ಬಾಗಲಕೋಟೆ: ಕೃಷಿ ಹೊರತುಪಡಿಸಿ ಬೇರೆ ಯಾವುದೇ ಉದ್ದೇಶಕ್ಕಾಗಿ ಸಬ್ಸಿಡಿ ಯೂರಿಯಾವನ್ನು ಬಳಸುವುದನ್ನು ತಡೆಯುವುದು ಅವಶ್ಯಕವಾಗಿದ್ದು, ಯೂರಿಯಾ ರಸಗೊಬ್ಬರ ದುರುಪಯೋಗವಾಗದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೆ.ರಾಜೇಂದ್ರ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿಗೆ ರಸಗೊಬ್ಬರ ಹಂಚಿಕೆ, ದಾಸ್ತಾನು ಕುರಿತು ಸೋಮವಾರ ಜರುಗಿದ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೃಷಿಯೇತರ ಚಟುವಟಿಕೆಗೆ ಯೂರಿಯಾ ಗೊಬ್ಬರ ಬಳಸುತ್ತಿರುವ ಕೈಗಾರಿಕೆಗಳನ್ನು ಗುರುತಿಸಿ ಪತ್ತೆ ಹಚ್ಚುವ ಕೆಲಸವಾಗಬೇಕು. ಇದಕ್ಕಾಗಿ ಪೊಲೀಸ್, ಕೈಗಾರಿಕೆ, ಕೃಷಿ ಇಲಾಖೆಗಳನ್ನೊಳಗೊಂಡ ತಂಡ ರಚಿಸಿ ಪರಿಶೀಲನೆ ನಡೆಸಬೇಕು. ಯೂರಿಯಾ ಬಳಕೆ ಮಾಡುತ್ತಿರುವುದು ಕಂಡು ಬಂದಲ್ಲಿ ಅಂತಹ ಕೈಗಾರಿಕೆಗಳ ಮೇಲೆ ಪ್ರಕರಣ ದಾಖಲಿಸಿ ಪರವಾನಗಿ ರದ್ದು ಪಡಿಸಬೇಕು ಎಂದು ಸೂಚನೆ ನೀಡಿದರು.
ಪಶು ಮತ್ತು ಕೋಳಿ ಆಹಾರದಲ್ಲಿ ಪ್ರೋಟೀನ್ ಬದಲಾಗಿ ಯೂರಿಯಾ ಗೊಬ್ಬರ ಬಳಸಲಾಗುತ್ತಿದೆ. ಸಕ್ಕರೆ, ಮೊಲ್ಯಾಸಿಸ್ ಪರಿವರ್ತನೆಯಲ್ಲಿ ಕಚ್ಚಾ ವಸ್ತುವಾಗಿ, ಜವಳಿ ಬಣ್ಣ ಅಥವಾ ಮುದ್ರಣಕ್ಕಾಗಿ ಡೈ ತಯಾರಿಕೆಯಲ್ಲಿ, ಸೋಪು ತಯಾರಿಕೆಯಲ್ಲಿ, ಪ್ಲೈವುಡ್ ಮತ್ತು ಪಾರ್ಟಿಕಲ್ ಬೋರ್ಡ್ ಉದ್ಯಮದಲ್ಲಿ, ಅಡುಗೆ ಪಾತ್ರೆಗಳು, ಪ್ಲಾಸ್ಟಿಕ್ ಉತ್ಪನ್ನಗಳ ತಯಾರಿಕೆಯಲ್ಲಿ ಯೂರಿಯಾ ಬಳಸಲಾಗುತ್ತಿದೆ. ಜಿಲ್ಲೆಯಲ್ಲಿ ಇಂತಹುಗಳ ಮೇಲೆ ಹದ್ದಿನ ಕಣ್ಣು ಇರಿಸಬೇಕು ಎಂದರು.
ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿಗೆ ಯೂರಿಯಾ, ಡಿಎಪಿ, ಕಾಂಪ್ಲೆಕ್ಸ್, ಎಂ.ಒ.ಪಿ, ಎಸ್.ಎಸ್.ಪಿ ರಸಗೊಬ್ಬರ ಬೇಡಿಕೆಗೆ ತಕ್ಕಂತೆ ಹಂಚಿಕೆ ಮತ್ತು ಪೂರೈಕೆ ರಸಗೊಬ್ಬರದ ಕಂಪನಿಗಳು ಶೆಡ್ಯೂಲ್ ಪ್ರಕಾರ ಕ್ರಮ ವಹಿಸಬೇಕು. ಹಂಚಿಕೆ ಮತ್ತು ಪೂರೈಕೆಯಲ್ಲಿ ತೊಂದರೆಯಾದಲ್ಲಿ ಜಿಲ್ಲಾಧಿಕಾರಿಗಳ ಗಮನಕ್ಕೆ ತರಬೇಕು. ವಿವಿಧ ರಸಗೊಬ್ಬರಗಳ ದರ ಪರಿಷ್ಕರಿಸಲಾಗಿದ್ದು, ಹಳೆಯ ರಸಗೊಬ್ಬರದ ಸಂಗ್ರಹದ ಬಗ್ಗೆ ಮಾಹಿತಿ ನೀಡುವಂತೆ ಜಂಟಿ ಕೃಷಿ ನಿರ್ದೇಶಕರಿಗೆ ಸೂಚಿಸಿದರು.
ಜಿಲ್ಲಾ ಜಂಟಿ ಕೃಷಿ ನಿರ್ದೇಶಕಿ ಡಾ.ಚೇತನಾ ಪಾಟೀಲ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರಾಹುಲ್‌ಕುಮಾರ ಬಾವಿದಡ್ಡಿ, ಕೈಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಪಿ.ಎಸ್.ಕಟ್ಟಿಮನಿ, ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಬಿ.ಎಂ.ಚಳಗೇರಿ, ಜಿಲ್ಲಾ ಅಗ್ರಣಿ ಬ್ಯಾಂಕ್ ವ್ಯವಸ್ಥಾಪಕ ಗೋಪಾಲ ರೆಡ್ಡಿ ಹಾಗೂ ಆಯಾ ತಾಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕರು, ವಿವಿಧ ಕಂಪನಿಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ರೈತರ ಹಿತದೃಷ್ಟಿಯಿಂದ ಜಿಲ್ಲೆಯಲ್ಲಿ ಯೂರಿಯಾ ರಸಗೊಬ್ಬರ ಕೊರತೆಯಾಗದಂತೆ ಕ್ರಮವಹಿಸಲು ಕೃಷಿಯೇತರ ಚಟುವಟಿಕೆಯಲ್ಲಿ ಬಳಸುವುದನ್ನು ತಡೆಯಬೇಕಾದ ಅವಶ್ಯಕತೆ ಇದೆ. ಪ್ರಸಕ್ತ ಸಾಲಿಗೆ ಯೂರಿಯಾ 8400 ಮೆಟ್ರಿಕ್ ಟನ್, ಡಿಎಪಿ 2549 ಮೆಟ್ರೆಕ್ ಟನ್, ಕಾಂಪ್ಲೆಕ್ಸ್ 2043 ಮೆಟ್ರಿಕ್ ಟನ್ ರಸಗೊಬ್ಬರಗಳ ದಾಸ್ತಾನು ಅವಶ್ಯಕತೆ ಇದ್ದು, ಸಂಗ್ರಹಕ್ಕೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳುವಂತೆ ಕೆಎಸ್‌ಸಿಎಂಎ್, ಕೆಎಸ್‌ಎಸ್‌ಸಿ ಪ್ರತಿನಿಧಿಗಳಿಗೆ ಜಿಲ್ಲಾಧಿಕಾರಿ ರಾಜೇಂದ್ರ ಸೂಚಿಸಿದರು.
ಬಾಗಲಕೋಟೆ, ಕೃಷಿ, ಯೂರಿಯಾ, ರಸಗೊಬ್ಬರ, ಜಿಲ್ಲಾಧಿಕಾರಿ, ಕೆ.ರಾಜೇಂದ್ರ, Bagalkot, Agriculture, Urea, Fertilizer, Collector, K. Rajendra,