ಬಾಗಲಕೋಟೆ: ಇತಿಹಾಸ ಬಲ್ಲವನು ಮಾತ್ರ ಇತಿಹಾಸ ನಿರ್ಮಿಸಲು ಸಾಧ್ಯ. ಮುಂದಿನ ಪೀಳಿಗೆಗೆ ನಮ್ಮ ಪೂರ್ವಜರ ಇತಿಹಾಸದ ಅರಿವು ಮೂಡಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಬಿವಿವಿ ಸಂಘದ ವೈದ್ಯಕೀಯ ಕಾಲೇಜುಗಳ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ (ಬೇವೂರ) ಹೇಳಿದರು.
ನಗರದ ಬಿವಿವಿ ಸಂಘದ ನೂತನ ಸಭಾಭವನದಲ್ಲಿ ರಾಜ್ಯ ಪತ್ರಾಗಾರ ಇಲಾಖೆ, ಬಸವೇಶ್ವರ ಕಲಾ ಮಹಾವಿದ್ಯಾಲಯ ಸಹಯೋಗದಲ್ಲಿ ಮಾ.15 ರಿಂದ 17ರವರೆಗೆ ಹಮ್ಮಿಕೊಂಡಿರುವ ಐತಿಹಾಸಿಕ ದಾಖಲೆಗಳು ಮತ್ತು ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಪೂರ್ವಿಕರು ಹೋರಾಟ, ಸಂಸ್ಕೃತಿ, ಸಾಮಾಜಿಕ ಬದಲಾವಣೆ, ಆಡಳಿತ ಶೈಲಿ ಸೇರಿದಂತೆ ನಾನಾ ರೀತಿಯಲ್ಲಿ ಕೆಲಸ ಮಾಡಿ ಇತಿಹಾಸ ನಿರ್ಮಿಸಿದ್ದಾರೆ. ಅವುಗಳು ವೈಶಿಷ್ಟ ಪೂರ್ಣವಾಗಿವೆ. ಅವುಗಳ ಬಗ್ಗೆ ಸಂಶೋಧನೆ ಕೈಗೊಳ್ಳುವುದರ ಜತೆಗೆ ಪರಿಚಯಿಸುವ ಕೆಲಸ ಆಗಬೇಕಿದೆ. ಯಾರು ತಮ್ಮ ಹಿನ್ನೆಲೆಯನ್ನು ಚೆನ್ನಾಗಿ ಅರಿತಿರುತ್ತಾರೋ ಅವರು ಉತ್ತಮ ಭವಿಷ್ಯ ನಿರ್ಮಿಸಬಲ್ಲರು. ನಿನ್ನೆಯ ಆಧಾರದ ಮೇಲೆ ಇಂದು, ನಾಳೆ ಕಟ್ಟಬೇಕಿದೆ ಎಂದರು.
ಮನುಷ್ಯನ ವ್ಯಕ್ತಿತ್ವಕ್ಕೆ ಇತಿಹಾಸ ಬಹಳ ಮುಖ್ಯ. ಇತಿಹಾಸ ಇರದಿದ್ದರೆ ಏನನ್ನು ತಿಳಿದುಕೊಳ್ಳಲು ಸಾಧ್ಯವಿಲ್ಲ. ಬಾಗಲಕೋಟೆ ಅತ್ಯಂತ ಶ್ರೀಮಂತ ಇತಿಹಾಸ ಹೊಂದಿದೆ. ವಿಶೇಷವಾಗಿ ಬನಶಂಕರಿ ಜಾತ್ರೆ, ಮೋಟಗಿ ಬಸವೇಶ್ವರ ಜಾತ್ರೆ ಇವೆಲ್ಲ ಇತಿಹಾಸಕ್ಕೆ ಹಿಡಿದ ಕೈಗನ್ನಡಿ. ಐತಿಹಾಸಿಕ ದಾಖಲೆಗಳನ್ನು ಸಂಗ್ರಹಿಸುವಲ್ಲಿ ರಾಜ್ಯ ಪತ್ರಾಗಾರ ಇಲಾಖೆ ಪ್ರಮುಖ ಪಾತ್ರ ವಹಿಸಿದೆ. ಮೈಸೂರು ಅರಮನೆಯಲ್ಲಿ ವಿಶೇಷ ಪತ್ರಾಗಾರವಿದೆ. ಕಾಗದ ಪತ್ರಗಳು, ಮೈಕ್ರೋಟೇಪ್ ಸುರುಳಿಗಳು, ಮೌಖಿಕ ಇತಿಹಾಸದ ಸುರುಳಿಗಳನ್ನು ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆ ಸಂಗ್ರಹಿಸಿ ಪ್ರದರ್ಶನ ಮಾಡುತ್ತಿದೆ ಎಂದರು.
ಕಾಲೇಜುಗಳ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಜಿ.ಎಸ್. ಸೂಳಿಭಾವಿ, ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆ ನಿರ್ದೇಶಕಿ ಎ. ರಾಜಮ್ಮ ಚೌಡರಡ್ಡಿ, ಉಪನಿರ್ದೇಶಕ ಡಾ. ಗವಿಸಿದ್ದಯ್ಯ, ಕಾಲೇಜುಗಳ ಆಡಳಿತ ಮಂಡಳಿ ಸದಸ್ಯ ಶರಣ ನಾವಲಗಿ, ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ವಿ.ಎಸ್. ಕಟಗಿಹಳ್ಳಿಮಠ, ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಎಸ್.ಎನ್. ರಾಂಪೂರ ಉಪಸ್ಥಿತರಿದ್ದರು. ಡಾ.ಬಸವರಾಜ ಖೋತ ನಿರೂಪಿಸಿದರು.
EndFragment