ಬಾಗಲಕೋಟೆ: ದೇಶಾದ್ಯಂತ ಹೆಣ್ಣು ಮಕ್ಕಳ ಲಿಂಗಾನುಪಾತದಲ್ಲಿ ಇಳಿಮುಖವಾಗುತ್ತಿದೆ. ಈ ಬಗ್ಗೆ ಗಂಭೀರ ಚಿಂತನೆ ನಡೆಸಬೇಕು. ಹೆಣ್ಣು ಮಕ್ಕಳ ಸಂರಕ್ಷಣೆ ಮತ್ತು ಪೋಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಜಿಪಂ ಮುಖ್ಯ ಕಾರ್ಯನಿವಾಹಕ ಅಧಿಕಾರಿ ಟಿ.ಭೂಬಾಲನ್ ಹೇಳಿದರು.
ನವನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಬೇಟಿ ಬಚಾವೋ ಬೇಟಿ ಪಢಾವೋ ಯೋಜನೆಯಡಿ ಶುಕ್ರವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಹೆಣ್ಣು ಮಗು ಹುಟ್ಟಿದರೆ ಗರ್ಭದಲ್ಲಿಯೇ ಚಿವುಟಿ ಹಾಕುವ ಚಟುವಟಿಕೆ ನಡೆಯುತ್ತಿದ್ದು, ಇದರಿಂದ ಲಿಂಗಾನುಪಾತದಲ್ಲಿ ಇಳಿಮುಖವಾಗುತ್ತಿದೆ. ಲಿಂಗಾನುಪಾತದಲ್ಲಿ ಸಮತೋಲನ ಕಾಪಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಬೇಟಿ ಬಚಾವೋ ಬೇಟಿ ಪಢಾವೋ ಎಂಬ ಯೋಜನೆ ಜಾರಿಗೊಳಿಸಿದೆ. ಈ ಯೋಜನೆ ಮಹಿಳೆಯರನ್ನು ಸಬಲೀಕರಣಗೊಳಿಸುವ ಉದ್ದೇಶ ಹೊಂದಿದ್ದು, ಯೋಜನೆ ಸಮರ್ಪಕ ಅನುಷ್ಠಾನಗೊಂಡಾಗ ಮಾತ್ರ ಸಾಧ್ಯ. ಜಿಲ್ಲೆಯಲ್ಲಿ ಬಾಲ್ಯವಿವಾಹಗಳು ಹೆಚ್ಚಾಗಿ ಕಂಡುಬರುತ್ತಿರುವುದನ್ನು ಕಂಡು ಕಳೆದ 3 ತಿಂಗಳಲ್ಲಿ 30 ಬಾಲ್ಯ ವಿವಾಹ ತಡೆಯಲಾಗಿದೆ ಎಂದು ತಿಳಿಸಿದರು.
2011ನೇ ಜನಗಣತಿಯ ಪ್ರಕಾರ ಭಾರತ ದೇಶದಲ್ಲಿ ಸಾವಿರ ಪುರುಷರಿಗೆ 933 ಮಹಿಳೆಯರಿದ್ದರೆ, ಕರ್ನಾಟಕ ರಾಜ್ಯದಲ್ಲಿ 965 ಹಾಗೂ ಬಾಗಲಕೋಟೆ ಜಿಲ್ಲೆಯಲ್ಲಿ 980 ಮಹಿಳೆಯರಿದ್ದಾರೆ. ಜಿಲ್ಲೆಯಲ್ಲಿ 0 ದಿಂದ 6 ವರ್ಷವಾರು ಲಿಂಗಾನುಪಾತದಲ್ಲಿ 2014-15 ರಲ್ಲಿ 936 ಇದ್ದರೆ, 2015-16 ರಲ್ಲಿ 922, 2016-17 ರಲ್ಲಿ 946, 2017-18ರಲ್ಲಿ 954, 2018-19ರಲ್ಲಿ 952 ಹಾಗೂ 2019-20ರಲ್ಲಿ 964ಕ್ಕೆ ಏರಿಕೆಯಾಗಿದೆ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್ ಮಾತನಾಡಿ, ಮಹಿಳೆಯರಿಗೆ ಮಾನಸಿಕವಾಗಿ ಧೈರ್ಯ ತುಂಬುವ ಮೂಲಕ ಸಮಾಜದಲ್ಲಿ ಸ್ವಾಭಿಮಾನ ಜೀವನ ನಡೆಸುವಂತಾಗಬೇಕು. ಮುಖ್ಯವಾಗಿ ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸುವುದೆ ನಮ್ಮ ಗುರಿಯಾಗಬೇಕು. ಇದಕ್ಕಾಗಿ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದ್ದು, ಅದರಲ್ಲಿ ಬೇಟಿ ಬಚಾವೋ ಬೇಟಿ ಪಢಾವೋ ಒಂದಾಗಿದೆ. ಈ ಯೋಜನೆಯ ಸದುಯೋಗ ಎಲ್ಲ ಹೆಣ್ಣು ಮಕ್ಕಳು ಪಡೆಯುವಂತೆ ಮಾಡಬೇಕು ಎಂದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಬಿ.ಸಿ. ಶಿವಲಿಂಗಪ್ಪ, ಬಾಗಲಕೋಟೆ ಸಿಡಿಪಿಒ ಶಿಲ್ಪಾ ಹಿರೇಮಠ ಇತರರು ಇದ್ದರು.
ಲಿಂಗ ತಾರತಮ್ಯ ಹೋಗಲಾಡಿಸಬೇಕು. ಮಹಿಳೆಯರು ಸಮಾಜದಲ್ಲಿ ಗೌರವದಿಂದ ಜೀವನ ನಡೆಸಲು ಎಲ್ಲ ರೀತಿಯ ಸಹಕಾರ ಅಗತ್ಯವಾಗಿದೆ. ಬಾಲ್ಯವಿವಾಹ ತಡೆಗಟ್ಟುವ ನಿಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕೆಲಸ ಮಾಡುತ್ತಿದೆ. ಗ್ರಾಮೀಣ ಭಾಗದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಬಾಲ್ಯವಿವಾಹ ತಡೆಗೆ ಮುಂದಾಗಬೇಕು. ಸರ್ಕಾರದಿಂದ ಕೊಡಮಾಡುವ ಪೌಷ್ಟಿಕಾಂಶಗಳನ್ನು ತಲುಪಿಸುವಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಮಹತ್ವದ್ದಾಗಿದೆ.
- ಕೆ.ರಾಜೇಂದ್ರ ಜಿಲ್ಲಾಧಿಕಾರಿ
EndFragment