ಬಾಗಲಕೋಟೆ: ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರದ ಚುಕ್ಕಾಣೆ ಹಿಡಿಯಲು ಬಿಜೆಪಿ, ಕಾಂಗ್ರೆಸ್ ಹವಣಿಸುತ್ತಿದ್ದು, ಹೀಗಾಗಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಆಡಳಿತ ಮಂಡಳಿ ಚುನಾವಣೆ ಕಾವು ಪಡೆದುಕೊಂಡಿದೆ. ಹಾಲಿ, ಮಾಜಿ ಶಾಸಕರು ಉಮೇದುವಾರಿಕೆ ಸಲ್ಲಿಸುವುದರ ಜತೆಗೆ ತಮ್ಮ ಸಹೋದರರನ್ನು ಕಣಕ್ಕೆ ಇಳಿಸುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.
ಒಟ್ಟು 13 ಕ್ಷೇತ್ರಗಳ ಪೈಕಿ ಎಲ್ಲ ನೇಕಾರ ಸಹಕಾರ ಸಂಘಗಳ ಮತಕ್ಷೇತ್ರ, ಪಟ್ಟಣ ಸಹಕಾರ ಬ್ಯಾಂಕ್‌ಗಳ ಮತ್ತು ಬಿನ್ ಶೇತ್ಕಿ(ಕೃಷಿಯೇತರ ಪತ್ತಿನ) ಸಂಘಗಳ ಹಾಗೂ ವಿವಿಧ ಪಿಕೆಪಿಎಸ್‌ಗಳು ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿವೆ. ರಾಜಕೀಯ ಪಕ್ಷಗಳ ನಾಯಕರಿಗೆ ಸೆಡ್ಡು ಹೊಡೆಯಲು ಅನೇಕ ಜನ ಸ್ವತಂತ್ರ ಅಭ್ಯರ್ಥಿಗಳಾಗಿ ತಮ್ಮ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಕೆ ಮಾಡುತ್ತಿರುವುದು ಕದನ ಕುತೂಹಲ ಕೆರಳಿಸಿದೆ. ಅ.25 ರಂದು 12, ಅ.26 ರಂದು 14 ಸೇರಿ ಈವರೆಗೆ 41 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಅಂತಿಮವಾಗಿ ಎಷ್ಟು ಜನ ಕಣದಲ್ಲಿ ಉಳಿದುಕೊಳ್ಳಲಿದ್ದಾರೆ ಎನ್ನುವುದು ಕೂಡ ಗಮನ ಸೆಳೆದಿದೆ. ಇನ್ನು ಕೆಲವು ಅಭ್ಯರ್ಥಿಗಳು ಎರಡು ಬಾರಿ ನಾಮಪತ್ರ ಸಲ್ಲಿಕೆ ಮಾಡುತ್ತಿದ್ದಾರೆ.
26 ನಾಮಪತ್ರ ಸಲ್ಲಿಕೆ
ಹುನಗುಂದ ಪಿಪಿಎಸ್ ಕ್ಷೇತ್ರಕ್ಕೆ ಮಾಜಿ ಶಾಸಕ ಹಾಲಿ ನಿರ್ದೇಶಕ ವಿಜಯಾನಂದ ಕಾಶಪ್ಪನವರ, ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘಗಳ ಮತಕ್ಷೇತ್ರಕ್ಕೆ ಮುಧೋಳದ ನಂದಕುಮಾರ ಪಾಟೀಲ, ಬೀಳಗಿ ಪಿಕೆಪಿಎಸ್ ಕ್ಷೇತ್ರಕ್ಕೆ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ, ಎಲ್ಲ ನೇಕಾರ ಸಹಕಾರ ಸಂಘಗಳ ಮತಕ್ಷೇತ್ರಕ್ಕೆ ಮುರುಗೇಶ ಕಡ್ಲಿಮಟ್ಟಿ, ಇಳಕಲ್ಲ ಪಿಕೆಪಿಎಸ್ ಮತಕ್ಷೇತ್ರಕ್ಕೆ ಮಹಾಂತೇಶ ಸಂಗಪ್ಪ ನರಗುಂದ, ಮುದಕಪ್ಪ ಸಾಂತಗೇರಿ, ಇತರ ಸಹಕಾರ ಸಂಘಗಳ ಮತಕ್ಷೇತ್ರಕ್ಕೆ ಮಹಾದೇವ ಭೀಮಪ್ಪ ಮಾರಾಪುರ, ವಿಠ್ಠಲ ರಾಮಪ್ಪ ಬಿಜ್ಜಿಗಾರ, ಪಟ್ಟಣ ಸಹಕಾರ ಬ್ಯಾಂಕ್‌ಗಳ ಮತ್ತು ಬಿನ್ ಶೇತ್ಕಿ(ಕೃಷಿಯೇತರ ಪತ್ತಿನ) ಸಂಘಗಳ ಮತಕ್ಷೇತ್ರಕ್ಕೆ ಹಾಲಿ ನಿರ್ದೇಶಕ ಶಿವಾನಂದ ಉದಪುಡಿ, ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಮುಧೋಳ ಪಿಕೆಪಿಎಸ್‌ಗೆ ಮಹಾಂತೇಶ ಉದಪುಡಿ, ಹನುಮಂತ ಪಾಟೀಲ ಭಾನುವಾರ ನಾಮಪತ್ರ ಸಲ್ಲಿಸಿದರು.
ಬೀಳಗಿ ಪಿಕೆಪಿಎಸ್ ಮತಕ್ಷೇತ್ರಕ್ಕೆ ಈರಣ್ಣ ಗಿಡ್ಡಪ್ಪಗೋಳ, ಮಲ್ಲಪ್ಪ ಪೂಜಾರಿ, ನೇಕಾರ ಸಹಕಾರ ಸಂಘಗಳ ಮತಕ್ಷೇತ್ರಕ್ಕೆ ಮಲ್ಲಿಕಾರ್ಜುನ ಬಾಣಕಾರ, ಮುಧೋಳ ಪಿಕೆಪಿಎಸ್‌ಗೆ ಮಹಾಂತೇಶ ಉದಪುಡಿ, ಇತರ ಸಹಕಾರ ಸಂಘಗಳ ಮತಕ್ಷೇತ್ರಕ್ಕೆ ವಿಧಾನ ಪರಿಷತ್ ಸದಸ್ಯ, ಬಿಜೆಪಿ ಮುಖಂಡ ಹಣಮಂತ ನಿರಾಣಿ, ಪಟ್ಟಣ ಸಹಕಾರ ಬ್ಯಾಂಕ್‌ಗಳ ಮತ್ತು ಬಿನ್ ಶೇತ್ಕಿ(ಕೃಷಿಯೇತರ ಪತ್ತಿನ) ಸಂಘಗಳ ಮತಕ್ಷೇತ್ರ ಶಿವಾನಂದ ಉದಪುಡಿ, ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ರಬಕವಿ-ಬನಹಟ್ಟಿ ಪಿಕೆಪಿಎಸ್ ಮತಕ್ಷೇತ್ರಕ್ಕೆ ಭೀಮಪ್ಪ ಮಗದುಮ, ತೇರದಾಳ ಮತಕ್ಷೇತ್ರದ ಶಾಸಕ ಸಿದ್ದಪ್ಪ ಕಲ್ಲಪ್ಪ ಸವದಿ, ಬಾದಾಮಿ ಪಿಕೆಪಿಎಸ್ ಮತಕ್ಷೇತ್ರಕ್ಕೆ ಹಾಲಿ ನಿರ್ದೇಶಕ ಕುಮಾರಗೌಡ ಜನಾಲಿ, ಹನುಮಂತಗೌಡ ಗೌಡ್ರ, ಜಮಖಂಡಿ ಪಿಕೆಪಿಎಸ್‌ಗೆ ಹಾಲಿ ಶಾಸಕ ಆನಂದ ನ್ಯಾಮಗೌಡ ಹಾಗೂ ಶಾಸಕ ಸಿದ್ದು ಸವದಿ ಸಹೋದರ ಯೋಗಪ್ಪ ಕಲ್ಲಪ್ಪ ಸವದಿ, ಕಲ್ಲಪ್ಪ ಗಿರಡ್ಡಿ ಸೋಮವಾರ ನಾಮಪತ್ರ ಸಲ್ಲಿಸಿದರು.
ನಾಳೆ ದಡ್ಡೇನವರ ಉಮೇದುವಾರಿಕೆ
ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ಚುನಾವಣೆಯ ನೇಕಾರ ಸಹಕಾರ ಸಂಘಗಳ ಮತಕ್ಷೇತ್ರವು ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಹೊಸ ಮುಖಗಳು ಅವಕಾಶ ಬಯಸಿ ಹುರಿಯಾಳುಯಾಗುತ್ತಿದ್ದಾರೆ. ಇದರ ಜತೆಗೆ ಇದೇ ಕ್ಷೇತ್ರದಿಂದ 2015 ರಲ್ಲಿ ಸ್ಪರ್ಧಿಸಿ ಗೆದ್ದು ಬಿಗಿದ್ದ ಡಾ.ಎಂ.ಎಸ್.ದಡ್ಡೇನವರ ಮರು ಆಯ್ಕೆ ಬಯಸಿದ್ದು, ಅ.28 ರಂದು ತಮ್ಮ ಅಪಾರ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಿದ್ದಾರೆ.