆದರೆ ಸ್ವರ್ಗ ಸಿಕ್ಕಂತೆ ಭಾವಿಸುತ್ತಿದ್ದರು. ಕೋವಿಡ್ ಹಿನ್ನೆಲೆ ಆ ಸಂಬಂಧ ಮುರಿದು ಹೋಗಿದೆ. ಇವರಿಬ್ಬರ ನಡುವಿನ ವೈಮನಸ್ಸಿನಿಂದ ಮಕ್ಕಳ ಶಿಕ್ಷಣಕ್ಕೆ ತೊಂದರೆ ಆಗಬಾರದು. ಹೀಗಾಗಿ ಪಾಲಕರಿಗೆ ಹೊರೆಯಾಗದಂತೆ ಹಾಗೂ ಖಾಸಗಿ ಶಾಲೆಗಳಿಗೆ ಅನುಕೂಲವಾಗುವಂತೆ ಒಂದು ಸೂತ್ರ ಸಿದ್ಧಪಡಿಸಲಾಗುವುದು ಎಂದು ಸಚಿವ ಸುರೇಶ್‌ಕುಮಾರ್ ಹೇಳಿದರು.
ಆನ್‌ಲೈನ್ ಪಾಸ್‌ವರ್ಡ್ ಕೊಡದಿದ್ದರೆ ಕಠಿಣ ಕ್ರಮ
ವಿದ್ಯಾರ್ಥಿಗಳಿಗೆ ಶುಲ್ಕ ಕಟ್ಟಿಲ್ಲವೆಂದು ಕಿರುಕುಳ ನೀಡುವುದು ಹಾಗೂ ಆನ್‌ಲೈನ್ ಪಾಠಗಳಿಗೆ ಪಾಸ್‌ವರ್ಡ್ ಕೊಡದೆ ಇರುವುದು ಕಂಡು ಬಂದರೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ನಿರ್ದಿಷ್ಟವಾಗಿ ಇಂಥ ಶಾಲೆಗಳಲ್ಲಿ ಹೀಗೆ ಮಾಡಿದ್ದಾರೆ ಎಂದು ದೂರುಗಳು ಬಂದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಈ ಬಗ್ಗೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾಗಿ ತಿಳಿಸಿದರು.
ಮೇನಲ್ಲಿ ಪಿಯು, ಜೂನ್‌ನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ
ಈಗಾಗಲೇ ತರಗತಿಗಳು ಆರಂಭವಾಗಿರುವ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯು ವಿದ್ಯಾರ್ಥಿಗಳ ಪರೀಕ್ಷೆ ಯಾವಾಗ ಎನ್ನುವುದಕ್ಕೂ ಸಚಿವ ಸುರೇಶ್‌ಕುಮಾರ್ ಸ್ಪಷ್ಟ ಉತ್ತರ ನೀಡಿದ್ದಾರೆ.
ಮೇ ಎರಡನೇ ವಾರದಲ್ಲಿ ದ್ವಿತೀಯ ಪಿಯು ಹಾಗೂ ಜೂನ್ ಮೊದಲ ವಾರದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ನಿಗದಿಪಡಿಸಲಾಗಿದೆ. ಈಗ ಉಳಿದಿರುವ ಸಮಯ ಲೆಕ್ಕಹಾಕಿ ಶೇ.30 ರಷ್ಟು ಪಠ್ಯವಿಷಯವನ್ನು ಕಡಿಮೆ ಮಾಡಲಾಗಿದೆ. ಪಠ್ಯವನ್ನು ಕಡಿತ ಮಾಡಿಲ್ಲ. ಪರೀಕ್ಷೆ ದೃಷ್ಟಿಯಿಂದ ಕಡಿಮೆ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಹೊರೆಯಾಗದಂತೆ ಹಾಗೂ ಮುಂದಿನ ತರಗತಿಯಲ್ಲಿ ಕೊರತೆಯಾಗದಂತೆ ಪಠ್ಯ ಕಡಿಮೆ ಮಾಡಲಾಗಿದೆ. ಆದರೆ, ಪರೀಕ್ಷೆ ಯಾವ ರೀತಿ ನಡೆಸಬೇಕು ಎಂದು ಎಸ್ಸೆಸ್ಸೆಲ್ಸಿ ಹಾಗೂ ಪಿಯು ಬೋರ್ಡ್‌ಗಳು ನಿರ್ಧಾರ ಮಾಡಲಿವೆ. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಈ ವರ್ಷ ಹಾಜರಾತಿ ಕಡ್ಡಾಯವಿಲ್ಲ. ಕೋವಿಡ್ ಕಾರಣಕ್ಕೆ ವಿನಾಯಿತಿ ನೀಡಲಾಗಿದೆ ಎಂದರು.
ಉಳಿದ ತರಗತಿ ಆರಂಭಕ್ಕೂ ಬೇಡಿಕೆ
ಎಸ್ಸೆಸ್ಸೆಲ್ಸಿ ಹಾಗೂ ಪಿಯು ದ್ವಿತೀಯ ವರ್ಷದಂತೆ 8, 9, 11 ನೇ ತರಗತಿ ಆರಂಭಿಸುವಂತೆ ವಿಶೇಷವಾಗಿ ಗ್ರಾಮೀಣ ಭಾಗದಿಂದ ಬೇಡಿಕೆ ಹೆಚ್ಚಾಗಿದೆ. ಈ ಬಗ್ಗೆ ಚರ್ಚಿಸಿ, ಶಾಲೆಗಳು ಶುರುವಾದ ಬಳಿಕ 1 ರಿಂದ 5ನೇ ತರಗತಿ ಆರಂಭಿಸುವ ಬಗ್ಗೆಯೂ ನಿರ್ಧಾರ ತೆಗೆದುಕೊಳ್ಳಲಾಗುವುದು. ಕೋವಿಡ್ ಕಾರಣಕ್ಕೆ ಆರ್ಥಿಕ ನಿಬಂಧನೆ ಇರುವ ಕಾರಣಕ್ಕೆ ಸದ್ಯ ಹೊಸದಾಗಿ ನೇಮಕಾತಿ ಇಲ್ಲ. ಆರ್ಥಿಕ ಪರಿಸ್ಥಿತಿ ಸುಧಾರಿಸಿ ತೆರಿಗೆ ಸಂಗ್ರಹ ಬಳಿಕ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಶಿಕ್ಷಣ ಸಚಿವ ಸುರೇಶ್‌ಕುಮಾರ್ ಹೇಳಿದರು.
EndFragment