ಜಿಲ್ಲೆ

ಮೈಕೊರೆವ ಚಳಿಗೆ ಕೋಟೆನಗರಿ ಗಢಗಢ !

ಅಶೋಕ ಶೆಟ್ಟರ
ಬಾಗಲಕೋಟೆ: ಬಿಸಿಲೂರು ಖ್ಯಾತಿಯ ಕೋಟೆನಗರಿ ಬಾಗಲಕೋಟೆ ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಮೈಕೊರೆಯುವ ಚಳಿಯಾರ್ಭಟ ಮುಂದುವರಿದಿದೆ. ಜನರು ಮನೆಯಿಂದ ಆಚೆ ಬರಲು ಬೆದರುವಂತಾಗಿದೆ.

ನವೆಂಬರ್ ತಿಂಗಳಿಂದ ಚಳಿಗಾಲ ಆರಂಭವಾಗಿದ್ದರೂ ಮೈಕೊರೆಯುವ ಚಳಿ ಅನುಭವ ಆಗಿರಲಿಲ್ಲ. ಮೋಡ ಮುಸುಕಿದ ವಾತಾವರಣ ಹಾಗೂ ದಟ್ಟ ಮಂಜಿನ ಆರ್ಭಟ ಇತ್ತು. ಆದರೆ, ಇದೀಗ ಒಂದು ವಾರದಿಂದ ಚಳಿ ಪ್ರಮಾಣ ಜೋರಾಗಿದೆ.

ಕಳೆದ ವಾರ 16ರಿಂದ 18 ರವರೆಗೆ ಇದ್ದ ಕನಿಷ್ಠ ತಾಪಮಾನ ಎರಡ್ಮೂರು ದಿನಗಳಿಂದ 10 ರಿಂದ 12 ಗಡಿಗೆ ಬಂದಿದ್ದು, ಬೆಳಗ್ಗೆ ಮತ್ತು ಸಂಜೆ ಜನರು ಹೊರಬರಲಾಗದಂತಹ ಸ್ಥಿತಿ ಇದೆ. ಬೆಳಗ್ಗೆ ಶಾಲೆ, ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು, ಕೆಲಸಕ್ಕೆ ತೆರಳುವ ಜನರು ನಡುಗುತ್ತಲೇ ಹೋಗಬೇಕಾಗಿದೆ. ಇನ್ನು ಬೆಳಗಿನ ಜಾವ ಕೈಕಾಲುಗಳು ಮರಗಟ್ಟುವ ಅನುಭವ ಆಗುತ್ತಿದ್ದು, ಅನೇಕರು ಬೆಂಕಿಯಿಂದ ಮೈ ಕಾಯಿಸಿಕೊಳ್ಳುವ ದೃಶ್ಯ ಎಲ್ಲ ಕಡೆಗೂ ಕಂಡು ಬರುತ್ತಿದೆ.

ಊರಿಗೆ ಹೋಗುವವರು, ಬೇರೆ ಕಡೆಯಿಂದ ಬರುವವರು ಬಸ್ ನಿಲ್ದಾಣ ಬಳಿ ಬಿಸಿಬಿಸಿ ಚಹಾಗೆ ಮೊರೆ ಹೋಗುವ ಮೂಲಕ ಚಳಿಯಿಂದ ರಕ್ಷಿಸಿಕೊಳ್ಳಲು ಮುಂದಾಗುತ್ತಿದ್ದಾರೆ. ಮೈತುಂಬ ದಪ್ಪ ದಪ್ಪ ಬಟ್ಟೆ, ಮೇಲೆ ಸ್ವೆಟರ್ ಹಾಕಿಕೊಂಡು ಸಂಚರಿಸುತ್ತಿದ್ದಾರೆ. ಇನ್ನು ಅತಿಯಾದ ಥಂಡಿಯಿಂದಾಗಿ ಬೆಳಗ್ಗೆ ಮತ್ತು ಸಂಜೆ ಹೊತ್ತು ವಾಯು ವಿವಾರಕ್ಕೆ ತೆರಳುವವರ ಸಂಖ್ಯೆಯೂ ಕಡಿಮೆ ಆಗಿದೆ.

ವಾತಾವರಣ ಬದಲಾವಣೆಯಿಂದ ನೆಗಡಿ, ಕೆಮ್ಮು: ವಾತಾವರಣದಲ್ಲಿ ತೀವ್ರ ಬದಲಾವಣೆ ಆಗಿರುವುದರಿಂದ ಅನೇಕರಿಗೆ ನೆಗಡಿ, ಕೆಮ್ಮು, ಜ್ವರ, ಮೈಕೈ ನೋವು ಸಾಮಾನ್ಯವಾಗಿ ಕಂಡು ಬರುತ್ತಿದೆ. ಅಧಿಕ ಚಳಿ ಇರುವುದರಿಂದ ಅಸ್ತಮಾರೋಗಿಗಳು ವಿಶೇಷ ಜಾಗ್ರತೆಯಿಂದ ಇರಬೇಕು. ಹಾಗೆಯೇ ಬೆಳಗ್ಗೆ ಮತ್ತು ಸಂಜೆ ಹೊತ್ತು ಮಕ್ಕಳು ಮತ್ತು ವೃದ್ಧರನ್ನು ಹೊರಗಡೆ ಕಳುಹಿಸಬಾರದು ಎನ್ನುವ ಸಲಹೆಯನ್ನು ವೈದ್ಯರು ಕೊಡುತ್ತಾರೆ.

ಹಿಂದೆ ಅವಳಿ ಜಿಲ್ಲೆಯಲ್ಲಿ 6.1 ಕನಿಷ್ಠ ದಾಖಲಾಗಿತ್ತು : ಶತಮಾನದಲ್ಲಿ ಕನಿಷ್ಠ ತಾಪಮಾನ ಗಮನಿಸಿದಾಗ ಬಾಗಲಕೋಟೆ-ವಿಜಯಪುರ ಅವಳಿ ಜಿಲ್ಲೆಯಲ್ಲಿ ಈ ಹಿಂದೆ 6.1 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿರುವ ಉದಾಹರಣೆ ಇದೆ. ಆದರೆ, ಕಳೆದ ಎರಡು ದಶಕಗಳಿಂದ ಸಾಮಾನ್ಯವಾಗಿ ಇರುವ ಚಳಿಯ ಪ್ರಮಾಣ 16 ರಿಂದ 18 ಡಿಗ್ರಿ ಸೆಲ್ಸಿಯಸ್. ಕಳೆದ ವರ್ಷ ನವಂಬರ್ ತಿಂಗಳಲ್ಲಿ 10 ಡಿಗ್ರಿ ಸೆಲ್ಸಿಯಸ್ ಕಂಡು ಬಂದಿತ್ತು. ಪ್ರಸ್ತುತ ನಾಲ್ಕು ದಿನಗಳಿಂದ ಕನಿಷ್ಠ ತಾಪಮಾನ 10 ರಿಂದ 12 ಡಿಗ್ರಿ ಸೆಲ್ಸಿಯಸ್‌ನಲ್ಲಿದೆ. ಇದೇ ಪರಿಸ್ಥಿತಿ ನಾಲ್ಕೈದು ದಿನ ಮುಂದುವರಿದರೆ ಅವಳಿ ಜಿಲ್ಲೆಯಲ್ಲಿ ಶತಮಾನದ ಕನಿಷ್ಠ ತಾಪಮಾನ 6.1ಗಿಂತ ಕಡಿಮೆ ತಾಪಮಾನ ದಾಖಲಾಗುವ ಸಾಧ್ಯತೆ ಇದೆ. ಜನರು ಆರೋಗ್ಯ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂದು ಬಾಗಲಕೋಟೆ ಹವಾಮಾನ ಶಾಸ್ತ್ರಜ್ಞರಾದ ಡಾ.ಪ್ರವೀಣ ಗುಳೇದ ವಿಜಯವಾಣಿಗೆ ತಿಳಿಸಿದರು.

ಮಕ್ಕಳ ಮೇಲೆ ವಿಶೇಷ ಗಮನ ಇರಲಿ : ಇನ್ನು ಕನಿಷ್ಠ ತಾಪಮಾನ ಇರುವುದರಿಂದ ಪಾಲಕರು ಮಕ್ಕಳ ಬಗ್ಗೆ ವಿಶೇಷ ಗಮನಹರಿಸಬೇಕು ಎಂದು ಚಿಕ್ಕಮಕ್ಕಳ ತಜ್ಞ ಡಾ.ದೇವರಾಜ ಪಾಟೀಲ ಹೇಳುತ್ತಾರೆ. ಮಕ್ಕಳಿಗೆ ಸ್ವೆಟರ್ ಹಾಕಿ ಮಲಗಿಸಬೇಕು. ಕೈ-ಕಾಲು ಚೀಲಗಳನ್ನು ಹಾಕಬೇಕು. ಬೆಳಗ್ಗೆ ಮತ್ತು ಸಂಜೆ ಮಕ್ಕಳನ್ನು ಹೊರಗಡೆ ಆಡಲು ಬಿಡಬಾರದು. ಕಾಯಿಸಿ, ಆರಿಸಿದ ನೀರು ಕುಡಿಸಬೇಕು. ವಿಶೇಷವಾಗಿ ಅಸ್ತಮಾ ತೊಂದರೆ ಇರುವವರು ಬೆಳಗ್ಗೆ ಮತ್ತು ಸಂಜೆ ಹೊತ್ತು ವಾಯುವಿಹಾರ ಮಾಡಬಾರದು. ಹೊರಗಡೆ ಮಲಗಿಕೊಳ್ಳಬಾರದು. ನಿರಂತರವಾಗಿ ತೆಗೆದುಕೊಳ್ಳುವ ಔಷಧೋಪಚಾರ ನಿಲ್ಲಿಸಬಾರದು ಎಂದು ಸಲಹೆ ನೀಡುತ್ತಾರೆ.

ನಾಲ್ಕು ದಿನಗಳಿಂದ ಬಾಗಲಕೋಟೆಯಲ್ಲಿ ಕನಿಷ್ಠ ತಾಪಮಾನ ಹತ್ತರ ಆಸುಪಾಸಿನಲ್ಲಿದೆ. ಇದೇ ಸ್ಥಿತಿ ಮುಂದುವರಿದಲ್ಲಿ ಇನ್ನೂ ತಾಪಮಾನ ಕಡಿಮೆ ಆಗುವ ಸಾಧ್ಯತೆ ಇದೆ. ಹೀಗಾಗಿ ಸಾರ್ವಜನಿಕರು ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸಬೇಕು. ಬೆಳಗ್ಗೆ ಮತ್ತು ಸಂಜೆ ಹೊತ್ತು ಮನೆಯಲ್ಲಿ ಇರುವುದು ಹೆಚ್ಚು ಸುರಕ್ಷಿತ.
-ಡಾ.ಪ್ರವೀಣ ಗುಳೇದ, ಹವಾಮಾನ ಶಾಸ್ತ್ರಜ್ಞರು, ಬಾಗಲಕೋಟೆ