ಬಾಗಲಕೋಟೆ: ನಗರದ ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯಕ್ಕೆ ಈಚೆಗೆ ನ್ಯಾಕ್ ಕಮಿಟಿ ಭೇಟಿ ನೀಡಿ ಮಹಾವಿದ್ಯಾಲಯದ ಸೌಲಭ್ಯ, ಶಿಕ್ಷಣದ ಗುಣಮಟ್ಟ ಪರಿಶೀಲಿಸಿತು.
ನ್ಯಾಕ್ ಕಮಿಟಿ ಚೇರ್ಮನ್ ಡಾ. ರಾಮ್ ಮನೋಹರ ಲೋಹಿಯಾ ವಿಶ್ವವಿದ್ಯಾಲಯದ ಕುಲಪತಿ ಮನೋಜ ದೀಕ್ಷಿತ, ಸಂಯೋಜಕ ಸದಸ್ಯ ತಮಿಳುನಾಡಿನ ಗಾಂಧಿಗ್ರಾಮ ರೂರಲ್ ಇನ್ಸ್‌ಟಿಟ್ಯೂಟ್ ಆ್ ಡೀಮ್ಡ್ ವಿಶ್ವವಿದ್ಯಾಲಯದ ಅರ್ಥಶಾಸ ವಿಭಾಗದ ಮುಖ್ಯಸ್ಥ ಪ್ರೊ.ರಾಜೇಂದ್ರನ್ ಷಣ್ಮುಗಂ, ಸದಸ್ಯ ಪುಣೆಯ ಚಾಂದಮಲ್ ತಾರಾಚಂದ ಬೋರಾ ಕಾಲೇಜಿನ ನಿವೃತ್ತ ಪ್ರಾಚಾರ್ಯ ನಂದಕುಮಾರ ನಿಕ್ಕಂ ಒಳಗೊಂಡ ತಂಡ ಭೇಟಿ ನೀಡಿ ಪರಿಶೀಲಿಸಿತು.
ಎರಡು ದಿನಗಳ ಭೇಟಿಯಲ್ಲಿ ಮಹಾವಿದ್ಯಾಲಯದ ಒಟ್ಟು 14 ಸ್ನಾತಕ ವಿಭಾಗಗಳು ಹಾಗೂ 2 ಸ್ನಾತಕೋತ್ತರ (ಕನ್ನಡ, ಇಂಗ್ಲೀಷ್) ವಿಭಾಗಗಳು ಹಾಗೂ ವಿದ್ಯಾರ್ಥಿ ಕಲ್ಯಾಣ ವಿಭಾಗ, ಎನ್‌ಸಿಸಿ, ಎನ್‌ಎಸ್‌ಎಸ್, ಮಹಿಳಾ ಸಶಕ್ತೀಕರಣ ಘಟಕ, ರೆಡ್ ಕ್ರಾಸ್, ವೃತ್ತಿ ಮಾರ್ಗದರ್ಶನ ಘಟಕ, ಗ್ರಂಥಾಲಯಗಳಿಗೆ ಕಮಿಟಿ ಸದಸ್ಯರು ಭೇಟಿ ನೀಡಿದರು. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಿ ವಿದ್ಯಾರ್ಥಿಗಳ ಕಲಾಪ್ರತಿಭೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ನ್ಯಾಕ್ ಕಮಿಟಿ ಚೇರ್ಮನ್ ಡಾ.ರಾಮ್ ಮನೋಹರ ಲೋಹಿಯಾ ವಿಶ್ವವಿದ್ಯಾಲಯದ ಕುಲಪತಿ ಮನೋಜ ದೀಕ್ಷಿತ ಮಾತನಾಡಿ, ಶಿಕ್ಷಕರು ದೇಶ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ನಿಮ್ಮಲ್ಲಿರುವ ಪ್ರತಿಭೆಯನ್ನು ಹೊರ ಹಾಕುವ ಕೆಲಸವನ್ನು ಮಹಾವಿದ್ಯಾಲಯ ಮಾಡುತ್ತದೆ. ಅದನ್ನು ಬಳಸಿಕೊಂಡು ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಅನಾವರಣಗೊಳಿಸಬೇಕು ಎಂದರು.
ಗ್ರಾಮೀಣ ವಲಯದ ವಿದ್ಯಾರ್ಥಿಗಳು ಅತ್ಯಂತ ಪ್ರತಿಭಾಶಾಲಿಯಾಗಿದ್ದು, ಅವರಿಗೆ ಸೂಕ್ತ ಮಾರ್ಗದರ್ಶನದ ಕೊರತೆ ಇದೆ. ಅವರಿಗೆ ಅನೇಕ ಸರ್ಟಿಫಿಕೆಟ್ ಕೋರ್ಸ್‌ಗಳನ್ನು ಮತ್ತು ಉದ್ಯೋಗ ಮಾರ್ಗದರ್ಶಿ ಕೋರ್ಸ್ ತೆರೆದು ಸಮರ್ಥ ನಾಗರಿಕರಾಗಿ ರೂಪಿಸಲು ನೆರವಾಗಬೇಕು. 75 ವರ್ಷದ ಕಲಾ ಮಹಾವಿದ್ಯಾಲಯ ಕರ್ನಾಟಕದಲ್ಲಿ ಹಳೆಯದಾಗಿದ್ದು, ಇಲ್ಲಿಯ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಕೆಲಸ ಮಾಡಿ ಇತರ ಮಹಾವಿದ್ಯಾಲಯಗಳಿಗೆ ಮಾದರಿಯಾಗಬೇಕು ಎಂದು ಸಲಹೆ ನೀಡಿದರು.
ಬಿವಿವಿ ಸಂಘದ ಕಾಲೇಜುಗಳ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ (ಬೇವೂರ), ಆಡಳಿತಾಧಿಕಾರಿ ಪ್ರೊ.ಎನ್.ಜಿ. ಕರೂರ, ಪ್ರೊ.ವಿ.ಕೆ ಮೊರಬದ ಇದ್ದರು.