ಬಾಗಲಕೋಟೆ: ಕೋವಿಡ್-19 ತಡೆಗಟ್ಟುವ ನಿಟ್ಟಿನಲ್ಲಿ ಮೂರನೇ ಹಂತದ ಲಸಿಕೆ ನೀಡುವ ಕಾರ್ಯ ನಡೆದಿದ್ದು, ನವನಗರದ ಜಿಲ್ಲಾ ಆಸ್ಪತ್ರೆ ಮತ್ತು ನಗರದ 50 ಹಾಸಿಗೆಗಳ ಆಸ್ಪತ್ರೆಗಳಲ್ಲಿ ಸ್ಥಾಪಿಸಲಾದ ಕೋವಿಡ್ ಲಸಿಕೆ ಕೇಂದ್ರಕ್ಕೆ ಜಿಲ್ಲಾಧಿಕಾರಿ ಕೆ.ರಾಜೇಂದ್ರ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು.
ಆಸ್ಪತ್ರೆಯಲ್ಲಿರುವ ಕೋವಿಡ್ ಲಸಿಕೆ ನೀಡುವ ಕೇಂದ್ರದಲ್ಲಿ ನೋಂದಣಿ ಪ್ರಕ್ರಿಯೆ ಹಾಗೂ ಲಸಿಕೆ ನೀಡುತ್ತಿರುವ ಕುರಿತು ಪರಿಶೀಲನೆ ಮಾಡಿದರು. 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಬಂದಾಗ ವಯಸ್ಸಿನ ದಾಖಲೆ ಪಡೆದು ನೋಂದಣಿ ಮಾಡಬೇಕು. ಇದಕ್ಕಾಗಿ ಅಗತ್ಯ ಸಿಬ್ಬಂದಿ ವ್ಯವಸ್ಥೆ ಮಾಡಿಕೊಳ್ಳಲು ಸೂಚಿಸಿದರು. ಅವಶ್ಯಕತೆಗೆ ಅನುಗುಣವಾಗಿ ಲಸಿಕೆ ಕೇಂದ್ರಗಳನ್ನು ಹೆಚ್ಚಿಸಲು ಅಧಿಕಾರಿಗಳಿಗೆ ತಿಳಿಸಿದರು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಕೆ.ರಾಜೇಂದ್ರ, ರಾಜ್ಯಾದ್ಯಂತ ಕೋವಿಡ್ 2ನೇ ಅಲೆಯಿಂದ ಕೋವಿಡ್ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ. ಈ ಹಿನ್ನೆಲೆಯಲ್ಲಿ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಕಡ್ಡಾಯವಾಗಿ ಕೋವಿಡ್ ಲಸಿಕೆ ಪಡೆದುಕೊಳ್ಳಬೇಕು. ಹಿರಿಯ ನಾಗರಿಕರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಕೋವಿಡ್ ಲಸಿಕೆ ಪಡೆಯುವುದು ಅವಶ್ಯವಾಗಿದೆ. ಇದರಿಂದ ಕೋವಿಡ್ ಬೇಗನೆ ಗುಣಪಡಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಜಿಲ್ಲಾ ಆಸ್ಪತ್ರೆ, ಆಯಾ ತಾಲೂಕು ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ನಗರ ಆರೋಗ್ಯ ಕೇಂದ್ರಗಳಲ್ಲಿ ಬೆಳಗ್ಗೆ 9 ರಿಂದ ಸಂಜೆ 5 ಗಂಟೆವರೆಗೆ ಉಚಿತವಾಗಿ ಲಸಿಕೆ ನೀಡಲಾಗುತ್ತಿದೆ. ಆಯಾ ಗ್ರಾಮ ಮತ್ತು ನಗರ ವ್ಯಾಪ್ತಿಯಲ್ಲಿರುವ 60 ವರ್ಷ ಮೇಲ್ಪಟ್ಟವರು ಹಾಗೂ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ 45 ರಿಂದ 59 ವರ್ಷದೊಳಗಿನವರು ಲಸಿಕೆ ಪಡೆಯಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಲಸಿಕೆ ಪಡೆಯಲು 250 ರೂ. ಪಾವತಿಸಬೇಕಾಗುತ್ತದೆ ಎಂದು ತಿಳಿಸಿದರು.
ತಾಲೂಕು ಮಟ್ಟದಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳಿಗೆ ನೋಡಲ್ ಅಧಿಕಾರಿಗಳ ನೇಮಕ ಮಾಡಲಾಗಿದ್ದು, ಸಂಬಂಧಪಟ್ಟ ತಾಲೂಕು ವ್ಯಾಪ್ತಿಯಲ್ಲಿ ಬರುವ ಆಸ್ಪತ್ರೆಗಳಿಗೆ ಭೇಟಿ ನೀಡಿ ನೋಂದಣಿ ಪ್ರಕ್ರಿಯೆ ಹಾಗೂ ವ್ಯವಸ್ಥಿತವಾಗಿ ಲಸಿಕೆ ನೀಡುತ್ತಿರುವ ಬಗ್ಗೆ ಪರಿಶೀಲನೆ ನಡೆಸುವಂತೆ ಸೂಚಿಸಲಾಗಿದೆ. ಅಲ್ಲಿನ ಜನರ ಅವಶ್ಯಕತೆಗನುಗುಣವಾಗಿ ಲಸಿಕೆ ಕೇಂದ್ರಗಳನ್ನು ಹೆಚ್ಚಿಗೆ ತೆರೆಯಬೇಕು. ಡಾಟಾ ಎಂಟ್ರಿ ಆಪರೇಟರ್‌ಗಳ ವ್ಯವಸ್ಥೆ ಮಾಡಿಕೊಳ್ಳಬೇಕು. ಸ್ಯಾಂಪಲ್ ತೆಗೆಯಲು ಲ್ಯಾಬ್ ಟೆಕ್ನಿಷಿಯನ್ ಕೊರತೆ ಇದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ಸೂಚನೆ ನೀಡಿದರು.
ಆಹಾರ ಇಲಾಖೆ ಉಪನಿರ್ದೇಶಕ ಶ್ರೀಶೈಲ ಕಂಕಣವಾಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ಎನ್.ದೇಸಾಯಿ, ಜಿಲ್ಲಾ ಶಸ ಚಿಕಿತ್ಸಕ ಡಾ.ಪ್ರಕಾಶ ಬಿರಾದಾರ, 50 ಹಾಸಿಗೆಗಳ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ಜಯಶ್ರೀ ಎಮ್ಮಿ, ಕುಟುಂಬ ಕಲ್ಯಾಣಾಧಿಕಾರಿ ಡಾ.ಬಿ.ಡಿ.ಪಟ್ಟಣಶೆಟ್ಟಿ ಉಪಸ್ಥಿತರಿದ್ದರು.
EndFragment