ಸಕಲೇಶಪುರ: ಕಂದಾಯ ಇಲಾಖೆ ಲೋಪದಿಂದ ಗ್ರಾಮದ ಯುವಕರು ಊರು ತೊರೆಯುವಂತಾಗಿದೆ ಎಂದು ಆರೋಪಿಸಿ ಬ್ಯಾಗಡಹಳ್ಳಿ ಗ್ರಾಮಸ್ಥರು, ಮಹಿಳೆಯರು ಮಂಗಳವಾರ ಪ್ರತಿಭಟನೆ ನಡೆಸಿದರು.
ಮರಗತ್ತೂರು ಗ್ರಾಮದ ಸರ್ವೇ ನಂಬರ್ 16ರಲ್ಲಿ ಮೂರು ಎಕರೆ ಸರ್ಕಾರಿ ಭೂಮಿಯನ್ನು ಬ್ಯಾಗಡಹಳ್ಳಿ ಗ್ರಾಮದ ಉಪಯೋಗಕ್ಕಾಗಿ ಬಹು ಹಿಂದಿನಿಂದ ಮೀಸಲಿಡಲಾಗಿದೆ. ಆದರೆ, ಗ್ರಾಮದ ಗೌಡೆಗೌಡ ಕಳೆದ 5 ವರ್ಷಗಳ ಹಿಂದೆ ಈ ಸರ್ಕಾರಿ ಜಮೀನಿನಲ್ಲಿ ಸಣ್ಣದೊಂದು ಗುಡಿಸಿಲು ನಿರ್ಮಿಸಿಕೊಂಡು ವಾಸಿಸುತ್ತಿದ್ದರು. ದಿನಕಳೆದಂತೆ ಜಮೀನು ಒತ್ತುವರಿ ಮಾಡಲಾರಂಭಿಸಿದ್ದಾರೆ. ಈ ಬಗ್ಗೆ ಕಂದಾಯ ಇಲಾಖೆ ಹಾಗೂ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿಗೆ ದೂರು ನೀಡಿ ಒತ್ತುವರಿ ತೆರವುಗೊಳಿಸುವಂತೆ ಮನವಿ ಮಾಡಿ ವರ್ಷ ಕಳೆದಿದೆ ಎಂದು ಆರೋಪಿಸಿದರು.
ಆದರೆ, ಅಧಿಕಾರಿಗಳು ಒತ್ತುವರಿ ತೆರವುಗೊಳಿಸಲು ಯಾವುದೇ ಕ್ರಮ ಕೈಗೊಳ್ಳದ ಪರಿಣಾಮ ಈತ ವಾರದ ಹಿಂದೆ ಮತ್ತಷ್ಟು ಭೂಮಿ ಒತ್ತುವರಿ ಮಾಡಲಾರಂಭಿಸಿದ್ದರು. ಇದರಿಂದ ಸಿಟ್ಟಿಗೆದ್ದ ಗ್ರಾಮಸ್ಥರು ಒತ್ತುವರಿ ತೆರವುಗೊಳಿಸಿದ್ದಾರೆ. ಈ ವೇಳೆ ಒತ್ತುವರಿ ದಾರರಿಂದಲೇ ಗ್ರಾಮಸ್ಥರ ಮೇಲೆ ಖಾರಪುಡಿ ಎರಚಿ ಹಲ್ಲೆ ನಡೆಸಲಾಗಿದ್ದು ಈ ಬಗ್ಗೆ ವಿಡಿಯೋ ಚಿತ್ರೀಕರಣ ಲಭ್ಯವಿದೆ. ಆದರೂ ಪೊಲೀಸ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ರಾಜಕೀಯದ ಒತ್ತಡಕ್ಕೆ ಸಿಲುಕಿ ಗ್ರಾಮಸ್ಥರ ಮೇಲೆ ದೂರು ದಾಖಲಿಸಿರುವ ಪರಿಣಾಮ ಗ್ರಾಮದಲ್ಲಿ ಪುರುಷರು ಊರು ತೊರೆಯುವಂತಾಗಿದೆ. ಹೀಗಾಗಿ ಸ್ಥಳಕ್ಕೆ ತಹಸೀಲ್ದಾರ್ ಆಗಮಿಸಬೇಕು ಎಂದು ಮಹಿಳೆಯರು ಪಟ್ಟು ಹಿಡಿದರು.
ಸ್ಥಳಕ್ಕಾಗಮಿಸಿದ ತಹಸೀಲ್ದಾರ್ ಅರವಿಂದ್, 94 ಸಿ ಅಡಿ ನೀಡಿರುವ ವಿಸ್ತೀರ್ಣಕ್ಕಿಂತ ಹೆಚ್ಚಿನ ಒತ್ತುವರಿ ಇದ್ದರೆ ತೆರವುಗೊಳಿಸಿ ಮುಂದೆ ಯಾವುದೇ ಒತ್ತುವರಿ ಮಾಡಿದರೂ ಕ್ರಮ ಕೈಗೊಳ್ಳಲಾಗುವುದು ಎಂಬ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂದೆ ಪಡೆಯಲಾಯಿತು.
ಗ್ರಾಮದ ಮಹಿಳೆಯರಾದ ಪಾರ್ವತಿ, ರಾಧಾ, ನೇತ್ರಾ, ಜಯಂತಿ, ಜಾನಕಿ, ಮಧು, ಸುಬ್ರಹ್ಮಣ್ಯ ಇತರರು ಇದ್ದರು.