ಹರಪನಹಳ್ಳಿ ತಾಲೂಕಿನ ಬಾಗಳಿ ಗ್ರಾಮದಲ್ಲಿ ಮಂಡಿ ದುರುಗಮ್ಮ ದೇವಾಸ್ಥಾನದ ಬಳಿ ಕುಡಿಯುವ ನೀರಿನ ಪೈಪ್ ಲೈನ್ ಒಡೆದು ನೀರು ಹೊರಬರುತ್ತಿರುವುದು. 
ಜಿಲ್ಲೆ

ಬಾಗಳಿ ಗ್ರಾಮಕ್ಕೆ ಕಲುಷಿತ ನೀರು ಪೂರೈಕೆ

ರುದ್ರಪ್ಪ ವಾಲಿ

ಹರಪನಹಳ್ಳಿ: ಬಾಗಳಿ ಗ್ರಾಮಕ್ಕೆ ಗ್ರಾಪಂ ಸಿಬ್ಬಂದಿ ಸಮರ್ಪಕವಾಗಿ ನೀರು ಪೂರೈಸುತ್ತಿಲ್ಲ. ಗ್ರಾಮದಲ್ಲಿ ಎರಡು ಸಾವಿರಕ್ಕೂ ಅಧಿಕ ಮನೆಗಳಿದ್ದು, ಮೂರು ವಾರ್ಡ್‌ಗಳು ಇವೆ. ನಿತ್ಯ ಬಳಕೆಗೆ ಬೇಕಾಗುವಷ್ಟು ನೀರಿದ್ದರೂ ಸಮರ್ಪಕವಾಗಿ ನಿರ್ವಹಣೆ ಮಾಡದೆ ಗ್ರಾಪಂ ಸಿಬ್ಬಂದಿ ನೀರಿನ ಅಭಾವ ಸೃಷ್ಟಿಸಿದ್ದಾರೆ.

ನಿರಂತರ ಮಳೆಯಿಂದ ಗ್ರಾಮಕ್ಕೆ ಸರಬರಾಜು ಆಗುವ ಕುಡಿಯುವ ನೀರಿನ ಪೈಪ್‌ಗಳ ಮೇಲೆ ದ್ವಿಚಕ್ರ ವಾಹನಗಳು ಮತ್ತು ಟ್ರ್ಯಾಕ್ಟರ್‌ಗಳು ಓಡಾಡುವುದರಿಂದ ಕೆಲವು ಕಡೆ ಪೈಪ್‌ಲೈನ್ ಒಡೆದಿವೆ. ಹಲವಾರು ವರ್ಷಗಳ ಹಿಂದೆ ಹಾಕಿದ ಪೈಪ್‌ಗಳು ತುಕ್ಕು ಹಿಡಿದು ನೀರು ಪೋಲಾಗುತ್ತಿದೆ. ಶುದ್ಧ ಕುಡಿವ ನೀರಿನ ಪೈಪ್‌ಗೆ ಕಲುಷಿತ ನೀರು ಸೇರುತ್ತಿದ್ದು ಜನರು ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ.

ಕಳೆದ ತಿಂಗಳು ನಡೆದ ಗ್ರಾಮ ಸಭೆಯಲ್ಲಿ ಈ ಬಗ್ಗೆ ಪಿಡಿಒ ಹಾಗೂ ಅಧ್ಯಕ್ಷರು ಮತ್ತು ಸದಸ್ಯರು ಚರ್ಚಿಸಿ ಗ್ರಾಮದಲ್ಲಿ ಪ್ರತಿ ಮೂರು ವಾರ್ಡ್‌ಗೆ ಒಬ್ಬರಂತೆ ಮೂರು ಜನ ನೀರುಗಂಟಿಗಳನ್ನು ನೇಮಕ ಮಾಡಲಾಗಿದೆ. ನೀರುಗಂಟಿಗಳ ಸಮರ್ಪಕವಾಗಿ ಕಾರ್ಯನಿರ್ವಹಿಸದಿರುವುದು ಸಮಸ್ಯೆಗೆ ಕಾರಣವಾಗಿದೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ.

ಗ್ರಾಮದ ಮಂಡಿ ದುರುಗಮ್ಮ ದೇವಸ್ಥಾನದ ಹಿಂಭಾಗದ ವಾಲ್ವ್, ಮತ್ತು ಶೃಂಗಾರತೋಟಕ್ಕೆ ಹೋಗುವ ಮುಖ್ಯ ರಸ್ತೆ, ಕೆರೆಯ ಕೋಡಿಯ ಮೇಲುಗಡೆ, ಪಶು ಆಸ್ಪತ್ರೆ ಮುಂಭಾಗ, ಚೌಡಮ್ಮ ದೇವಸ್ಥಾನದ ಸಮೀಪ, ಹಾಗೂ ಕಲ್ಲೇಶ್ವರ ದೇವಸ್ಥಾನಕ್ಕೆ ಸಾಗುವ ದಾರಿಯಲ್ಲಿ ನೀರಿನ ಪೈಪ್‌ಗಳು ಒಡೆದಿದ್ದು ಕಲುಷಿತ ಮಳೆ ನೀರು ಸೇರುತ್ತಿರುವುದರಿಂದ ಗ್ರಾಮಸ್ಥರು ಚರ್ಮ ರೋಗ ಮತ್ತು ವಾಂತಿ-ಭೇದಿ ಹಾಗೂ ಜ್ವರದಿಂದ ಬಳಲುವಂತಾಗಿದೆ. ಸಮರ್ಪಕವಾಗಿ ಕೆಲಸ ನಿರ್ವಹಿಸದ ನೀರಗಂಟಿಗಳನ್ನು ತೆಗೆದು ಹಾಕಿ ಬೇರೆಯವರನ್ನು ನೇಮಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಬಾಗಳಿ ಗ್ರಾಮದಲ್ಲಿ ಆಗಿರುವ ನೀರಿನ ಸಮಸ್ಯೆಯನ್ನು ಆದಷ್ಟು ಬೇಗ ಸರಿಪಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸುವೆ. ವೈ.ಎಚ್.ಚಂದ್ರಶೇಖರ್ ತಾಪಂ ಇಒ, ಹರಪನಹಳ್ಳಿ