ಕಲಬುರಗಿ: ತಾಲೂಕಿನ ಶರಣ ಸಿರಸಗಿಯಲ್ಲಿರುವ ಶರಣಜ್ಯೋತಿ ಆಂಗ್ಲ ಮಾಧ್ಯಮ ಶಾಲೆ ಹಾಗೂ ಕ್ರೀಡಾ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ನಾಲ್ಕುಚಕ್ರ ಚಾರಿಟೇಬಲ್ ಟ್ರಸ್ಟ್ನಿಂದ ಸ್ಕೂಲ್ ಬ್ಯಾಗ್ ವಿತರಣೆ ಮಾಡಲಾಯಿತು.
ಶಾಲೆಗೆ ಸುತ್ತಮುತ್ತ ಹಳ್ಳಿಯ ರೈತಾಪಿ ಕುಟುಂಬದ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬರುವುದರಿಂದ ಶಾಲೆ ಮನವಿಗೆ ಸ್ಪಂದಿಸಿ ನಾಲ್ಕುಚಕ್ರ ತಂಡ ದಾನಿಗಳ ಸಹಕಾರದೊಂದಿಗೆ ಸ್ಕೂಲ್ ಬ್ಯಾಗ್ ವಿತರಣೆ ಕಾರ್ಯಕ್ರಮ ನಡೆಸಿತು.
ನಾಲ್ಕುಚಕ್ರ ತಂಡದ ಮುಖ್ಯಸ್ಥರಾದ ಕಲ್ಯಾಣರಾವ್ ಪಾಟೀಲ್ ಕಣ್ಣಿ ಮಾತಾನಾಡಿ, ವಿದ್ಯೆ ಬಹಳ ಮುಖ್ಯವಾದದ್ದು. ವಿದ್ಯೆಯಿಂದ ಜೀವನದಲ್ಲಿ ಏನು ಬೇಕಾದರೂ ಸಾಧಿಸಬಹುದು. ವಿದ್ಯಾವಂತರಲ್ಲಿ ಸೃಜನಶೀಲತೆ, ಸಂಸ್ಕಾರ, ಒಳ್ಳೆಯ ನಡತೆ. ಒಳ್ಳೆಯ ಗುಣಗಳನ್ನು ರೂಢಿಸಿಕೊಳ್ಳಬೇಕು. ನಿಮ್ಮ ಸಾಧನೆ ಬಹಳ ಮುಖ್ಯ. ನೀವು ನಿಮ್ಮ ತಂದೆ-ತಾಯಿಯರಿಗೆ, ವಿದ್ಯೆ ಕಲಿಸಿದ ಗುರುಗಳಿಗೂ ಗೌರವ ತಂದುಕೊಡಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಹೇಳಿದರು.
ನಾಲ್ಕುಚಕ್ರ ಮುಖ್ಯಸ್ಥರಾದ ಮಹೇಶ್ಚಂದ್ರ ಪಾಟೀಲ್ ಕಣ್ಣಿ ಮಾತನಾಡಿ, ನಾಲ್ಕುಚಕ್ರ ತಂಡ ಸದಾ ಸಾಮಾಜಿಕ ಕಾರ್ಯ ಹಮ್ಮಿಕೊಳ್ಳುತ್ತಿದ್ದು, ಕೊಡುವ ಕೈಗಳಿಗೆ ಕೊರತೆಯಿಲ್ಲ. ಆದರೆ ವಿದ್ಯಾರ್ಥಿಗಳು ದಾನಿಗಳ ಸಹಾಯವನ್ನು ಸದುಪಯೋಗ ಪಡೆದುಕೊಂಡು, ಉತ್ತಮ ರೀತಿಯಲ್ಲಿ ವಿದ್ಯಾಭ್ಯಾಸ ಮಾಡಿ, ಸಾಮಾಜಿಕ ಕಾರ್ಯಗಳಿಗೆ ಅರ್ಥಬರುವಂತೆ ಸಾಧಿಸಿ ತೋರಿಸಬೇಕು ಎಂದು ಹೇಳಿದರು.
ಶಾಲೆಯ ಅಧ್ಯಕ್ಷರಾದ ಸಿ.ಎನ್.ಬಾಬಳಗಾಂವ್ ಮಾತನಾಡಿ, ನಮ್ಮ ಶಾಲೆಯ ಮಕ್ಕಳಿಗೆ ಬ್ಯಾಗ್ಗಳ ಅವಶ್ಯಕತೆ ಇತ್ತು. ನಮ್ಮ ಮನವಿಗೆ ಸ್ಪಂದಿಸಿ ಮಕ್ಕಳಿಗೆ ಬ್ಯಾಗ್ ನೀಡಿರುವುದು ಶ್ಲಾಘನೀಯ. ಇದೇ ರೀತಿಯಲ್ಲಿ ಉಳ್ಳವರು ಮುಂದೆ ಬಂದು ಸಹಾಯ ಮಾಡಿದರೆ ಯಾವುದೇ ಮಗು ಶಿಕ್ಷಣದಿಂದ ವಂಚಿತ ಆಗಲಾರದು ಎಂದು ಶ್ಲಾಘಿಸಿದರು.
ನಾಲ್ಕು ಚಕ್ರ ಚಾರಿಟೇಬಲ್ ಟ್ರಸ್ಟ್ ಮುಖ್ಯಸ್ಥೆ ಮಾಲಾ ಕಣ್ಣಿ, ಮುಖ್ಯಗುರುಗಳಾದ ಸಿದ್ಧರಾಮ ಮುಗಳಿ, ಸಹ ಶಿಕ್ಷಕಿಯರಾದ ವೈಷ್ಣವಿ ಬಾಬಳಗಾಂವ್, ಅನ್ನಪೂರ್ಣ ಪೂಜಾರಿ, ಚಂದಮ್ಮ ವಡಗೇರಿ, ರತಿಕಾ ನನ್ನ, ಗೋದಾವರಿ ಪೂಜಾರಿ, ವಿಜಯಲಕ್ಷ್ಮಿ, ನಾಗೇಶ ಅಳ್ಳಗಿ, ನಾಲ್ಕುಚಕ್ರ ತಂಡದ ಸದಸ್ಯರಾದ ವಿಜಯಲಕ್ಷ್ಮಿ ಹೀರೆಮಠ, ಜಯಶ್ರೀ ಜೈನ್, ಪೂರ್ಣಿಮಾ ಕುಲಕರ್ಣಿ, ಸಂಗೀತಾ ಶಿವ ಕೊರಳ್ಳಿ, ನಾಗರಾಜ ಹೆಂಬಾಡಿ, ರಾಹುಲ್ ರಾಠೊಡ್, ಆನಂದತೀರ್ಥ ಜೋಷಿ, ಸುಭಾಷ ಮೇತ್ರೆ, ಮೌನೇಶ್ ಬಡಿಗೇರ್ ಇತರರಿದ್ದರು.
ಪ್ರತಿ ವರ್ಷ ನಮ್ಮ ತಂಡದಿಂದ ಜೂನ್ ಜುಲೈ ತಿಂಗಳಲ್ಲಿ ಪುಸ್ತಕ ಅಭಿಯಾನ ಹಾಗೂ ಸ್ಕೂಲ್ ಬ್ಯಾಗ್ ಅಭಿಯಾನ ಮಾಡುತ್ತಿದ್ದೇವೆ. ಇದರಿಂದ ಬಡ ಹಾಗೂ ಗ್ರಾಮೀಣ ಭಾಗದ ಮಕ್ಕಳಿಗೆ ಬಹಳ ಅನುಕೂಲವಾಗುತ್ತಿದೆ. ಮುಂದಿನ ದಿನಗಳಲ್ಲಿ ದಾನಿಗಳ ಸಹಾಯದಿಂದ ಸರ್ಕಾರಿ ಶಾಲಾ ಕಟ್ಟಡಗಳಿಗೆ ಬಣ್ಣ ಬಳಿಯುವ ಗುರಿ ಹೊಂದಿದೆ. ದಾನಿಗಳು ಮುಂದೆ ಬಂದು ಸಹಕರಿಸಬೇಕು. | ಮಾಲಾ ಕಣ್ಣಿ ನಾಲ್ಕುಚಕ್ರ ಮುಖ್ಯಸ್ಥೆ