ಬಾಗಲಕೋಟೆ: ಹಿಂದಿಯಲ್ಲಿ ಭಾಷೆಯಲ್ಲಿ ಮೂಡಿಬರುವ ಬಾಲಿವುಡ್ ದಿಗ್ಗಜ ನಟ ಅಮಿತಾಭ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋಡಪತಿ (Kaun Banega Crorepati) ಕಾರ್ಯಕ್ರಮದಲ್ಲಿ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಮಹಾಲಿಂಗಪುರ ಪಟ್ಟಣದ ಯುವಕ 50 ಲಕ್ಷ ರೂ. ಬಹುಮಾನ ಗೆದ್ದು, ಊರ ಜನರ ಖುಷಿಯನ್ನು ದುಪ್ಪಟ್ಟು ಮಾಡಿದ್ದಾರೆ.
ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧದ T20 ಸರಣಿಗೆ ಭಾರತ ತಂಡ ಪ್ರಕಟ! ಇಬ್ಬರೂ ಸ್ಟಾರ್ ಆಟಗಾರರಿಗಿಲ್ಲ ಸ್ಥಾನ | INDvsENG
15 ಪ್ರಶ್ನೆಗಳಿಗೆ ಸರಿಯಾದ ಉತ್ತರ ಕೊಟ್ಟು 50 ಲಕ್ಷ ರೂ. ಗೆದ್ದು ಬೀಗಿದ ಸಾಮಾನ್ಯ ವೆಲ್ಡಿಂಗ್ ಕಾರ್ಮಿಕರ ಮಗನಿಗೆ ಸದ್ಯ ಜಾಲತಾಣ ಸೇರಿದಂತೆ ಊರಿನವರಿಂದ ಪ್ರಶಂಸೆಗಳ ಮಹಾಪೂರವೇ ಹರಿದುಬಂದಿವೆ. ನಗದು ಬಹುಮಾನ ಪಡೆದ ವಿಜೇತ ಯುವಕನ ಹೆಸರು ರಮ್ಜಾನ್ ಮಲಿಕಸಾಬ್ ಪೀರಜಾದೆ. ಚಹಾದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ರಮ್ಜಾನ್, ಇದಕ್ಕೂ ಮೊದಲು ಬ್ಯಾಡ್ಮಿಂಟನ್ ಕೋರ್ಟ್ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು. ಇದರ ಜತೆಗೆ ಪೆಟ್ರೋಲ್ ಬಂಕ್ನಲ್ಲಿ ಕೂಡ ಕೆಲಸ ನಿರ್ವಹಿಸುತ್ತಿದ್ದರು. ಕೆಬಿಸಿ ಸ್ಪರ್ಧೆಯಲ್ಲಿ ತಮಗಾದ ಅನುಭವದ ಬಗ್ಗೆ ರಮ್ಜಾನ್ ಮನಬಿಚ್ಚಿ ಒಂದಷ್ಟು ವಿಷಯಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.
"ಇದೊಂದು ನಕಲಿ ಆಟ ಇದಕ್ಕೆಲ್ಲ ಹೋಗೋದು ಬೇಡ ಎಂದು ತಂದೆ ಜಗಳ ಮಾಡಿ, ನನ್ನನ್ನು ತಡೆದಿದ್ದರು. ಈ ವಿಷಯವನ್ನು ನಾನು ಕೆಬಿಸಿ ವೇದಿಕೆಯಲ್ಲಿ ಅಭಿತಾಭ್ ಸರ್ ಗಮನಕ್ಕೆ ತಂದಿದ್ದೆ. ಆಗ ಖುದ್ದಾಗಿ ಅವರೇ ನನ್ನ ಹೆತ್ತವರ ಜತೆ ದೂರವಾಣಿ ಕರೆಯಲ್ಲಿ ಮಾತನಾಡಿ ನಾನು ಗೆದ್ದಿರುವ ಬಗ್ಗೆ ತಿಳಿಸಿದರು. ಇದಕ್ಕೆ ರಮ್ಜಾನ್ ತಂದೆ, ಇಲ್ಲ ಇನ್ನು ಮುಂದೆ ಅವನ ಆಟಕ್ಕೆ ಅಡ್ಡಿಪಡಿಸಲ್ಲ ಎಂದರು" ಎಂದು ರಮ್ಜಾನ್ ಹೇಳಿದ್ದಾರೆ.
"ಜೀವನದಲ್ಲಿ ಇಷ್ಟು ದೊಡ್ಡ ಮೊತ್ತದ ಚೆಕ್ ನೋಡಿರಲಿಲ್ಲ. ಬಾಲ್ಯದಿಂದಲೂ ರಸಪ್ರಶ್ನೆಗಳಲ್ಲಿ ಆಸಕ್ತಿ ಇತ್ತು. ಡಿಗ್ರಿ ಓದುತ್ತಿರುವಾಗ ಕೆಎಲ್ಇ ಕಾಲೇಜಿನ ಗ್ರಂಥಾಲಯ ಬಳಕೆ ನನಗೆ ಹೆಚ್ಚು ಅನುಕೂಲವಾಯಿತು. ದಿನಪತ್ರಿಕೆಗಳು, ಮೊಬೈಲ್ನಲ್ಲಿ ನಿತ್ಯ ರಾಷ್ಟ್ರ, ಅಂತಾರಾಷ್ಟ್ರೀಯ ಬೆಳಗವಣಿಗೆಗಳನ್ನು ಗಮನಸುತ್ತಿದ್ದೆ. 5ನೇ ತರಗತಿಯಲ್ಲಿದ್ದಾಗಲೇ ಕೌನ್ ಬನೇಗಾ ಕರೋಡಪತಿ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದೆ. ಒಟ್ಟು 8 ಸಲ ಕೆಬಿಸಿಗೆ ಸಂದರ್ಶನ ನೀಡಿದ್ದೆ. ಮೂರನೇ ಪ್ರಯತ್ನದಲ್ಲಿ ಹಾಟ್ ಸೀಟ್ನಲ್ಲಿ ಕೂರುವ ಅವಕಾಶ ಲಭಿಸಿತು" ಎಂದು ರಮ್ಜಾನ್ ಸಂತಸ ವ್ಯಕ್ತಪಡಿಸಿದ್ದಾರೆ.