ಜಿಲ್ಲೆ

ಕೋವಿಡ್ ಲಸಿಕಾ ಅಭಿಯಾನಕ್ಕೆ ಚಾಲನೆ

ಬಾಗಲಕೋಟೆ: ಕೋವಿಡ್ ಸೋಂಕಿನ ವಿರುದ್ಧ ಜಿಲ್ಲೆಯಲ್ಲಿ ಲಸಿಕಾ ಅಭಿಯಾನ ಶನಿವಾರದಿಂದ ಆರಂಭವಾಗಿದ್ದು, ಮೊದಲ ದಿನ ಜಿಲ್ಲೆಯ ಕರೊನಾ ವಾರಿಯರ್ಸ್‌ಗಳಿಗೆ ಲಸಿಕೆ ನೀಡಲಾಯಿತು. ತನ್ಮೂಲಕ ಮಹಾಮಾರಿ ಸೋಂಕಿನಿಂದ ಭಯ ಭೀತರಾಗಿದ್ದ ಜಿಲ್ಲೆಯ ಜನತೆ ಸಮಾಧಾನ ತಂದಿತು.

ಜಿಲ್ಲೆಯ 9 ಲಸಿಕಾ ಕೇಂದ್ರಗಳಲ್ಲಿ ಏಕಕಾಲಕ್ಕೆ ಕೋವಿಡ್-19 ಲಸಿಕೆ ವಿತರಣೆ ಆರಂಭಗೊಂಡಿತು. ಬಾಗಲಕೋಟೆ ನಗರದ ಬಿವಿವಿ ಸಂಘದ ಕುಮಾರೇಶ್ವರ ಆಸ್ಪತ್ರೆಯಲ್ಲಿ ಸ್ಥಾಪಿಸಲಾಗಿದ್ದ ಕೋವಿಡ್ ಲಸಿಕಾ ಮಾದರಿ ಕೇಂದ್ರಕ್ಕೆ ಜಿ.ಪಂ ಅಧ್ಯಕ್ಷೆ ಬಾಯಕ್ಕ ಮೇಟಿ, ಶಾಸಕ ವೀರಣ್ಣ ಚರಂತಿಮಠ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಿವಯೋಗಿ ಕಳಸದ ಜಂಟಿಯಾಗಿ ಚಾಲನೆ ನೀಡಿದರು.

ಜಿಲ್ಲಾಧಿಕಾರಿ ಕೆ.ರಾಜೇಂದ್ರ, ಜಿ.ಪಂ ಸಿಇಒ ಟಿ.ಭೂಬಾಲನ್,ಉಪ ವಿಭಾಗಾಧಿಕಾರಿ ಎಂ.ಗಂಗಪ್ಪ, ಡಿಎಚ್‌ಒ ಡಾ.ಅನಂತ ದೇಸಾಯಿ, ಜಿಲ್ಲಾ ಶಸ ಚಿಕಿತ್ಸಕ ಡಾ.ಪ್ರಕಾಶ ಬಿರಾದಾರ, ಆರೋಗ್ಯ ಇಲಾಖೆ ಅಧಿಕಾರಿಗಳಾದ ಡಾ.ಅರವಿಂದ ಪಟ್ಟಣಶೆಟ್ಟಿ, ಡಾ.ಬಸವರಾಜ ಹುಬ್ಬಳ್ಳಿ, ಬಿವಿವಿ ಸಂಘದ ಗೌರವ ಕಾರ್ಯಾದರ್ಶಿ ಮಹೇಶ ಅಥಣಿ, ಕಾಲೇಜು ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ(ಬೇವೂರ), ಸದಸ್ಯರಾದ ರಾಜು ಮಶಿಯವರ, ಡಾ.ಬಿ.ಎಚ್.ಕೆರೂಡಿ, ಡಾ.ಅಶೋಕ ಮಲ್ಲಾಪುರ ಸೇರಿದಂತೆ ಇತರರು ಇದ್ದರು.

ಪ್ರಥಮ ಹಂತದಲ್ಲಿ ಆರೋಗ್ಯ ಸಿಬ್ಬಂದಿಗೆ ಆದ್ಯತೆ
ಇನ್ನು ನವನಗರದ ನಗರ ಆರೋಗ್ಯ ಪ್ರಾಥಮಿಕ ಕೇಂದ್ರದಲ್ಲಿ ತೆರೆಯಲಾದ ಕೋವಿಡ್-19 ಮಾದರಿ ಲಸಿಕಾ ಕೇಂದ್ರದಲ್ಲಿ ಕೋವಿಡ್ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಜಿಲ್ಲಾಧಿಕಾರಿ ಡಾ.ಕೆ.ರಾಜೇಂದ್ರ ಮಾತನಾಡಿ, ಕೋವಿಡ್ ಲಸಿಕೆ ನೀಡಲು ದೇಶಾದ್ಯಂತ ಪ್ರಧಾನಮಂತ್ರಿ ನರೇಂದ್ರ ಮೋದಿ ಚಾಲನೆ ನೀಡಿದ್ದು, ಈ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ 9 ಲಸಿಕಾ ಕೇಂದ್ರಗಳಲ್ಲಿ ಲಸಿಕೆ ವಿತರಣೆ ಆರಂಭಿಸಲಾಗಿದೆ. ಪ್ರತಿ ಮಾದರಿ ಲಸಿಕಾ ಕೇಂದ್ರದಲ್ಲಿ ನೂರು ಜನರಿಗೆ ಲಸಿಕೆಯನ್ನು ನೀಡಲಾಗುತ್ತಿದ್ದು, ಒಟ್ಟಾರೆಯಾಗಿ ಜಿಲ್ಲೆಯಲ್ಲಿ 17233 ಜನರಿಗೆ ಕೋವಿಡ್ ಲಸಿಕೆ ನೀಡಲಾಗುತ್ತಿದೆ. ಇದಕ್ಕಾಗಿ 76 ಸ್ಥಳ, 285 ವ್ಯಾಕ್ಸಿನೇಟರ್ ಗುರುತಿಸಲಾಗಿದೆ. ಪ್ರಥಮದಲ್ಲಿ ಆರೋಗ್ಯ ಸಿಬ್ಬಂದಿಗಳಿಗೆ ಆದ್ಯತೆ ನೀಡಲಾಗುತ್ತಿದೆ. ಮೊದಲು ಡೋಜ್ ಲಸಿಕೆ ಪಡೆದ ವ್ಯಕ್ತಿಗೆ ಒಂದು ತಿಂಗಳ ನಂತರ ಮತ್ತೊಂದು ಡೋಸ್ ಲಸಿಕೆ ನೀಡಲಾಗುತ್ತಿದೆ. ಹೆಮ್ಮಾರಿ ಕೋವಿಡ್ ವಿರುದ್ಧ ಈ ಲಸಿಕೆ ಮದ್ದು ನೀಡಲಿದೆ. ಜಿಲ್ಲೆಯಲ್ಲಿ ಅಭಿಯಾನ ಯಶಸ್ಸಿಗೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.

ಲಸಿಕೆಯನ್ನು 18 ವರ್ಷದೊಳಗಿನ ಮಕ್ಕಳಿಗೆ, ಗರ್ಭಿಣಿ ಮಹಿಳೆಯರಿಗೆ ಹಾಗೂ ರಕ್ತದ ಒತ್ತಡ, ಹಾಗೂ ಮಧುಮೇಹ ರೋಗದಿಂದ ಬಳಲುತ್ತಿರುವವರಿಗೆ ನೀಡುವದಿಲ್ಲ. ಪ್ರತಿ ಲಸಿಕಾ ಕೇಂದ್ರದಲ್ಲಿ ಚಿಕಿತ್ಸೆ ನೀಡುವ ಮೂರು ಕೊಠಡಿಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಕೋವಿಡ್ ಲಸಿಕೆ ಪಡೆದ ಪ್ರಥಮ ವ್ಯಕ್ತಿ
ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ಅಭಿಯಾನಕ್ಕೆ ಶನಿವಾರ ಚಾಲನೆ ದೊರೆತಿದ್ದು, ಪ್ರಥಮವಾಗಿ ನವನಗರದ ನಗರ ಆರೋಗ್ಯ ಪ್ರಾಥಮಿಕ ಕೇಂದ್ರದಲ್ಲಿ ಸ್ಥಾಪಿಸಲಾದ ಕೋವಿಡ್ ಮಾದರಿ ಲಸಿಕಾ ಕೇಂದ್ರದಲ್ಲಿ ಗ್ರುಪ್ ಡಿ ಸಿಬ್ಬಂದಿ ಕಪೀಲ ಗಂಜಿಹಾಳ ಲಸಿಕೆ ಪಡೆದ ಪ್ರಥಮ ವ್ಯಕ್ತಿಯಾಗಿದ್ದಾರೆ. ಅದೇ ರೀತಿ ಹಾನಗಲ್ ಕುಮಾರೇಶ್ವರ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಶ್ರೀಶೈಲ ಕೊಪ್ಪದ ಕೋವಿಡ್ ಲಸಿಕೆ ಪಡೆದ ಪ್ರಥಮ ವ್ಯಕ್ತಿಯಾಗಿದ್ದಾರೆ. ಲಸಿಕೆ ಪಡೆದ ಫಲಾನುಭವಿಗಳ ಆರೋಗ್ಯದ ಮೇಲೆ 45 ನಿಮೀಷಗಳ ಕಾಲ ನಿಗಾ ವಹಿಸಲಾಗಿತ್ತು. ಪ್ರತಿ ಹಂತದಲ್ಲಿಯೂ ಜಾಗೃತಿ ವಹಿಸಲಾಗಿತ್ತು.

ಇನ್ನು ಬಾಗಲಕೋಟೆ ನಗರದ ಆರೋಗ್ಯ ಕೇಂದ್ರದಲ್ಲಿ ತಾಂತ್ರಿಕ ತೊಂದರೆಯಿಂದ ಲಸಿಕಾ ವಿತರಣೆ ವಿಳಂಬವಾಯಿತು. ಇದರಿಂದ ಲಸಿಕಾ ಕೇಂದ್ರದದ ಹೊರಗಡೆ ಕೊರನಾ ವಾರಿಯರ್ಸ್‌ಗಳು ಕಾದು ಸುಸ್ತಾದರು. ಆನ್‌ಲೈನ್ ಮೂಲಕ ಅಫ್‌ಲೋಡ್ ಮಾಡುವಲ್ಲಿ ಅಡಚಣೆಯಾಗಿದ್ದರಿಂದ ಲಸಿಕೆ ವಿತರಣೆ ನಿಧಾನವಾಯಿತು ಎಂದು ಕೇಂದ್ರದ ಅಧಿಕಾರಿಗಳು ತಿಳಿಸಿದರು.

9 ಕೇಂದ್ರದಲ್ಲಿ ಲಸಿಕೆ ವಿತರಣೆ
ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಆರೋಗ್ಯ ಸೇವೆ ನೀಡುತ್ತಿರುವ ಸಿಬ್ಬಂದಿಗಳಿಗೆ ಲಸಿಕೆ ವಿತರಣೆ ಮಾಡಲಾಗುತ್ತಿದೆ. ಒಟ್ಟು 879 ಜನ ಆರೋಗ್ಯ ಸಿಬ್ಬಂದಿಗಳಿಗೆ ಕರೊನಾ ಲಸಿಕೆ ನೀಡುವ ಗುರಿ ಹೊಂದಲಾಗಿದ್ದು, ಬಹುತೇಕ ಕಡೆ ಯಶಸ್ಸಿಗೊಂಡಿತು. ಬಾಗಲಕೋಟೆ ಜಿಲ್ಲಾ ಆಸ್ಪತ್ರೆ, ನವನಗರದಲ್ಲಿರುವ ನಗರ ಆರೋಗ್ಯ ಪ್ರಾಥಮಿಕ ಕೇಂದ್ರ, ಬಾದಾಮಿ, ಹುನಗುಂದ ಮುಧೋಳ, ಬೀಳಗಿ, ಜಮಖಂಡಿ ತಾಲೂಕಾ ಆಸ್ಪತ್ರೆ ಹಾಗೂ ಜಮಖಂಡಿ ತಾಲೂಕಿನ ಚಿಕ್ಕಲಕಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಬಾಗಲಕೋಟೆಯ ಹಾನಗಲ್ ಕುಮಾರೇಶ್ವರ ವೈದ್ಯಕೀಯ ಮಹಾವಿದ್ಯಾಲಯ ಸೇರಿದಂತೆ ಒಟ್ಟು 9 ಕೇಂದ್ರಗಳಲ್ಲಿ ಲಸಿಕೆಯನ್ನು ನೀಡುವ ವ್ಯವಸ್ಥೆ ಕಲ್ಪಿಸಲಾಗಿತ್ತು.
ಜಿಲ್ಲೆಗೆ 17 ಸಾವಿರ ಕೋವಿಡ್ ವ್ಯಾಕ್ಸಿನ್ ಡೊಸೇಜ್‌ಗಳ ಬೇಡಿಕೆ ಇದ್ದು, ಈ ಪೈಕಿ ಈಗಾಗಲೇ 8500 ಕೋವಿಡ್ ವ್ಯಾಕ್ಸಿನ್ ಡೊಸೇಜ್‌ಗಳು ಆಗಮಿಸಿವೆ. ಕೋಲ್ಡ್ ಸ್ಟೋರೇಜ್‌ನಲ್ಲಿ ಲಸಿಕೆಗಳನ್ನು ಭದ್ರವಾಗಿ ಇರಿಸಲಾಗಿದೆ. ಬಾಕಿ ವ್ಯಾಕ್ಸಿನ್‌ಗಳು ಒಂದೆರಡು ದಿನಗಳಲ್ಲಿ ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

EndFragment