ಬಾಗಲಕೋಟೆ: ನಿಸರ್ಗವು ಪಂಚಮಹಾಭೂತಗಳನ್ನು ಒಳಗೊಂಡಿದೆ, ಇವುಗಳ ಸೂಕ್ಷ್ಮ ಸಮತೋಲನೆಯಿಂದ ನಾವು ಅಭಿವೃದ್ಧಿಯನ್ನು ಸಾಧಿಸಬೇಕು, ಪ್ರಕೃತಿಗೆ ಮನುಜ ಕುಲವನ್ನು ಸಲುಹುವ ತನ್ನದೇ ಆದ ಸಾಮರ್ಥ್ಯವಿದ್ದು, ನಿಸರ್ಗದಲ್ಲಿ ಸಮತೋಲನ ತಪ್ಪಿದಾಗ ಜಾಗತಿಕ ತಾಪಮಾನ, ಅತಿವೃಷ್ಟಿ, ಅನಾವೃಷ್ಟಿಯಂತಹ ವಿಕೋಪಗಳನ್ನು ಸೃಷ್ಠಿಸುತ್ತದೆ ಎಂದು ಮುಂಬಯಿ ಐಐಟಿ ಡೀನ್ ಡಾ. ರವೀಂದ್ರ ಗುಡಿ ಹೇಳಿದರು.
ನಗರದ ಬಸವೇಶ್ವರ ಇಂಜನಿಯರಿಂಗ್ ಕಾಲೇಜಿನಲ್ಲಿ ಶುಕ್ರವಾರ ಕಾಲೇಜಿನ ವಜ್ರಮಹೋತ್ಸವದ ವರ್ಷಾಚರಣೆ ಅಂಗವಾಗಿ ಹಮ್ಮಿಕೊಂಡ ಎರಡು ದಿನಗಳ ರಾಷ್ಟ್ರೀಯ ವಿಚಾರಣ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಕೃತಿಯು ಹಲವು ವೈವಿಧ್ಯಮಯ ಜೀವ ಸಂಕುಲವನ್ನು ಹೊಂದಿದೆ. ಇವುಗಳ ರಕ್ಷಣೆ ಮುಖ್ಯ, ಅತಿಯಾದ ಮಾಲಿನ್ಯದಿಂದ ಹೊರಬರುತ್ತಿರುವ ಇಂಗಾಲದ ಡೈಆಕ್ಸೈಡ್ ನಿರ್ವಹಣೆ ಮಾಡುವುದು ಇಂದಿನ ಅವಶ್ಯವಾಗಿದೆ. ಪ್ರಧಾನ ಮಂತ್ರಿಗಳ ಆಶಯದಂತೆ ತಾಂತ್ರಿಕ ಕ್ಷೇತ್ರದಲ್ಲಿ ಹೊಸತನದೊಂದಿಗೆ ಜವಾಬ್ದಾರಿಯಿಂದ ಸುಸ್ಥಿರತೆಯನ್ನು ಕಾಪಾಡಿಕೊಂಡು ಅಭಿವೃದ್ಧಿಯ ಬದಲಾವಣೆಯನ್ನು ಸಾಧಿಸಬೇಕು ಎಂದರು.
ಐಐಟಿ ಪ್ರಾಧ್ಯಾಪಕ ಡಾ. ಶಾಮಪ್ರಸಾದ ಮುಖರ್ಜಿ, ಪ್ರೊ.ಶ್ರೀನಿವಾಸ ಕೆ. ಜಿ., ಶಿಕ್ಷಣದಲ್ಲಿ ಇಂದು ಸುಸ್ಥಿರತೆಯನ್ನು ಕಾಯ್ದುಕೊಂಡು ಹೊಸ ಪೀಳಿಗೆಯ ವಿದ್ಯಾರ್ಥಿಗಳನ್ನು ಗಮನಿಸಬೇಕು. ನೂತನ ಬೋಧನಾ ಕೌಶಲಗಳನ್ನು ಅಳವಡಿಸಿಕೊಂಡು ಸ್ಮಾರ್ಟ್ ಆಗಿ ಕಾರ್ಯನಿರ್ವಹಿಸುವುದು ಇಂದಿನ ಅವಶ್ಯಕತೆಯಾಗಿದೆ ಎಂದು ಸಲಹೆ ನೀಡಿದರು.
ಬಿವಿವಿ ಸಂಘದ ತಾಂತ್ರಿಕ ನಿರ್ದೇಶಕ ಡಾ.ಆರ್.ಎನ್.ಹೆರಕಲ್, ಕಾಲೇಜಿನ ಪ್ರಾಚಾರ್ಯ ಡಾ.ಎಸ್.ಎಸ್.ಇಂಜಗನೇರಿ, ಸಂಶೋಧನಾ ವಿಭಾಗದ ಡೀನ್ ಡಾ.ವೀಣಾ ಸೋರಗಾಂವಿ, ಸಂಯೋಜಕ ಡಾ.ವಿನಯ ಕುಪ್ಪಸ್ತ ಇದ್ದರು. ಡಾ.ವಿ.ಬಿ.ಪಾಗಿ ಸ್ವಾಗತಿಸಿದರು. ಡಾ. ವಿಜಯಲಕ್ಷ್ಮಿ
ಜಿಗಜಿನ್ನಿ ನಿರೂಪಿಸಿದರು. ಶ್ರೀವತ್ಸ್ ಕುಲಕರ್ಣಿ ಪ್ರಾರ್ಥಿಸಿದರು. ಡಾ.ಕೆ.ಶ್ರೀಧರ ವಂದಿಸಿದರು.